Mahalakshmi Maduve.News

Friday, May 29, 2026

 

ಮಧ್ಯಮ  ವರ್ಗದ ಮನೆ ಮನೆ ಕತೆ

ʻಮಹಾಲಕ್ಷ್ಮೀ ಮದುವೆʼ  

ಸನ್‌ ಉದಯ ಟಿವಿಯಲ್ಲಿ ಹೊಸ  ಧಾರಾವಾಹಿ ಜೂನ್‌ 1 ರಿಂದ

ಸೋಮವಾರದಿಂದ ಶನಿವಾರ ಸಂಜೆ 6.30 ಕ್ಕೆ

ʻಮೂಗುತಿ ಮಲ್ಲಿʼಯಂಥ ಜನಪ್ರಿಯ ಧಾರಾವಾಹಿಯನ್ನು ಕನ್ನಡಿಗರಿಗೆ ನೀಡಿದ ಸನ್‌ ಉದಯ ಟಿವಿ, ಇದೀಗ ಮಧ್ಯಮ ವರ್ಗದ ಮನೆ ಮನೆ ಕತೆಯೊಂದನ್ನು ಹೊತ್ತು ತಂದಿದೆ. ʻಮಹಾಲಕ್ಷ್ಮೀ ಮದುವೆʼ ಎಂಬ ಈ ಹೊಸ ದೈನಿಕ ಧಾರಾವಾಹಿ ಜೂನ್‌ 1 ರಿಂದ ಪ್ರಸಾರ ಕಾಣಲಿದೆ.

ಹುಡುಗ ಶ್ರೀಹರಿ ಮಧ್ಯಮ ವರ್ಗದವನು, ಹುಡುಗಿ ಮಹಾಲಕ್ಷ್ಮೀಯದೂ ಮಧ್ಯಮ ವರ್ಗವೇ. ಬ್ಯಾಂಕಲ್ಲಿ ಕೆಲಸ ಮಾಡೋ ಮಗನಿಗೆ ಒಳ್ಳೆ ವರದಕ್ಷಿಣೆ ಮತ್ತು ಒಡವೆ ತರೋ ಹುಡುಗಿ ಬರಲಿ ಎಂಬುದು ಹುಡುಗನ ಅಮ್ಮನ ಆಸೆ. ಈ ಆಸೆಗೆ ಇನ್ನೂ ಸ್ವಲ್ಪ ಕುಮ್ಮಕ್ಕು ಕೊಡೋಳು ಹುಡುಗನ ಅಕ್ಕ. ಹಾಗೆಂದು ಅವರೇನೂ ಕೆಟ್ಟವರಲ್ಲ, ʼನಮ್ ಶ್ರೀಹರಿ ಚೆನ್ನಾಗಿದ್ರೆ ನಾವೂ ಚೆನ್ನಾಗಿರ್ತೀವಿʼ ಎಂಬ ಮಹದಾಸೆ ಅವರಿಗೆ. ಆದ್ರೆ ಮಹಾಲಕ್ಷ್ಮೀ ಗಟ್ಟಿಗಿತ್ತಿ. ಅಪ್ಪನ ಆಸರೆ ಇಲ್ಲದೆ ಮನೆ ಜವಾಬ್ದಾರಿ ತಾನೇ ಹೊತ್ತುಕೊಂಡೋಳು. ತಂಗೀರನ್ನ ಓದಿಸ್ಬೇಕು, ಅಮ್ಮನಿಗೆ ಆಸರೆಯಾಗ್ಬೇಕು ಅನ್ನೋದು ಆಕೆಯ ಉದ್ದೇಶ. ಹಾಗಾಗಿ ಮದುವೆ ಆದ್ರೂ ಸಂಬಳಾನ ಅಮ್ಮನಿಗೆ ಕೊಡ್ತೀನಿ ಅನ್ನೋದು ಆಕೆಯ ಷರತ್ತು. ಸಾವಿರ ಸುಳ್ಳು ಇಲ್ಲ, ಒಂದೇ ಒಂದು ಸುಳ್ಳಿನ ಮೂಲಕ ನಡೆಯೋ ಶ್ರೀಹರಿ ಮತ್ತು ಮಹಾಲಕ್ಷ್ಮೀ ಮದುವೆ ಯಾವ ರೀತಿ ಮುಂದೆ ಸಾಗುತ್ತೆ ಅನ್ನೋದೆ ಈ ಧಾರಾವಾಹಿಯ ಕತೆ.

ಮಹಾಲಕ್ಷ್ಮೀ ಪಾತ್ರದಲ್ಲಿ ಹೆಸರಾಂತ ನಟಿ ಅಮೂಲ್ಯ ಗೌಡ ಕಾಣಿಸಿಕೊಳ್ಳಲಿದ್ದಾರೆ. ನಾಯಕನಾಗಿ ಭರತ್‌ ಶಿವಣ್ಣ ಟೀವಿ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. 

ಶಿವಾಜಿರಾವ್‌ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಕಾಮಿಡಿ ನಟರಾದ ಮಂಜು ಪಾವಗಡ ಮತ್ತು ಮಾನಸ, ಮೇಘಶ್ರೀ, ಸ್ನೇಹಾ ಭಟ್‌, ‌ ಪ್ರತೀಕ್ಷಾ, ಧನುಷ್‌ ಗೌಡ, ಹರಿಪ್ರಿಯಾ, ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿಯ ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಲೈಮ್‌ಲೈಟ್ ಪ್ರೊಡಕ್ಷನ್ಸ್‌ ಮುಖಾಂತರ ನೀರ್ಮಾಣಗೊಳ್ಳುತ್ತಿರುವ ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿಗೆ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ  ನೀರ್ಮಾಪಕರು. ಪಾಪಾ ಔಟ್‌ಡೋರ್‌ ಯೂನಿಟ್‌ನ ಗಾಯತ್ರಿ ಸೆಲ್ವಂ ಈ ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರು.

ಶಿವು ಪೂಜೇನ ಅಗ್ರಹಾರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಯೋಗೇಶ್ ಗೌಡ ಅವರದು.

ಸನ್‌ಉದಯ ಟಿವಿ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’ ಜೂನ್ 1 ರಿಂದ ಸೋಮವಾರದಿಂದ ಶನಿವಾರದ ತನಕ ಸಂಜೆ 6.30ಕ್ಕೆ ಪ್ರಸಾರವಾಗಲಿದೆ

 

Copyright@2018 Chitralahari | All Rights Reserved. Photo Journalist K.S. Mokshendra,