Bombat Bhojana Season 6.News

Friday, October 24, 2025

 

*ಇದೇ ಸೋಮವಾರದಿಂದ(ಅಕ್ಟೋಬರ್ 27) ಸಿಹಿಕಹಿ ಚಂದ್ರು ಅವರ "ಬೊಂಬಾಟ್ ಭೋಜನ ಸೀಸನ್ 6" ಆರಂಭ* .

 

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ಅಡುಗೆ ಶೋ ಅಂದ್ರೆ ಅದು ಸ್ಟಾರ್ ಸುವರ್ಣ ವಾಹಿನಿಯ ’ಬೊಂಬಾಟ್ ಭೋಜನ’. 1500ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 6ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ಸೋಮವಾರ ಅಕ್ಟೋಬರ್ 27 ರಿಂದ ಮಧ್ಯಾಹ್ನ12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಸಾಹಿತಿ M.S.ನರಸಿಂಹ ಮೂರ್ತಿ, ಡಾ||ಗೌರಿ ಸುಬ್ರಹ್ಮಣ್ಯ ಹಾಗೂ ಸ್ಟಾರ್ ಸುವರ್ಣ ವಾಹಿನಿಯ ಬ್ಯುಸಿನೆಸ್ ಹೆಡ್ ರಾಜ್ ನಿಗಮ್ ಮುಂತಾದವರು ಉಪಸ್ಥಿತರಿದ್ದರು.

 

ನಿಮ್ಮೆಲ್ಲರ ಪ್ರೋತ್ಸಾಹದಿಂದ ನಮ್ಮ ಜನಪ್ರಿಯ ’ಬೊಂಬಾಟ್ ಭೋಜನ" ಕಾರ್ಯಕ್ರಮ ಯಶಸ್ವಿ 5 ವರ್ಷಗಳನ್ನು ಪೂರೈಸಿ 6 ನೇ ವರ್ಷಕ್ಕೆ ಅಡಿಯಿಡುತ್ತಿದೆ. ಇದೇ ಅಕ್ಟೋಬರ್ 27 ರ ಸೋಮವಾರದಿಂದ "ಬೊಂಬಾಟ್ ಭೋಜನ ಸೀಸನ್ 6'' ಆರಂಭವಾಗಲಿದೆ‌.  ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಅಡುಗೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರ  1500 ಕಂತುಗಳನ್ನು ಒಬ್ಬ ವ್ಯಕ್ತಿಯೇ ನಿರೂಪಣೆ ಮಾಡಿರುವುದು ಇದೇ ಮೊದಲು. ಸಿಗಂಧೂರು ಶ್ರೀಚೌಡೇಶ್ವರಿ ಆಶೀರ್ವಾದ ಪಡೆದುಕೊಂಡು ಬಂದು ಸೀಸನ್ 6 ಶುರು ಮಾಡಿದ್ದೇನೆ.  "ಜನರಿಂದ, ಜನರಿಗಾಗಿ, ಜನರಿಗೋಸ್ಕರ" ಅನ್ನೋ ಟ್ಯಾಗ್ ಲೈನ್ ಇರುವ ಈ ಸೀಸನ್ ನ ಪ್ರತಿಯೊಂದು ಸೆಗ್ಮೆಂಟ್ ನಲ್ಲೂ ಜನರು ಇರುತ್ತಾರೆ. ಅಭಿಮಾನಿ ದೇವರುಗಳು ಇರುತ್ತಾರೆ. ಒಟ್ಟಿನಲ್ಲಿ ಈ ಸೀಸನ್ ಜನರಿಗೋಸ್ಕರ ಅರ್ಪಣೆ ಮಾಡಲಾಗುತ್ತಿದೆ. ಜೊತೆಗೆ ಈ ಸೀಸನ್ ಅಲ್ಲಿ ಏನೆಲ್ಲಾ ಇರುತ್ತದೆ ಎಂದು ಹೇಳೋದಾದ್ರೆ, 1) ವಿಶೇಷ ಭೋಜನ ರುಚಿ-ರುಚಿಯಾದ ಅಡುಗೆಯನ್ನು ತಿಳಿಸುವುದು. ಜೊತೆಗೆ ಪತ್ರ ಹಾಗು ಕರೆಯ ಮೂಲಕ ಬಂದಿರುವ ಅಭಿಮಾನಿಗಳ ಅಡುಗೆ ಕೋರಿಕೆಯನ್ನು ಈಡೇರಿಸಲಾಗುತ್ತದೆ. 2)ಆರೋಗ್ಯ ಭೋಜನ -  ಡಾ|| ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.3) ಸ್ಪೆಷಲ್ ಭೋಜನ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ  ಹೋಗಿ ಅಲ್ಲಿನ ಜನರೊಂದಿಗೆ ಬೆರೆತು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುವುದು. 

4) ಹಿತ ಭೋಜನ : ಜನಸಾಮಾನ್ಯರು / ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು. 5)ಭೂರಿ ಭೋಜನ : ಕರ್ನಾಟಕದಾದ್ಯಂತ ಚಲಿಸಿ, ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು. 6)ಸಹ ಭೋಜನ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು, ಕೈತುತ್ತನ್ನು ನೀಡಿ ಅವರೊಂದಿಗೆ ಮಾತುಕತೆ ನಡೆಸುವುದು. ಜೊತೆಗೆ ಸ್ಥಳದಲ್ಲೇ ಫೋಟೋ ತೆಗೆದು ಸರ್ಟಿಫಿಕೇಟ್ ನೀಡಲಾಗುವುದು.

7)ಗೃಹ ಭೋಜನ: ಜಿಲ್ಲೆಯಾದ್ಯಂತ ಸಂಚರಿಸುತ್ತಾ, ವೀಕ್ಷಕರ ಮನೆಗಳಿಗೆ ಹೋಗಿ ನನ್ನ ಕೈಯಾರೆ ಮಾಡಿದ ರುಚಿಯಾದ ಅಡುಗೆ ಉಣಬಡಿಸೋದು ಹಾಗು ತೆರಳಿದ ಮನೆಯಲ್ಲಿ ದೇವಿ ಸದಾ ನೆಲೆಸಲೆಂದು ಮನೆ ಮಂದಿಗೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ದೈವಾನುಗ್ರಹಗೊಂಡ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು.8) ಬಾಲ ಭೋಜನ : ಇದು ಪ್ರತೀ ಶುಕ್ರವಾರದಂದು ಮಕ್ಕಳಿಗಾಗಿ ಮಾಡಿರೋ ಹೊಸ ವಿಭಾಗ. ಮಕ್ಕಳ ಜೊತೆ ಪೋಷಕರು ಭಾಗಿಯಾಗಿ ರುಚಿ-ರುಚಿಯಾದ ಅಡುಗೆ ಹೇಳಿ ಕೊಡಲಾಗುತ್ತದೆ.

ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನ್ನೋ ಅನುಭವ ಕೊಡಲು ’ಸಿಹಿ-ಸಹಿ’ ಎಂಬ ಬೋರ್ಡ್ ಇರಿಸಲಾಗಿದೆ.‌ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದರು ಸಿಹಿಕಹಿ ಚಂದ್ರು.

 

ಬರೀ ಇಲ್ಲಿ ಅಷ್ಟೇ ಅಲ್ಲ. ವಿದೇಶಗಳಲ್ಲೂ ಚಂದ್ರು ಅವರ ಅಡುಗೆ ಬಹಳ ಫೇಮಸ್. ನಾನು ಇದನ್ನು ಕಣ್ಣಾರೆ ನೋಡಿದ್ದೇನೆ. ನನ್ನ ಹೆಂಡತಿ ಕೂಡ ಚಂದ್ರು ಅವರು ಹೇಳಿ ಕೊಡುವ ಹೊಸ ಅಡುಗೆಗಳನ್ನು ಮಾಡುತ್ತಿರುತ್ತಾರೆ. ಅಡುಗೆ ಕಾರ್ಯಕ್ರಮವೊಂದು ಇಷ್ಟು ಜನಪ್ರಿಯ ವಾಗಿರುವುದಕ್ಕೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ಸಾಹಿತಿ ಎಂ.ಎಸ್ ನರಸಿಂಹಮೂರ್ತಿ.

 

ಚಂದ್ರು ಅವರ ಕೈಯಲ್ಲಿ ಅಡುಗೆ ಚೆನ್ನಾಗಿ ಬರಲು ಕಾರಣ, ಅವರು ಸದಾ ಸಂತೋಷದಿಂದ ಅಡುಗೆ ಮಾಡುವುದು. ಅವರಿಗಿರುವ ಉತ್ಸಾಹ ನಿಜಕ್ಕೂ ಹೆಮ್ಮೆ ಪಡುವಂತದು ಎಂದು ಡಾ||ಗೌರಿ ಸುಬ್ರಹ್ಮಣ್ಯ ತಿಳಿಸಿದರು.

 

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರ ಪ್ರತಿಯೊಬ್ಬರಿಗೂ ಸಿಹಿಕಹಿ ಗೀತಾ ತಿಳಿಸಿದರು. ಇದೇ ಸಂದರ್ಭದಲ್ಲಿ "ಬೊಂಬಾಟ್ ಭೋಜನ"ದ ಪುಸ್ತಕ ಸಹ ಬಿಡುಗಡೆಯಾಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,