Kwatle Kitchen.News

Friday, June 13, 2025

48

 

ಕಲರ್ಸ್ ಕನ್ನಡದಲ್ಲಿ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ’ಕ್ವಾಟ್ಲೆ ಕಿಚನ್’ ಆರಂಭ 

 

ಕಲರ್ಸ್ ಕನ್ನಡ, ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಇದೀಗ ’ಕ್ವಾಟ್ಲೆ ಕಿಚನ್” ಎಂಬ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ಅನ್ನು  ಪ್ರೇಕ್ಷಕರಿಗೆ ತಲುಪಿಸುತ್ತಿದೆ. ‘ನನ್ನಮ್ಮ ಸೂಪರ್‌ ಸ್ಟಾರ್‌ʼ, ʼರಾಜ ರಾಣಿʼ, ʼಗಿಚ್ಚಿ ಗಿಲಿಗಿಲಿʼಗಳಂಥ ಟಾಪ್ ರೇಟಿಂಗ್ ಶೋಗಳನ್ನು ಕೊಟ್ಟಿರುವ ಕಲರ್ಸ್ ಕನ್ನಡವು, ”ಕ್ವಾಟ್ಲೆ ಕಿಚನ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸುತ್ತಿದೆ. ಜೂನ್‌ 14ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

 

ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ ’ಕ್ವಾಟ್ಲೆ ಕಿಚನ್’].

 

ಅಡುಗೆಯ ಜೊತೆ ನಗುವಿನ ಔತಣವನ್ನೂ ಉಣಬಡಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಜೋಡಿಗಳ ಜೊತೆಯಾಟವಿರುತ್ತದೆ. ಈ ಜೋಡಿಯಲ್ಲಿ  ಒಬ್ಬರಿಗೆ ಅಡುಗೆ ಬರುತ್ತೆ. ಇನ್ನೊಬ್ಬರಿಗೆ ಪಾಕಶಾಸ್ತ್ರದ ಅ ಆ ಇ ಈ ಕೂಡಾ ತಿಳಿದಿಲ್ಲ. ಐವರು ನಳಪಾಕ ಪ್ರವೀಣರಿಗೆ ಸಹಾಯಕರಾಗಿ ಮತ್ತೈದು ನಗೆಪಾಕ ಪ್ರವೀಣರು ಇರತ್ತಾರೆ. ʼಕುಕ್ʼ ಮತ್ತು ’ ’ಕ್ವಾಟ್ಲೆ’ಗಳು’ ಸೇರಿ ಅಡುಗೆ ಮಾಡುವಾಗ ಹುಟ್ಟುವ ತಮಾಷೆ, ತರ್ಲೆಗಳೇ ಈ ಶೋನ ಬ್ಯೂಟಿ. ಚಕಚಕ ಅಡುಗೆ ಮಾಡಿ ಮುಗಿಸಲು ಹೊರಟ ಪಾಕಪ್ರವೀಣರಿಗೆ ಅಡ್ಡಗಾಲಾಗಿ ನಿಲ್ಲುವುದೇ ಈ ʼಕ್ವಾಟ್ಲೆʼ ಸಹಾಯಕರು. ಟಾರ್ಚರ್‌ ಕೊಡಲಿಕ್ಕೆಂದೇ ಬಂದಿರುವ ಕ್ವಾಟ್ಲೆಗಳು ಸ್ವತಃ ಜೋಕರ್‌ಗಳಾಗುವ ಪರಿಹಾಸ್ಯವನ್ನು ನೋಡಿಯೇ ಆನಂದಿಸಬೇಕು.

ಈ ಶೋ ನ ವಿಶೇಷತೆ ಏನೆಂದರೆ - ಇಲ್ಲಿ ಕುಕ್‌ಗಳು ಎಲಿಮಿನೇಟ್ ಆಗುತ್ತಾರೆ. ಕ್ವಾಟ್ಲೆಗಳು ಮಾತ್ರ ಎಲಿಮಿನೇಟ್ ಆಗೋದಿಲ್ಲ! ಪ್ರತಿ ವಾರವೂ ಕುಕ್‌-ಕ್ವಾಟ್ಲೆಗಳ ಜೋಡಿ ಬದಲಾಗುತ್ತಿರುತ್ತದೆ. ಒಳ್ಳೆ ಸಹಾಯಕ ಬರಲಿ ಎಂದು ಕಾಯುತ್ತಿರುವ ಕುಕ್‌ಗಳಿಗೆ, ಬೆಳ್ಳುಳ್ಳಿ ಈರುಳ್ಳಿಯ ನಡುವೆ ವ್ಯತ್ಯಾಸವೇ ಗೊತ್ತಿರದ ʼಕ್ವಾಟ್ಲೆʼ ಸಹಾಯಕರು ಸಿಕ್ಕು, ಉಂಟಾಗುವ ಪಜೀತಿ ನೋಡುಗರಿಗಂತೂ ಭರಫೂರ ಮನರಂಜನೆ ನೀಡುತ್ತದೆ!

 

ಕುಕ್‌ಗಳಾಗಿ  - ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್ ಕೆ ಚಂದನ್, ದಿಲೀಪ್ ಶೆಟ್ಟಿ, ರಾಘವೇಂದ್ರ, ಕೆಂಪಮ್ಮ, ಪ್ರೇರಣ ಕಂಬಮ್, ಕಾವ್ಯ ಗೌಡ, ಶಿಲ್ಪ ಕಾಮತ್, ಶರ್ಮಿತ ಗೌಡ, ಸೋನಿಯಾ ಪೊನ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇವರಿಗೆ  ಕ್ವಾಟ್ಲೆ ಕೊಡುವುದಕ್ಕೆಂದೇ ಲ್ಯಾಗ್ ಮಂಜು, ಧನರಾಜ್ ಆಚಾರ್, ತುಕಾಲಿ ಸಂತೋಷ್, ನಿವೇದಿತಾ ಗೌಡ, ಪ್ರಶಾಂತ್, ಸೂರಜ್, ಗಿಲ್ಲಿ ನಟ, ಸೋನಿ ಮುಲೆವ, ವಾಣಿ ಗೌಡ, ದೀಶಾ ಉಮೇಶ್ ಕಾರ್ಯಕ್ರಮದಲ್ಲಿ ಇರುತ್ತಾರೆ.

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಶನ್ ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇರುವುದು  ’ಕ್ವಾಟ್ಲೆ ಕಿಚನ್’ ಗೆ ಹೊಸ ಕಳೆಯನ್ನು ತರಲಿದೆ.

ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ.

ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ ’ಕ್ವಾಟ್ಲೆ ಕಿಚನ್’, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ.

ಪ್ರತಿ ಶನಿವಾರ, ಭಾನುವಾರ ಕಲರ್ಸ್ ಕನ್ನಡದಲ್ಲಿ ಸಂಜೆ 9 ಗಂಟೆಗೆ ಪ್ರಸಾರ ಆಗಲಿರುವ ಒಂದೂವರೆ ಗಂಟೆಯ ”ಕ್ವಾಟ್ಲೆ ಕಿಚನ್’ ನ ಮೊದಲ ಎಪಿಸೋಡ್‌ಗಳು ಜೂನ್ 14, 15 (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಗೆ  ಪ್ರಸಾರ ಆಗಲಿದೆ. ನೋಡುವುದನ್ನು ಮರೆಯಬೇಡಿ.

 

Copyright@2018 Chitralahari | All Rights Reserved. Photo Journalist K.S. Mokshendra,