ಚಿತ್ರ: ಲಕ್ಷ್ಮೀಪುತ್ರ LAKSHMI PUTHRA 4/5 STAR RATING****
ನಿರ್ದೇಶನ: ವಿಜಯ್ ಸ್ವಾಮಿ
ನಿರ್ಮಾಣ: ಅನ್ನಪೂರ್ಣ ಅರ್ಜುನ್
ತಾರಾಗಣ: ಚಿಕ್ಕಣ್ಣ, ವಂದಿತಾ ಗೌಡ, ತಾರಾ ಅನುರಾಧ ಮೊದಲಾದವರು.
ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ. ಆದರೆ ಈ ಹಳ್ಳಿ ಹುಡುಗ ಕೃಷ್ಣನಿಗೆ ಪ್ರೇಮಿಸಿಯೇ ಮದುವೆಯಾಗುವ ಕನಸು. ಆತನ ತಾಯಿ ಕೂಡ ಅಷ್ಟೇ. ಸುಂದರವಾದ ಹುಡುಗಿಯೊಬ್ಬಳನ್ನೇ ಮಗನಿಗೆ ಜೋಡಿ ಮಾಡುವ ಆಸೆ. ಆದರೆ ಅವರಿಬ್ಬರ ಪ್ರಯತ್ನಕ್ಕೂ ಫಲವೇ ಸಿಕ್ಕಿರುವುದಿಲ್ಲ. ಇಂಥ ಸಂದರ್ಭದಲ್ಲೇ ಕೃಷ್ಣನಿಗೆ ಒಬ್ಬಳು ಪ್ರೇಯಸಿ ಸಿಗುತ್ತಾಳೆ. ಕೃಷ್ಣ ಪ್ರೇಮಲೋಕದಲ್ಲಿ ತೇಲಾಡುತ್ತಾನೆ. ಆದರೆ ಆಕೆಯ ಮನದಾಳ ಅರಿತಾಗ ಆ ದಾಳದಿಂದ ತಪ್ಪಿಸಲು ತಿಣುಕಾಡುತ್ತಾನೆ. ಪ್ರೇಯಸಿ ಕೊಡುವ ಆಘಾತವೇನು? ಮಮತೆಯ ಮಡಿಲಿನ
ವಾತ್ಸಲ್ಯವೇನು? ಇಂಥದೊಂದು ಕಥೆಗೆ ನಿರ್ದೇಶಕರು ನೀಡಿದ ಪರಿಹಾರವೇನು? ಎಲ್ಲವನ್ನು ಲಕ್ಷ್ಮೀಪುತ್ರದಲ್ಲಿ ಆಕರ್ಷಕವಾಗಿ ಕಟ್ಟಿಕೊಡಲಾಗಿದೆ.
ಚಿಕ್ಕಣ್ಣ ಕೃಷ್ಣನ ಪಾತ್ರಕ್ಕೆ ನ್ಯಾಯ ಒದಗಿಸುವಂಥ ನಟನೆಯನ್ನು ನೀಡಿದ್ದಾರೆ. ಹಾಸ್ಯವನ್ನು ಮಾತ್ರ ನಿರೀಕ್ಷಿಸಿ ಬರುವ ಪ್ರೇಕ್ಷಕರಿಗೆ ವೈವಿಧ್ಯಮಯ ನವರಸವನ್ನೂ ನೀಡಿ ಅಚ್ಚರಿಗೊಳಿಸಿದ್ದಾರೆ ಚಿಕ್ಕಣ್ಣ. ಮಧ್ಯಂತರದ ತನಕ ಹಾಸ್ಯ ಪ್ರೇಮಿಗಳಿಗೆ ಹಬ್ಬ. ಅದರ ಬಳಿಕ ಕಥೆಯನ್ನು ಇಷ್ಟಪಡುವ ಪ್ರೇಕ್ಷಕರಿಗೆ ಅದ್ಭುತವಾದ ತಿರುವುಗಳಿಂದ ಕೂಡಿದ ದೃಶ್ಯಗಳಿವೆ. ಚಿಕ್ಕಣ್ಣ ಇಷ್ಟು ವಿಭಿನ್ನವಾಗಿ ಕೂಡ ನಟಿಸಬಲ್ಲರು ಎನ್ನುವುದನ್ನು ಈ ಚಿತ್ರ ಸಾಬೀತು ಮಾಡಿದೆ. ಮಾತ್ರವಲ್ಲ, ಒಬ್ಬ ಸ್ಟಾರ್ ನಾಯಕನಿಗೆ ಇರಬೇಕಾದ ಎಲ್ಲ ಅಂಶಗಳನ್ನು ಒಳಗೊಂಡಿರುವ ಕಲಾವಿದ ಎಂಬ ಭರವಸೆಯನ್ನು ತುಂಬುವಲ್ಲಿ ಚಿಕ್ಕಣ್ಣ ಯಶಸ್ವಿಯಾಗಿದ್ದಾರೆ.
ಕೃಷ್ಣನ ಪ್ರೀತಿಯ ಹುಡುಗಿಯ ಹೆಸರು ಗೌರಿ. ಈ ಗೌರಿ ಪಾತ್ರಕ್ಕೆ ಜೀವ ನೀಡಿರುವ ಕಲಾವಿದೆ ವಂದಿತಾ ಗೌಡ. ವಂದಿತಾ ನಟನೆ ಕೂಡ ಪ್ರೇಕ್ಷಕರಿಗೆ ಇಷ್ಟವಾಗುವುದು ಖಂಡಿತಾ. ಹೇಳಿ ಕೇಳಿ ಇದು ತಾಯಿ ಮಗನ ಕಥೆ. ಸಣ್ಣದೊಂದು ಪಾತ್ರ ಸಿಕ್ಕರೂ ಕೂಡ ಅದರ ಮೂಲಕವೇ ಗಮನ ಸೆಳೆಯುವ ನಟಿ ತಾರಾ ಅನುರಾಧ. ಅಂಥವರು ತಾಯಿಗೆ ಪ್ರಾಧಾನ್ಯತೆ ಇರುವ ಪಾತ್ರ ದೊರಕಿದ ಮೇಲೆ ಕೇಳಬೇಕೇ? ಸಿನೆಮಾ ನೋಡುವ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ದೃಶ್ಯದಲ್ಲಿ ತಮ್ಮ ತಾಯಿಯನ್ನು ನೆನಪಿಸಿಕೊಳ್ಳುವಂತೆ ನಟಿಸಿದ್ದಾರೆ. ಮಾಮೂಲಿ ತಾಯಿಮಗನ ಸೆಂಟಿಮೆಂಟ್ ಚಿತ್ರ ಎಂದುಕೊಂಡವರಿಗೆ ಅನಿರೀಕ್ಷಿತಗಳ ಆಗಮನವಾಗಿದೆ.
ಲಕ್ಷ್ಮೀಪುತ್ರದಲ್ಲಿ ಲಕ್ಷ್ಮೀ ಪಟಾಕಿಗಳಂತೆ ಹಾಸ್ಯದ ರಸಮಳೆಯಿದೆ. ಚಿಕ್ಕಣ್ಣನ ಹಾಸ್ಯ ಒಂದು ಕಡೆಯಾದರೆ ಜನಪ್ರಿಯ ಕಾಮಿಡಿ ಕಲಾವಿದರಾದ ಕುರಿ ಪ್ರತಾಪ್, ಧರ್ಮಣ್ಣ, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಹೀಗೆ ಒಂದು ದೊಡ್ಡ ದಂಡೇ ಇಲ್ಲಿದೆ. ಯಾರೊಬ್ಬರು ಕೂಡ ನಿರಾಸೆ ಮೂಡಿಸುವುದಿಲ್ಲ. ಪ್ರತಿಯೊಂದು ವಿಭಾಗದ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕರ ಪ್ರಯತ್ನ ಸಂಪೂರ್ಣವಾಗಿ ಸಫಲವಾಗಿದೆ.