ರಿಯಾಲಿಟಿ ಅರಿಯಲು ’ರಿಲ್ಯಾಕ್ಸ್’ ನೋಡಿ!
ಚಿತ್ರ: ರಿಲ್ಯಾಕ್ಸ್ RELAX 4/5 STAR RATING****
ನಿರ್ದೇಶನ: ಶ್ರೀನಿವಾಸ ಮಂಡ್ಯ
ನಿರ್ಮಾಣ: ಎ.ಎಮ್.ಎಮ್ ಕೃಷ್ಣ
ತಾರಾಗಣ: ಕೋಮಲ್, ಸೊನಾಲ್ ಮೊಂಟೆರೊ, ವಿನೋದ್ ಪ್ರಭಾಕರ್ ಮೊದಲಾದವರು.
ಇದು ಒಂದು ಅಪಹರಣ ಪ್ರಕರಣದ ಸುತ್ತಲೂ ನಡೆಯುವ ಕಥೆ. ಕ್ಷಮಿಸಿ ಒಂದು ಅಪಹರಣವಲ್ಲ. ಎರಡು ಅಪಹರಣಗಳ ಕಥೆ! ಆದರೆ ಇಬ್ಬರು ಅಪಹೃತರು ಕೂಡ ಒಂದೇ ಮನೆಯಲ್ಲೇ ಇರುತ್ತಾರೆ. ಯುವತಿಯದ್ದು ನಿಜವಾದ ಅಪಹರಣ ಎನ್ನಬಹುದಾದರೆ, ಕಥಾನಾಯಕ ಪರಿಸ್ಥಿತಿಯ ಕೈಗೊಂಬೆಯಾಗಿ ಸಿಲುಕಿಕೊಂಡಾತ.
ಇವೆಲ್ಲಕ್ಕಿಂತ ಟ್ವಿಸ್ಟ್ ಏನೆಂದರೆ ಅಪಹರಣಗೊಂಡ ಯುವತಿಯು ಮನೆಯಲ್ಲಿರುವ ಕಥಾ ನಾಯಕನೇ ತನ್ನನ್ನು ಅಪಹರಿಸಿದ್ದಾನೆ ಎಂದುಕೊಂಡಿರುತ್ತಾಳೆ. ಹಾಗಾದರೆ ಈ ಅಪಹರಣ ಮಾಡಿದ್ದು ಯಾರು? ಅದರ ಹಿಂದಿನ ಉದ್ದೇಶ ಏನು? ಎನ್ನುವ ರಿಯಲ್ ಪಿಕ್ಚರ್ ಅರಿವಾಗಬೇಕಾದರೆ ನೀವು ರಿಲ್ಯಾಕ್ಸ್ ಚಿತ್ರ ನೋಡಬೇಕು.
ಕಥಾ ನಾಯಕ ಅಲೆಕ್ಸ್ ಪಾತ್ರವನ್ನು ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್ ನಿಭಾಯಿಸಿದ್ದಾರೆ. ಕೋಮಲ್ ಅವರ ಅಭಿನಯ ಎಂದರೆ ಅದರಲ್ಲಿ ಪ್ರೇಕ್ಷಕರಿಗೆ ಖಂಡಿತವಾಗಿ ಹಾಸ್ಯದ ನಿರೀಕ್ಷೆ ಇದೇ ರು ಇರುತ್ತದೆ. ಅಂಥ ಹಾಸ್ಯದ ಜತೆಯಲ್ಲೇ ಒಂದೊಳ್ಳೆಯ ಪ್ರೇಮಕಥೆಯೊಂದಿಗೆ ಬಂದಿದ್ದಾರೆ ಕೋಮಲ್. ಅಲೆಕ್ಸ್ ಪಾತ್ರದಲ್ಲಿನ ಕೋಮಲ್ ಅವರ ಅಭಿನಯ ನಿಜಕ್ಕೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುತ್ತದೆ. ಯಾವ ತಪ್ಪು ಮಾಡದೆ ಕಥಾ ನಾಯಕಿಯಿಂದ ಬೈಸಿಕೊಂಡು ಆಕೆಯ ಸೇವೆ ಮಾಡಬೇಕಾಗುತ್ತದೆ. ಈ ದೃಶ್ಯಗಳಲ್ಲಿ ಕೋಮಲ್ ಪೇಚಾಡುವಾಗ ಪ್ರೇಕ್ಷಕ ನಗೆಗಡಲಲ್ಲಿ ಹೊರಳಾಡುತ್ತಾನೆ.
ಅಪಹರಣಕ್ಕೊಳಗಾಗುವ ಯುವತಿಯಾಗಿ, ಕಥಾ ನಾಯಕಿ ಐಶ್ವರ್ಯ ಪಾತ್ರವನ್ನು ನಿಭಾಯಿಸಿದವರು ಸೊನಾಲ್ ಮೊಂಟೆರೊ. ಐಶ್ವರ್ಯ ಎನ್ನುವ ಹೆಸರಿಗೆ ತಕ್ಕಂತೆ ಸಿರಿವಂತೆಯ ಪಾತ್ರ ಅದು. ದನವಂತೆಯ ದರ್ಪ ತೋರುವ ಪಾತ್ರ ಸೊನಾಲ್ ಅವರಿಗೆ ಚೆನ್ನಾಗಿ ಹೊಂದಿಕೊಂಡಂತೆ ಕಾಣಿಸುತ್ತದೆ. ಮತ್ತೊಂದೆಡೆ ಪ್ರಾಮಾಣಿಕ ಬಡವನಾಗಿ ಕೋಮಲ್ ಕೂಡ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆಯುತ್ತಾರೆ.
ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದವರು ವಿನೋದ್ ಪ್ರಭಾಕರ್. ಇವರ ಪಾತ್ರದ ಹೆಸರು ರಿಷಿ ಎಂದು. ಆದರೆ ಇದು ಒಂದು ಸಸ್ಪೆನ್ಸ್ ಪಾತ್ರವಾಗಿರುವ ಕಾರಣ, ಈ ಕ್ಯಾರೆಕ್ಟರ್ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಿಲ್ಲ. ಆದರೆ ತಾವು ಕಾಣಿಸಿಕೊಂಡಿರುವ ಪ್ರತಿ ಪ್ರೇಮ್ ನಲ್ಲಿಯೂ ಆಕರ್ಷಕ ನಟನೆ ನೀಡುವಲ್ಲಿ ವಿನೋದ್ ಪ್ರಭಾಕರ್ ಗೆದ್ದಿದ್ದಾರೆ ಎಂದೇ ಹೇಳಬಹುದು.
ರಿಲ್ಯಾಕ್ಸ್ ಚಿತ್ರವನ್ನು ನಿರ್ಮಿಸಿರುವ ಮಧುಮೋಹನ್ ಕೃಷ್ಣ ಅವರು ಕೂಡ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರುಣಾ ಬಾಲರಾಜ್ ಎಂದಿನ ಹಾಗೆ ತಮ್ಮ ಸಹಜವಾದ ನಟನೆಯಿಂದ ಗಮನ ಸೆಳೆಯುತ್ತಾರೆ. ಅರವಿಂದ್ ರಾವ್ ನಿಭಾಯಿಸಿರುವ ಪಾತ್ರ ಕೂಡ ಗಮನಾರ್ಹವಾಗಿದೆ.
ಅಪಹರಣದ ಲೋಕ ಎಂದರೆ ಅಲ್ಲಿ ಆತಂಕ ತುಂಬಿರುತ್ತದೆ. ತುಂಬಿರುತ್ತದೆ. ಆದರೆ ಅಂಥ ವಾತಾವರಣವನ್ನು ರಿಲಾಕ್ಸ್ ಮಾಡಿಕೊಂಡು ನೋಡುವಂತೆ ಚಿತ್ರ ಮಾಡಿದ್ದಾರೆ. ಜಸ್ಸಿಗಿಫ್ಟ್ ಸಂಗೀತ ಇದಕ್ಕೆ ಪೂರಕವಾಗಿದೆ. ಹಾಡುಗಳು ಕೂಡ ಮನಮೋಹಕ. ಯುವಕ, ಯುವತಿಯನ್ನು ದಾಳವಾಗಿಸಿರುವ ನಡೆಸುವ ಚದುರಂಗದಾಟವೇ ರಿಲ್ಯಾಕ್ಸ್.