Bail.Film Reviews

Friday, October 02, 2026

 

ಬೇಲ್ ಪಡೆದರೆ ಖೇಲ್ ಖತಂ..!

 

ಚಿತ್ರ: ಬೇಲ್

ನಿರ್ದೇಶನ: ಪವನ್ ಒಡೆಯರ್

ನಿರ್ಮಾಣ: ಕೆ.ವಿ.ಎನ್

ತಾರಾಗಣ: ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಮ್ ಮೊದಲಾದವರು.

 

 

ಎಂಥ ಅಪರಾಧಿಯಾದರೂ ಒಮ್ಮೆ ಬೇಲ್ ಸಿಕ್ಕರೆ ಸಾಕು ಎಂದುಕೊಳ್ಳುತ್ತಿರುತ್ತಾರೆ. ಆದರೆ ಇಲ್ಲಿ ಬೇಲ್ ತೆಗೆದುಕೊಳ್ಳುವುದಕ್ಕೇನೇ ಭಯ ಪಡುವ ವಾತಾವರಣ‌. ಅಪರಾಧ ಮಾಡಿ ಜೈಲು ಸೇರಿದವರು ಕಾನೂನಿನ ಲೋಪ ಬಳಸಿ ಹೊರಬರುವುದನ್ನು ತಡೆಯಲು ಕಥಾ ನಾಯಕ ಕೈಗೊಳ್ಳುವ ಕ್ರಮವೇ ಅಂಥದ್ದು.

 

 

ನಿವೃತ್ತ ಪೊಲೀಸ್ ಅಧಿಕಾರಿ ವಿಜಯ್ ಅಡಗಿ ನಿಂತು ಪಾತಕಿಗಳನ್ನು ಕೊಲೆಗೈಯುತ್ತಾನೆ. ಒಂದೊಂದು‌ ಕೊಲೆಯೂ ಒಂದೊಂದು ರೀತಿ. ಅದಕ್ಕೆ ಇಬ್ಬರು ಸ್ನೇಹಿತರ ಸಹಾಯ. ಒಬ್ಬಾತ ನಿವೃತ್ತ ವಿಜ್ಞಾನಿ.‌ ಮತ್ತೋರ್ವ ನಿವೃತ್ತ ನ್ಯಾಯಾಧೀಶ. ‌ಆದರೆ ಇವರಿಬ್ಬರೂ ವಿಜಯ್ ತನ್ನ ಕಾರ್ಯದಲ್ಲಿ ವಿಜಯಿಯಾಗಲು ಸಾಥ್ ನೀಡುತ್ತಾರೆ.

 

ವಿಜಯ್ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಹಿರಿಯ ವಯಸ್ಸಿನ ಪಾತ್ರದಲ್ಲಿ ಕಾಣಿಸಿರುವ ಶಿವಣ್ಣ ಒಂದು ಫ್ಲ್ಯಾಶ್‌‌‌ ಬ್ಯಾಕ್ ಹಾಡಿನಲ್ಲಿ ಯುವಕನಾಗಿಯೂ ಮಿಂಚಿದ್ದಾರೆ.

 

ಶಿವಣ್ಣನಿಗೆ ಜೋಡಿಯಾಗಿ ತಮಿಳು ನಟಿ ಸಂಗೀತಾ ಕಾಣಿಸಿಕೊಂಡಿದ್ದಾರೆ. ಪತ್ನಿಯಾಗಿ ಪತಿಯನ್ನು ಬಿಗಿಮುಷ್ಟಿಯಲ್ಲಿಡುವ ಪತ್ನಿಯ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಪುತ್ರಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ.

 

ನಿವೃತ್ತ ನ್ಯಾಯಾಧೀಶ ಅಲಿ ಪಾತ್ರವನ್ನು ಸಾಯಿ ಕುಮಾರ್ ಮತ್ತು ರಾಬರ್ಟ್ ಎನ್ನುವ ನಿವೃತ್ತ ವಿಜ್ಞಾನಿಯ ಪಾತ್ರವನ್ನು ಮಲಯಾಳಂ‌ನ ಖ್ಯಾತ ನಟ ಜಯರಾಮ್ ನಿಭಾಯಿಸಿದ್ದಾರೆ

 

ನಿರ್ದೇಶಕ ಪವನ್ ಒಡೆಯರ್ ‌ಒಂದೊಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ.‌ ಮಾತ್ರವಲ್ಲ, ಕಥೆಗೆ, ಪಾತ್ರಕ್ಕೆ ಹೊಂದಿಕೊಂಡಂಥ

ಕಲಾವಿದರನ್ನು ಆಯ್ಕೆ ಮಾಡುವಲ್ಲಿಯೂ ಗೆದ್ದಿದ್ದಾರೆ. ಅಲಿಯಾಗಿ ಸಾಯಿಕುಮಾರ್ ಕುತೂಹಲ‌ ಮೂಡಿಸುತ್ತಾರೆ.‌ ರಾಬರ್ಟ್ ಪಾತ್ರದಲ್ಲಿ ಜಯರಾಮ್ ನಗಿಸುತ್ತಾರೆ.

 

ಮಧ್ಯಂತರದ ಬಳಿಕ ಎಂಟ್ರಿ ನೀಡುವ ದೀಕ್ಷಿತ್ ಶೆಟ್ಟಿ ಸರಣಿ‌ ಕೊಲೆಗಳ ಬಗ್ಗೆ ತನಿಖೆ ‌ನಡೆಸುವಲ್ಲಿ ಖಾಕಿ ಖದರ್ ಪ್ರದರ್ಶಿಸುತ್ತಾರೆ. ಮತ್ತೊಂದೆಡೆ ಲೂಸ್ ಮಾದ ಯೋಗಿ ಕೂಡ ಅಬ್ಬರದ ಖಳನಾಗಿ ಮೆರೆದಿದ್ದಾರೆ. ಕ್ರೌರ್ಯದ ಪರಮಾವಧಿ ಪ್ರದರ್ಶಿಸಿದರೂ ತಣ್ಣನೆಯ ಧ್ವನಿಯನ್ನು ಉಳಿಸಿಕೊಂಡಿದ್ದಾರೆ.

 

ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ, ಸುನೀಲ್ ಪುರಾಣಿಕ್ ಹೀಗೆ ಪ್ರತಿಯೊಬ್ಬರು ಕೂಡ ಸ್ಪರ್ಧೆಗೆ ಬಿದ್ದಂತೆ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿನ ಹಾಡುಗಳು ಅಪ್ಯಾಯಮಾನವಾಗಿದೆ.

 

ಚಿತ್ರದಲ್ಲಿ ಹೊಡಿ‌ಬಡಿ ದೃಶ್ಯಗಳಿಗೆ ಆದ್ಯತೆ ಇಲ್ಲ. ಕುತೂಹಲಭರಿತ ವಾತಾವರಣದಲ್ಲಿನ ಹತ್ಯೆ ಹೇಗೆ ನಡೆಯುವುದು ಎನ್ನುವುದನ್ನು ರೋಮಾಂಚಕಾರಿಯಾಗಿ ತೋರಿಸಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ

 

Copyright@2018 Chitralahari | All Rights Reserved. Photo Journalist K.S. Mokshendra,