ಹಳ್ಳಿಯ ಜನರಿಗೆ ನ್ಯಾಯ ನೀಡಲು ರುದ್ರ ನರ್ತನ
ಚಿತ್ರ: ರುದ್ರಾಭಿಷೇಕಂ
ನಿರ್ದೇಶನ: ವಸಂತ್ ಕುಮಾರ್ ಕಂಪ್ಲಿ
ನಿರ್ಮಾಣ: ಪ್ಯಾನ್ ಇಂಡಿಯಾ ಕ್ರಿಯೇಶನ್ಸ್
ತಾರಾಗಣ: ವಿಜಯ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್ ಮೊದಲಾದವರು.
ಆ ಊರಿನ ಹೆಸರು ಬೆಂಕಿಪುರ. ಅಲ್ಲಿ ಬೆಂಕಿಯಂಥ ವಾತಾವರಣ ಸೃಷ್ಟಿ ಮಾಡಿರುವಾತ ಊರಿನ ಗೌಡ. ಎಲ್ಲವೂ ಈತನ ಮೂಗಿನ ನೇರಕ್ಕೇ ನಡೆಯಬೇಕು. ಆದರೆ ಅದೇ ಊರಲ್ಲಿ ಒಬ್ಬ ಮಹಾನ್ ಮಾನವತಾವಾದಿ ಇರುತ್ತಾನೆ. ಆತನ ಹೆಸರು ವೀರಭದ್ರ. ಆತ ಬಸವನ ತತ್ವ ನಂಬಿರುವವನು. ವೀರಭದ್ರ ದೇವರ ಅರ್ಚನೆ ನಡೆಸುವವನು. ಇವರಿಬ್ಬರ ನಡುವೆ ಜಗಳಗಳು ಯಾವಹಂತ ತಲುಪುತ್ತದೆ? ರುದ್ರಾಭಿಷೇಕ ಎನ್ನುವ ಹೆಸರೇಕೆ? ಮೊದಲಾದ ಕುತೂಹಲಗಳಿಗೆ ಚಿತ್ರದಲ್ಲಿ ಉತ್ತರವಿದೆ.
ಬೆಂಕಿಪುರದಲ್ಲಿ ಕಾನೂನು ವ್ಯವಸ್ಥೆ ಎನ್ನುವುದೇ ಇರುವುದಿಲ್ಲ. ಒಬ್ಬ ವ್ಯಕ್ತಿಯನ್ನು ಗೌಡನ ಆದೇಶದಂತೆ ಮೂವತ್ತು ವರ್ಷ ಮನೆಯೊಳಗೆ ಕೂಡಿಟ್ಟಂಥ ಊರು ಅದು. ಹುಚ್ಚನೆಂದು ಹೆಸರಿಟ್ಟು ಕೂಡಿಹಾಕಲಾದ ಲಿಂಗಯ್ಯನನ್ನು ಅಲ್ಲಿಂದ ಹೊರಗೆ ತರಲು ವೀರಭದ್ರ ಸಹಾಯ ಮಾಡುತ್ತಾನೆ. ಬಳಿಕ ಬಿಡುಗಡೆ ಕಾಣುವ ಲಿಂಗಯ್ಯ ವೀರಭದ್ರನಿಗೆ ಆತನ ಕೊಲೆಯಾಗಿರುವ ತಂದೆಯ ಕಥೆ ಹೇಳುತ್ತಾನೆ. ತಲೆಮಾರಿನಿಂದ ತನಗೆ ಆಗಿರುವ ಅನ್ಯಾಯದ ಬಗ್ಗೆ ಅರಿತ ವೀರಭದ್ರ ಪ್ರತಿಕಾರಕ್ಕೆ ಸಿದ್ಧವಾಗುತ್ತಾನೆ.
ವೀರಭದ್ರ ಮತ್ತು ಆತನ ತಂದೆ ವೀರಗಾಸೆ ಕುಣಿಯುವ ಬಸಯ್ಯನಾಗಿ ವಿಜಯರಾಘವೇಂದ್ರ ನಟಿಸಿದ್ದಾರೆ. ತಂದೆ ಮಗನ ದ್ವಿಪಾತ್ರಗಳಲ್ಲಿ ವೇಷದಿಂದ ಹಿಡಿದು ಧ್ವನಿಯ ತನಕ ಪ್ರತಿಯೊಂದರಲ್ಲೂ ವ್ಯತ್ಯಾಸ ಪ್ರದರ್ಶಿಸುವಲ್ಲಿ ಗೆದ್ದಿದ್ದಾರೆ.
ವೀರಭದ್ರನ ಪ್ರೇಯಸಿ ಪೂರ್ವಿಯಾಗಿ ಮತ್ತು ಆಕೆಯ ಸಹೋದರಿ ಅಪೂರ್ವಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಗೌಡನಾಗಿ ಬಲರಾಜವಾಡಿ ನಟನೆ ಮೆಚ್ಚುಗೆ ಪಡೆಯುತ್ತದೆ. ಶಾನುಭೋಗನಾಗಿ ವಿ ಮನೋಹರ್ ತಾವು ಕೂಡ ಖಳನಾಯಕನಾಗಿ ನಟಿಸಬಲ್ಲೆ ಎಂದು ಸಾಬೀತು ಮಾಡಿದ್ದಾರೆ.
ದೈವ ಶಕ್ತಿ, ಕ್ಷುದ್ರಶಕ್ತಿಗಳ ಪ್ರಭಾವಗಳನ್ನು ನಂಬುವವರು ನೋಡಬೇಕಾದ ಚಿತ್ರ ಇದು.