ಭ್ರಷ್ಟ ಸರ್ಕಾರಕ್ಕೆ ಸವಾಲೆಸೆಯುವ ಕಾಮನ್ ಮ್ಯಾನ್
ಚಿತ್ರ: ಕಾಮನ್ ಮ್ಯಾನ್
ನಿರ್ದೇಶನ: ಓಂ ಸಾಯಿ ಪ್ರಕಾಶ್
ನಿರ್ಮಾಣ: ಡಾ.ಎನ್. ನರಸಿಂಹಮೂರ್ತಿ
ತಾರಾಗಣ: ಗೌರಿಶಂಕರ್, ಸೋನ ಲಾಡ್ವ ಮತ್ತು ಡಾ. ಎನ್ ನರಸಿಂಹಮೂರ್ತಿ ಮೊದಲಾದವರು.
ವಿಧಾನ ಸೌಧದಲ್ಲಿ ಜನ ಸಾಮಾನ್ಯರಿಗೆ ಹಕ್ಕು ಸಿಗುತ್ತಾ? ಅದಕ್ಕಾಗಿ ಕೋರ್ಟ್ ಮೆಟ್ಟಿಲೇರಿದರೆ ಹೇಗಿರುತ್ತದೆ? ಬಹುಶಃ ಇದು ಸಾಧ್ಯವೇ ಇಲ್ಲ ಎಂದು ಅನಿಸಬಹುದು. ಆದರೆ ರಾಜಕೀಯ ನಾಯಕರ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯುವಕನೋರ್ವ ಇಂಥ ಅರ್ಜಿಯೊಂದಿಗೆ ಕೋರ್ಟ್ ಸಮೀಪಿಸುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಕಾಮನ್ ಮ್ಯಾನ್ ಚಿತ್ರ.
ವಿಧಾನ ಸೌಧದಲ್ಲಿ ಜನ ಸಾಮಾನ್ಯರಿಗೆ ಪಾಲು ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಕನ್ನಡಿಗರ ಆಸ್ತಿ ಎನ್ನುವುದಂತೂ ಸತ್ಯ. ಕೋರ್ಟ್ ಮೆಟ್ಟಿಲೇರುವ ವಕೀಲ ಕುಮಾರ ಕಂಸಾಳೆಯ ಪಾಯಿಂಟ್ ಕೂಡ ಇದೇ. ಆದರೆ ಹೀಗೆ ಅರ್ಜಿ ಹಾಕಿದಾತನನ್ನೇ ನೇರ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದರೆ ಹೇಗಿರುತ್ತದೆ? ಆಗ ಹಾಲಿ ಮುಖ್ಯಮಂತ್ರಿಗೆ ಎದುರಾಗುವ ಸಮಸ್ಯೆಗಳೇನು? ಇಂಥದೊಂದು ಕಥೆಯನ್ನೇ ಆಧಾರವಾಗಿಟ್ಟು ಚಿತ್ರ ಮಾಡಿದ್ದಾರೆ ಶತ ಚಿತ್ರಗಳ ನಿರ್ದೇಶಕ ಓಂ ಸಾಯಿ ಪ್ರಕಾಶ್.
ವಕೀಲ ಕುಮಾರ್ ಕಂಸಾಳೆ ಎನ್ನುವ ಪಾತ್ರದಲ್ಲಿ ಗೌರಿಶಂಕರ್ ಪರಕಾಯ ಪ್ರವೇಶ ಮಾಡಿದ್ದಾರೆ. ಪ್ರೇಮದಿಂದ ಸದಾ ದೂರ ಇರುವ ಪಾತ್ರವಾದರೂ ಇಲ್ಲಿ ಈತನಿಗೆ ಪ್ರೇಯಸಿ ಇದ್ದಾಳೆ. ಒಂದು ಕಡೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತೊಂದೆಡೆ ಮೆಚ್ಚುವ ಹುಡುಗಿಯೊಂದಿಗಿನ ಪ್ರೇಮಪಾಠ ಹೀಗೆ ಎರಡು ಕಡೆಯೂ ಬ್ಯಾಲೆನ್ಸ್ ಮಾಡುವಂತೆ ಕಥೆ ಹೆಣೆಯಲಾಗಿದೆ.
ವಕೀಲ ಗೌರಿಶಂಕರ್ ಜತೆ ಜಿದ್ದಿಗೆ ಬಿದ್ದು ಬಳಿಕ ಪ್ರೀತಿಯಲ್ಲಿ ಬೀಳುವ ಯುವತಿಯ ಪಾತ್ರವನ್ನು ಸೋನ ಲಡ್ವ ನಿರ್ವಹಿಸಿದ್ದಾರೆ. ವಿನಯ್ ಚಂದ್ರ ಸಂಗೀತದಲ್ಲಿ ಮೂಡಿ ಬರುವ ಹಾಡುಗಳು ಇವರ ಪ್ರೀತಿಯನ್ನು ಅನಾವರಣಗೊಳಿಸುವಂತಿದೆ.
ಒಂದುಕಡೆ ಸಾಮಾನ್ಯ ಯುವಕ ವಿಧಾನಸೌಧ ಕೊಳ್ಳುವ ಕನಸು ಕಾಣುತ್ತಾನೆ. ಇದೇ ಸಂದರ್ಭದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ಈತನಿಗೆ ಬಿಟ್ಟುಕೊಡಲು ಸಿದ್ಧನಾಗುತ್ತಾನೆ. ಇಲ್ಲಿ ಮುಖ್ಯಮಂತ್ರಿ ಮಾವಳ್ಳಿ ಸದಾಶಿವರಾವ್ ಪಾತ್ರವನ್ನು ಚಿತ್ರದ ನಿರ್ಮಾಪಕ ಡಾ. ಎನ್.ನರಸಿಂಹಮೂರ್ತಿಯವರು ಅದ್ಭುತವಾಗಿ ನಿಭಾಯಿಸಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾಗಿರುವ ನರಸಿಂಹಮೂರ್ತಿಯವರ ಪ್ರವೇಶದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಖಳನಟ ಸಿಕ್ಕಂತಾಗಿದೆ.
ಸಾಯಿ ಪ್ರಕಾಶ್ ಹಿರಿಯ ನಿರ್ದೇಶಕರಾದರೂ, ಇದುವರೆಗೂ ಎತ್ತಿರದ ಹೊಸ ಪ್ರಶ್ನೆಯೊಂದಿಗೆ ಜೆನ್ ಜಿಗಳು ಕೂಡ ಇಷ್ಟಪಡುವಂತೆ ಚಿತ್ರ ಮಾಡಿದ್ದಾರೆ. ಈ ಕಾಲದ ಹೀರೋ ಗೌರಿಶಂಕರ್ ಪರದೆಯ ಮೇಲೆ ಸಾಥ್ ನೀಡಿದ್ದಾರೆ. ಹೀಗಾಗಿ ಚಿತ್ರಕ್ಕೆ ಒಂದು ಹೊಸ ಕಳೆಯನ್ನೇ ತಂದುಕೊಟ್ಟಂತಾಗಿದೆ.