ಕುರಿಗಳ ಕಾಯುವವರ ಕಾಯುವವರಾರು?
ಚಿತ್ರ: ಅನಂತಪಯಣ ANANTHA PAYANA 4/5 STAR RATING ****
ನಿರ್ದೇಶನ: ಶ್ರೀ ಕಾಕ
ನಿರ್ಮಾಣ: ಎಸ್.ಕೆ ಫಿಲ್ಮ್ಸ್ ಫ್ಯಾಕ್ಟರಿ ಮತ್ತು ಶ್ರೀ ಅಶೋಕ್ ಫಿಲ್ಮ್ಸ್
ತಾರಾಗಣ: ಶ್ರೀ ಕಾಕ, ನಿಶ್ವಿಕಾ ಪಾಟೀಲ್ ಮತ್ತು ಬಲ ರಾಜ್ ವಾಡಿ ಮೊದಲಾದವರು.
ಅದೊಂದು ಉತ್ತರ ಕರ್ನಾಟಕದ ಹಳ್ಳಿ. ಅಲ್ಲಿ ಕುರಿ ಕಾಯುತ್ತಾ ಬಾಳುವೆ ನಡೆಸುವಾತ ಸಿದ್ದಪ್ಪ. ಆತನ ಬಳಿ ದಣಿಗಳ ನೂರಾರು ಕುರಿಗಳಿವೆ. ಆ ಕುರಿಗಳೆಂದರೆ ಆತನಿಗೆ ತನ್ನದೇ ಮಕ್ಕಳೇನೋ ಎನ್ನುವ ಪ್ರೀತಿ. ಇಂಥ ಸಿದ್ದಪ್ಪನಿಗೆ ಒಬ್ಬ ಮುದ್ದಿನ ಮಗ ಇರುತ್ತಾನೆ. ಆತನೇ ಬೀರ. ಮಗನನ್ನು ಶಾಲೆಗೆ ಕಲಿಸಬೇಕು ಎನ್ನುವುದು ಆತನ ಆಸೆ. ಆದರೆ ಅದು ಕೈಗೂಡುವುದಿಲ್ಲ. ಹಾಗೆ ವಿದ್ಯೆ ಇಲ್ಲದೆ ಬೆಳೆದ ಬೀರ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳೇನು? ಅದಕ್ಕೆ ಕಾರಣಗಳೇನು? ಎನ್ನುವುದರ ಜತೆಗೆ ಕುರಿ ಕಾಯುವವರ ನೋವು, ನಲಿವುಗಳಿಗೆ ಕನ್ನಡಿ ಹಿಡಿದು ತೋರಿಸಿರುವ ಚಿತ್ರ ಇದು.
ಚಿತ್ರದಲ್ಲಿ ಬೀರನ ಪಾತ್ರ ಮಾಡಿರುವ ಶ್ರೀಕಾಕ ಅವರೇ ಈ ಅನಂತ ಪಯಣ ಚಿತ್ರದ ನಿರ್ದೇಶಕರು ಕೂಡ ಹೌದು. ಹಾಗಂತ ತಮ್ಮ ಪಾತ್ರಕ್ಕೆ ಯಾವುದೇ ಹೆಚ್ಚುವರಿ ಪ್ರಾಮುಖ್ಯತೆ ನೀಡಿಲ್ಲ. ಸಾಮಾನ್ಯ ಪಾತ್ರವಾಗಿ ನೈಜವಾಗಿ ತೋರಿಸಿದ್ದಾರೆ. ಆದರೆ ಯಾವ ಕಮರ್ಷಿಯಲ್ ಸಿನಿಮಾ ನಾಯಕನಿಗೂ ಕಡಿಮೆ ಇರದಂತೆ ನಟಿಸಿದ್ದಾರೆ. ಪ್ರೇಮದ ಸನ್ನಿವೇಶ ಹಾಗೂ ಭಾವನಾತ್ಮಕ ದೃಶ್ಯಗಳಲ್ಲಿ ನುರಿತ ಕಲಾವಿದರಂತೆ ಕಾಣಿಸಿದ್ದಾರೆ.
ಬೀರನನ್ನು ಪ್ರೀತಿಸುವ ಹುಡುಗಿ ಗೌರಿಯಾಗಿ ನಿಶ್ವಿಕಾ ಪಾಟೀಲ್ ಅಭಿನಯ ಮನ ಮೋಹಕ. ನಟನೆ, ನೃತ್ಯ ಎಲ್ಲದರಲ್ಲೂ ಎತ್ತಿದ ಕೈ. ಬೀರನ ತಂದೆ ಸಿದ್ದಪ್ಪನ ಪಾತ್ರವನ್ನು ಬಲ ರಾಜ್ ವಾಡಿ ನಿಭಾಯಿಸಿದ್ದಾರೆ. ಉಳಿದಂತೆ ಮಂಜುನಾಥ್ ಹೆಗ್ಡೆ, ಸಂದೀಪ್ ನೀನಾಸಮ್, ಎಮ್. ಕೆ. ಮಠ, ಅಪೂರ್ವ, ಪ್ರಶಾಂತ್ ಸಿದ್ದಿ, ಗಿರೀಶ್ ಜತ್ತಿ ಹೀಗೆ ಜನಪ್ರಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಅನಂತ ಪಯಣವನ್ನು ಅದ್ಭುತ ವಾಗಿಸಿರುವುದು ವಿನೋದ್ ಭಾರತಿಯವರ ಛಾಯಾಗ್ರಹಣ ಎಂದು ಹೇಳಲೇಬೇಕು. ಪ್ರತಿಯೊಂದು ಫ್ರೇಮ್ ನಲ್ಲಿಯೂ ದೃಶ್ಯ ಕಾವ್ಯವನ್ನೇ ಬರೆದಿದ್ದಾರೆ. ಈ ಚಿತ್ರದ
ನೃತ್ಯ ನಿರ್ದೇಶನವನ್ನು ಶ್ರೀಕಾಕ ಮಾಡಿದ್ದಾರೆ. ಸಂಗೀತ ನೀಡಿರುವ ಆಕಾಶ ಪರ್ವ ಮ್ಯೂಸಿಕ್ ಮೂಲಕ ಹೊಸ ಪರ್ವವನ್ನೇ ಸೃಷ್ಟಿಸಿದ್ದಾರೆ.
ಔಟ್ ಡೋರ್ ಇಂಡೋರ್ ಎರಡು ಕಡೆಗಳಲ್ಲಿ ನೀಡಿರುವ ಕಲಾ ನಿರ್ದೇಶನ
ನಂದ ಹೊನ್ನೂರು ಅವರ ಪ್ರತಿಭೆಯನ್ನು ಸಾಬೀತು ಮಾಡುವಂತಿದೆ. ಮುಖ್ಯವಾಗಿ ಚಿತ್ರದ ದ್ವಿತೀಯಾರ್ಧದಲ್ಲಿ ಭಾವನಾತ್ಮಕ ಸನ್ನಿವೇಶ ಪ್ರತಿಯೊಬ್ಬ ಪ್ರೇಕ್ಷಕನನ್ನು ಚಿತ್ರದೊಳಗೆ ಕೂಡಿ ಹಾಕುವಂತಿದೆ. ಉತ್ತಮ ಸಂದೇಶದ ಜತೆಗೆ ಸಮ್ಮೋಹಕವಾಗಿರುವ ಈ ಚಿತ್ರ ಸಂತೃಪ್ತಿದಾಯಕ ಕೂಡ ಹೌದು.