ಮಾಧವನಿಗೂ ಜಗವೇ ನಾಟಕ ರಂಗ
ಚಿತ್ರ: ಬೃಂದಾ ವಿಹಾರಿ 4/5 Star Rating ****
ನಿರ್ದೇಶನ: ಶ್ರೀನಿವಾಸ ರಾಜು
ನಿರ್ಮಾಣ: ಸಮೃದ್ಧಿ ಮಂಜುನಾಥ್
ತಾರಾಗಣ: ಗಣೇಶ್, ಮಾಳವಿಕಾ ಶರ್ಮ, ದೇವಿಕಾ ಭಟ್ ಮುಂತಾದವರು.
"ಜಗದೀಶ ನಾಡುವ ಜಗವೇ ನಾಟಕ ರಂಗ.." ಎನ್ನುವುದು ಒಂದು ಜನಪ್ರಿಯ ಗೀತೆ. ದೇವರ ಪಾಲಿಗೆ ಜಗತ್ತೇ ನಾಟಕರಂಗದಂತೆ. ಆದರೆ ದೇವರ ಹೆಸರಿನ ಒಬ್ಬ ಯುವಕ ಮಾಧವನ ಪಾಲಿಗೂ ಇಂಥ ಸಂದರ್ಭ ಎದುರಾದರೆ ಹೇಗಿರಬಹುದು? ಅದು ಹೇಗೆ ವಿಶೇಷ? ಮೊದಲಾದ
ಪ್ರಶ್ನೆಗಳಿಗೆ ಸ್ವಾರಸ್ಯಕರವಾದ ಉತ್ತರವನ್ನು ನೀಡಿರುವ ಚಿತ್ರವೇ ಬೃಂದಾ ವಿಹಾರಿ.
ಆರಂಭದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಈ ಕಥೆ ನಡೆಯುವಂತೆ ತೋರಿಸಲಾಗುತ್ತದೆ. ಅದು ಮಾಧವ ವಾಸಿಸುವ ಬೃಂದಾವನ. ಆ ಊರಿನ ಸರಹದ್ದಿಗೆ ಒಂದು ಬೃಹತ್ ಕೋಟೆ. ಅಲ್ಲಿ ಬೃಂದಾವನ ಎನ್ನುವ ಹೆಸರು. ಮಾಧವ ಕೊಳಲು ಪ್ರಿಯ. ಆತನ ಮನೆಯಲ್ಲಿ ಅಜ್ಜಿ ತಾತ ಮಾತ್ರವೇ ಇರುತ್ತಾರೆ. ಉಳಿದ ಸಂಬಂಧಿಕರೆಲ್ಲ ಬಂದು ಹೋಗುತ್ತಿರುತ್ತಾರೆ. ಹಾಗೆ ಅವರು ಹೋಗುತ್ತಿರುವಂತೆ ಕೋಟೆ ಬಾಗಿಲು ಹಾಕಿ ಬ್ರಿಟಿಷರು ಕಾವಲು ನಿಲ್ಲುತ್ತಾರೆ. ಪ್ರಪಂಚ ಎಷ್ಟು ವಿಶಾಲವಾಗಿದೆ ಎನ್ನುವುದನ್ನು ಅರಿಯದೆ ಬೆಳೆದವನು ಮಾಧವ. ಇಂಥ ಮಾಧವನಿಗೆ ರಾಧಾ ಮೇಲೆ ಪ್ರೀತಿಯಾಗುತ್ತದೆ. ಆದರೆ ರಾಧೆ ಬೃಂದಾವನ ತೊರೆದು ಹೋಗುತ್ತಾಳೆ. ಮತ್ತೊಂದೆಡೆ ಮೀರಾ ರಂಗ ಪ್ರವೇಶ ಮಾಡುತ್ತಾಳೆ. ಆಕೆ ತಾನು ಮಾಧವನನ್ನು ಪ್ರೀತಿಸುವುದಾಗಿ ಹೇಳುತ್ತಾಳೆ.
ರಾಧೆಯ ವಿರಹದಿಂದ ನೊಂದ ಮಾಧವ ಮೀರಾಳ ಕೈ ಹಿಡಿಯುತ್ತಾನ? ಅಥವಾ ರಾಧಾ ಮರಳಿ ಬರುತ್ತಾಳ? ಇಬ್ಬರಲ್ಲಿ ಒಬ್ಬರು ತ್ಯಾಗ ಮಾಡುತ್ತಾರ? ಕಥೆ ಮುಗಿಯುವ ಮೊದಲು ಬ್ರಿಟಿಷರ ಆಳ್ವಿಕೆ ಕೊನೆಯಾಗುತ್ತಾ? ಹೊರಗಿನ ಪ್ರಪಂಚ ನೋಡಲು ಮಾಧವನಿಗೆ ಅವಕಾಶ ಸಿಗುತ್ತಾ? ಎನ್ನುವ ಸಂದೇಹಗಳಿಗೆ ಚಿತ್ರದಲ್ಲೊಂದು ಅದ್ಭುತವಾದ ತಿರುವಿನ ಉತ್ತರವಿದೆ.
ಮಾಧವನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆ ಆಕರ್ಷಕ. ಈ ಪಾತ್ರ ಮಾಡಲೆಂದೇ ಹುಟ್ಟಿ ಬಂದವರೇನೋ ಎನ್ನುವಷ್ಟು ತನ್ಮಯತೆಯಿಂದ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಕೊಳಲು ನುಡಿಸುವ ಶೈಲಿ, ರಾಧಾ ಮಾಧವ ಪ್ರೇಮ ದೃಶ್ಯಗಳಲ್ಲಾಗಲೀ ಗಣೇಶ್ ನಟನೆ ಅದ್ಭುತ. ಎಲ್ಲಕ್ಕಿಂತ ಮುಖ್ಯವಾಗಿ ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಕಣ್ಣೀರು ಹಾಕುವಂತೆ ಅಭಿನಯ ನೀಡಿದ್ದಾರೆ. ಸುಮಾರು ಹತ್ತು ನಿಮಿಷಗಳ ದೃಶ್ಯವನ್ನು ತಾವೊಬ್ಬರೇ ಮಾತನಾಡಿ ನಿರ್ವಹಿಸಿದ್ದಾರೆ.
ಮಾಧವನಾಗಿ ನಟಿಸಿರುವ ಗಣೇಶ್ ಗೆ ಅಜ್ಜಿಯಾಗಿ ಜೂಲಿ ಲಕ್ಷ್ಮೀ ಹಾಗೂ ತಾತನಾಗಿ ಹಿರಿಯ ನಟ ಅಶೋಕ್ ಕಾಣಿಸಿದ್ದಾರೆ. ದೊಡ್ಡಪ್ಪನಾಗಿ ನಟರಂಗ ರಾಜೇಶ್, ಚಿಕ್ಕಪ್ಪನಾಗಿ ರವಿ ಭಟ್ ಮೊದಲಾದವರು ಅಭಿನಯಿಸಿದ್ದಾರೆ. ಇವರಷ್ಟೇ ಅಲ್ಲದೆ ಸುಂದರ್, ರಘು ರಾಮನ ಕೊಪ್ಪ, ಕುರಿ ಪ್ರತಾಪ್, ಮಂಜು ಪಾವಗಡ ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ.
ಇದಿಷ್ಟು ಬೃಂದಾವನದ ಒಳಗಿನ ಕಥೆಯಾದರೆ ಕೋಟೆಯ ಹೊರಗಿನ ಪ್ರಪಂಚದಲ್ಲಿ ಬಹಳ ದೊಡ್ಡ ತಿರುವು ಇದೆ. ಬಹಳ ಕಾಲದ ಬಳಿಕ ರಾಮ್ ಕುಮಾರ್ ಪರದೆಯ ಮೇಲೆ ಕಾಣಿಸಿದ್ದಾರೆ. ಅದೇ ರೀತಿ ಅವಿನಾಶ್, ರಂಗಾಯಣ ರಘು, ಸಾಧುಕೋಕಿಲ, ಗಿರೀಶ್ ಶಿವಣ್ಣ ಹೀಗೆ ಸಾಕಷ್ಟು ಕಲಾವಿದರಿದ್ದಾರೆ.
ಭರ್ಜರಿ ತಾರಾಗಣ, ಅದ್ಭುತ ಸೆಟ್, ಟ್ವಿಸ್ಟ್ ತುಂಬಿದ ಕಥೆ, ಭರಪೂರ ಮನೋರಂಜನೆ, ಸಂಗೀತಮಯ ಪ್ರೇಮ, ಬಾಂಧವ್ಯದ ಸಂದೇಶ ಇವೆಲ್ಲವನ್ನು ಒಂದೇ ಚಿತ್ರದಲ್ಲಿ ಅನುಭವಿಸುವ ಅವಕಾಶ ಎಂದರೆ ಅದೇ ಬೃಂದಾ ವಿಹಾರಿ.