Nee Nange Allava.Reviews

Friday, November 13, 2026

 

ಈ ಚಿತ್ರ ನಮದೇ ಅಲ್ಲವಾ..!

 

 

ಚಿತ್ರ: ನೀ ನಂಗೆ ಅಲ್ಲವಾ

ನಿರ್ದೇಶನ: ಮನೋಜ್ ಪಿ.ನಡುಲಮನೆ

ನಿರ್ಮಾಣ: ಜಯರಾಮ್ ದೇವಸಮುದ್ರ

ತಾರಾಗಣ: ರಾಹುಲ್ ಆರ್ಕಾಟ್, ಕಾಶಿಮಾ ರಫಿ, ಗಿರೀಶ್ ಶಿವಣ್ಣ ಮುಂತಾದವರು.

 

 

ಒಂದು ಪ್ರೇಮಕಥೆಯನ್ನು ಎಷ್ಟು ವಿಭಿನ್ನವಾಗಿ ಹೇಳಬಹುದು ಎನ್ನುವುದಕ್ಕೆ ’ನೀ ನಂಗೆ ಅಲ್ಲವಾ’ ಒಂದು ಉದಾಹರಣೆ. ಒಂದು ಹಾಡಿನ ಸಾಲೇ ಈ ಚಿತ್ರದ ಹೆಸರು. ಹಾಗಾಗಿ ಹಾಡಿಗೆ ಸೇರಿದಂತೆ ಈ ಚಿತ್ರದ ಕಥೆಯೂ ಇದೆ.

 

ಇಲ್ಲಿ ಕಥಾ ನಾಯಕನ ಪಾತ್ರದ ಹೆಸರು ಲಕ್ಕಿ. ಲಕ್ಕಿಗೆ ನಾಲ್ಕು ಮಂದಿ ಆಪ್ತ ಸ್ನೇಹಿತರ ಬಳಗವಿದೆ. ಸ್ಟಾರ್ಟಪ್ ಕಂಪನಿ ಮಾಡಬೇಕೆನ್ನುವ ಕನಸು ಕಾಣುವ ನಾಯಕ. ಇಂಥ ಸಂದರ್ಭದಲ್ಲಿ ಕೆಫೆಯೊಂದರಲ್ಲಿ ಹಾಡುವ ನಾಯಕಿ ಖುಷಿಯ ಪರಿಚಯವಾಗುತ್ತದೆ. ಎಲ್ಲರಿಂದ ಚೀಟಿ ಪಡೆದು ಅವರ ಕೋರಿಕೆಯ ಹಾಡಿಗೆ ಧ್ವನಿಯಾಗುವ ಈಕೆ ಲಕ್ಕಿಯ ಬಯಕೆಯನ್ನು ಮಾತ್ರ ಪೆಂಡಿಂಗ್ ನಲ್ಲಿ ಇಡುತ್ತಾಳೆ. ಅದಕ್ಕೆ ಕಾರಣ ಆ ಹಾಡು ಅವಳಿಗೂ ಫೇವರಿಟ್ ಆಗಿರುತ್ತದೆ. ಅದನ್ನು ವಿಶೇಷ ಸಂದರ್ಭದಲ್ಲಿ ಹಾಡಲು ಉಳಿಸಿಕೊಂಡಿರುವುದಾಗಿ ಹೇಳುತ್ತಾಳೆ.

 

ಈ ನಡುವೆ ನಾಯಕನಿಗೆ ಒಂದು ಗೊಂದಲದ ಪರಿಸ್ಥಿತಿ ಏರ್ಪಾಡಾಗುತ್ತದೆ. ತನ್ನ ಅಕ್ಕನ ಬಾಯ್ ಫ್ರೆಂಡ್ ನ ಮೇಲೆ ಕೈ ಮಾಡುವ ಸಂದರ್ಭ ಎದುರಾಗುತ್ತದೆ. ಆದರೆ ಆತ ಅಕ್ಕ ಮದುವೆಯಾಗುವ ಹುಡುಗ ಎಂದು ಅರಿತಾಗ ಅಕ್ಕನ ಸೂಚನೆಯಂತೆ ಅದಕ್ಕಾಗಿ ಕ್ಷಮೆ ಕೇಳುತ್ತಾನೆ. ಭಾವನಾಗುವ ವ್ಯಕ್ತಿಗೆ ಈತ ನೀಡುವ ಗೌರವವನ್ನು ಕಥಾ ನಾಯಕಿ ಗಮನಿಸುತ್ತಾಳೆ. ಬಳಿಕ ಆತನಲ್ಲಿ ಆತನ ಬಯಕೆಯ ಹಾಡನ್ನು ಹಾಡುವುದಾಗಿ ಹೇಳುತ್ತಾಳೆ. ಚಿತ್ರದ ಶೀರ್ಷಿಕೆಯೇ ಗೀತೆಯಾಗುವ ಈ ಸಂದರ್ಭ ಮಧ್ಯಂತರಕ್ಕೆ ನಾಂದಿ ಹಾಡುತ್ತದೆ. ಮಧ್ಯಂತರದ ಬಳಿಕ ಕಥೆ ಮತ್ತೊಂದು ಲೆವೆಲ್ ಗೆ ಹೋಗುತ್ತದೆ. ಹೊಸ ಪಾತ್ರಗಳ ಪ್ರವೇಶವಾಗುತ್ತದೆ.

ನಾಯಕ ಲಕ್ಕಿಯಾಗಿ ರಾಹುಲ್ ಆರ್ಕಾಟ್. ನಟಿಸಿದ್ದಾರೆ. ಪ್ರಥಮ ಪ್ರಯತ್ನದಲ್ಲೇ ಮನಸೆಳೆಯುವಂಥ ನಟನೆ ನೀಡಿದ್ದಾರೆ. ಗಾಯಕಿ ಖುಷಿಯ ಪಾತ್ರವನ್ನು ಕಾಶಿಮಾ ರಫಿ ನಿರ್ವಹಿಸಿದ್ದಾರೆ. ಇವರ ನಟನೆ ಕೂಡ ಪ್ರೇಕ್ಷಕರನ್ನು ಕಥೆಯೊಳಗೆ ಸೇರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಚಿತ್ರದ ಆರಂಭದಲ್ಲೇ ವಿಶೇಷ ಹಾಡು ಇದೆ. ಆ ಹಾಡಿನಲ್ಲಿ ಐಶ್ವರ್ಯ ಸಿಂಧೋಗಿ ನರ್ತಿಸಿದ್ದಾರೆ. ಕೆಫೆಯ ಸರ್ವರ್ ರೂಪದಲ್ಲಿ ನಟ ಚೇತನ್ ದುರ್ಗ ಕಾಣಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನೃತ್ಯಪಟು ತಾರಕ್ ಮಾಸ್ಟರ್ ಇಲ್ಲೊಂದು ವಿಶೇಷ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿಯ ಫ್ಲ್ಯಾಶ್ ಬ್ಯಾಕ್ ಘಟನೆ ಈ ಚಿತ್ರದ ಜೀವಾಳ. ಅದನ್ನು ಆಧಾರವಾಗಿಸಿ ನೀಡಲಾದ ಸಂದೇಶ ಕೂಡ ಅಷ್ಟೇ ಆಕರ್ಷಕ.

 

ರಾಹುಲ್ ನಟನೆ ಮಾತ್ರವಲ್ಲ, ನೋಟದಲ್ಲೂ ಕಮರ್ಷಿಯಲ್ ಸಿನೆಮಾಗಳಿಗೆ ಒಪ್ಪುವಂತೆ ಕಾಣಿಸಿದ್ದಾರೆ. ಲಕ್ಕಿ ಪಾತ್ರ ನೋಡಿ ಹೆಣ್ಣು ಮಕ್ಕಳು ಅಭಿಮಾನಿಗಳಾದರೆ ಅಚ್ಚರಿ ಇಲ್ಲ. ಚಿತ್ರದ ಮೊದಲಾರ್ಧ ತಮಾಷೆಯಾಗಿ

ಸಾಗುತ್ತದೆ. ಆದರೆ ಮಧ್ಯಂತರದ ಬಳಿಕ ಸಿಗುವ ಅಚ್ಚರಿಯೇ ಬೇರೆ. ಮಹಿಳೆಯರು ತಮ್ಮ ವೈಯಕ್ತಿಕ ಸಂಕಷ್ಟವನ್ನು ಸಾಮಾಜಿಕ ರೀತಿಯಲ್ಲಿ ಹೇಗೆ ಎದುರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವ ಚಿತ್ರ ಇದು.

 

ಒಂದು ಕಥೆಯನ್ನು ಹೇಗೆ ಮನರಂಜನೆ ಮತ್ತು ಸಂದೇಶದೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಾಡಬಹುದು ಎನ್ನುವುದನ್ನು ನಿರ್ದೇಶಕ ಮನೋಜ್ ಚೆನ್ನಾಗಿ ಅರಿತುಕೊಂಡಿದ್ದಾರೆ. ಹೀಗಾಗಿಯೇ ನೀ ನಂಗೆ ಅಲ್ಲವಾ ಚಿತ್ರ ನಮಗೇನೇ ಅಲ್ಲವಾ ಎಂದು ಪ್ರತಿ ಪ್ರೇಕ್ಷಕರು ಕೂಡ ಮನದಲ್ಲೇ ಪ್ರಶ್ನಿಸುವಂತಿದೆ. ಇದು ನಮಗೆಂದೇ ಮಾಡಿದ ಕಥೆ ಎಂದು ಪ್ರತಿ ಹೆಣ್ಣುಮಕ್ಕಳು ಕೂಡ ಗಟ್ಟಿಯಾಗಿ ಹೇಳುವಂತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,