Rashi.Film News

Friday, November 13, 2026

 

ರಾಶಿ ಪ್ರೀತಿ ಮತ್ತು ದ್ವೇಷದ ಮಧ್ಯೆ ಮೀಯುವ ಪ್ರೇಮಿಗಳ ಕಥೆ

 

ಚಿತ್ರ: ರಾಶಿ

ನಿರ್ದೇಶನ: ವಿಜಯ್ ಪಾಳೇಗಾರ್

ನಿರ್ಮಾಣ: ಅಖಿಲೇಶ್ ಮಹಾಲಿಂಗಯ್ಯ

ತಾರಾಗಣ: ಆದಿತ್ಯ ಶಶಿಕುಮಾರ್, ಸಮೀಕ್ಷಾ, ರಮೇಶ್ ಇಂದಿರಾ ಮುಂತಾದವರು

 

ಹಳ್ಳಿಯಿಂದ ನಗರದ ಕಾಲೇಜ್ಗೆ ಬರುವ ಯುವ ವಿದ್ಯಾರ್ಥಿ. ಅಲ್ಲೊಬ್ಬಳು ಯುವ ವಿದ್ಯಾರ್ಥಿನಿಯೊಂದಿಗೆ ಪ್ರೇಮ. ಆಕೆ ಕೂಡ ಈ ಹುಡುಗನನ್ನು ಮನಸಾರೆ ಪ್ರೀತಿಸುತ್ತಾಳೆ. ಆದರೆ ಆಕೆ ಶ್ರೀಮಂತರ ಮನೆಯ ಹುಡುಗಿ. ಮತ್ತೊಂದೆಡೆ ಹುಡುಗನ ಮನೆಯಲ್ಲಿಯೂ ಪ್ರೀತಿಗೆ ವಿರೋಧ. ಇಂಥ ಕಥೆಗಳು ಸಾಕಷ್ಟು ಬಂದಿವೆ. ಆದರೆ ಮುಂದೇನಾಗುತ್ತದೆ ಎನ್ನುವಂತೆ ಚಿತ್ರೀಕರಿಸಿರುವುದೇ ರಾಶಿ ಚಿತ್ರದ ವಿಭಿನ್ನತೆ.

 

 

ಹಳ್ಳಿಯಿಂದ ಬಂದು ಕಾಲೇಜು ಸೇರುವ ಹುಡುಗನಾಗಿ ಆದಿತ್ಯ ಶಶಿಕುಮಾರ್ ನಟಿಸಿದ್ದಾರೆ. ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಎನ್ನುವ ನಿರೀಕ್ಷೆ ಇರಿಸಿಕೊಂಡು ಚಿತ್ರ ನೋಡಲು ಬರುವವರಿಗೂ ಮೆಚ್ಚುಗೆಯಾಗುವಂತೆ ಆದಿತ್ಯ ನಟಿಸಿದ್ದಾರೆ. ನಟನೆ, ನೃತ್ಯ ಎಲ್ಲದರಲ್ಲೂ ತಾವು ಶಶಿಕುಮಾರ್ ಪುತ್ರ ಎನ್ನುವುದಕ್ಕೆ ಡಿಎನ್‌ಎ ಪರಿಶೀಲಿಸುವ ಅಗತ್ಯವಿಲ್ಲ ಎಂದು ಸಾಬೀತು ಮಾಡಿದ್ದಾರೆ. ವಿಜಯ್ ಪಾಳೇಗಾರ್ ನಿರ್ದೇಶನ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ. ತೊಂಬತ್ತರ ಕಾಲಘಟ್ಟದ ವಿದ್ಯಾರ್ಥಿ ಬದುಕನ್ನು ನೆನಪಿಸುವಂಥ ದೃಶ್ಯಗಳು ಪ್ರೇಕ್ಷಕರನ್ನು ಮತ್ತೊಂದು ಕಾಲಘಟ್ಟಕ್ಕೆ ಒಯ್ಯುತ್ತವೆ. ನವೀನ್ ಸೂರ್ಯ ಅವರ ಛಾಯಾಗ್ರಹಣದಲ್ಲಿನ ದೃಶ್ಯಗಳು ಮನಸೂರೆಗೊಳ್ಳುವಂತೆ ಮೂಡಿವೆ. 

ಚಿತ್ರದಲ್ಲಿ ಎರಡು ಭಾವಗಳನ್ನು ಆಕರ್ಷಣೀಯವಾಗಿ ಕಟ್ಟಿಕೊಟ್ಟಿರುವಲ್ಲಿ ಕಲಾವಿದರ ಪಾತ್ರ ಅದ್ಭುತವಾಗಿದೆ. ಪ್ರಥಮಾರ್ಧದಲ್ಲಿ ಹಾಸ್ಯವೇ ತುಂಬಿದೆ. ಅದಕ್ಕೆ ಕಾರಣವಾಗಿರುವ ನಟರಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ವಿನೋದ್ ಗೊಬ್ರಗಾಲ ಮೊದಲಾದವರ ಹೆಸರು ಸೇರುತ್ತದೆ. ಹುಲಿ ಕಾರ್ತಿಕ್ ಹಾಸ್ಯವನ್ನು ಮರೆಯುವಂತಿಲ್ಲ. ಮತ್ತೊಂದೆಡೆ ರಮೇಶ್ ಇಂದಿರಾ, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಪಾತ್ರಗಳು ಪರದೆಗೆ ಗಂಭೀರತೆಯನ್ನು ತಂದೊಡ್ಡುತ್ತದೆ. ಇದೇ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್ ಸಂಪೂರ್ಣವಾಗಿ ಭಾವನಾತ್ಮಕವಾಗಿದೆ.  ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕೂಡ ಸಂದರ್ಭಕ್ಕೆ ತಕ್ಕಂತೆ ಸಾಥ್ ನೀಡುತ್ತದೆ.

 

 

ಇತ್ತೀಚಿನ ದಿನಗಳಲ್ಲಿ ಯಾವ ಚಿತ್ರಗಳಲ್ಲಿಯೂ ಕಾಣಿಸದ ರೀತಿಯಲ್ಲಿ ತಂದೆ, ತಾಯಿ ಮಗನ ಸೆಂಟಿಮೆಂಟ್ ದೃಶ್ಯಗಳು ಇಲ್ಲಿವೆ. ತಬಲಾನಾಣಿ ತಮಗೆ ಹಾಸ್ಯದಷ್ಟೇ ಚೆನ್ನಾಗಿ ಭಾವನಾತ್ಮಕ ದೃಶ್ಯಗಳು ಕರಗತವಾಗಿವೆ ಎಂದು ತೋರಿಸಿಕೊಟ್ಟಿದ್ದಾರೆ. ನಟಿ ವೀಣಾ ಸುಂದರ್ ಅವರ ತಾಯಿ ಪಾತ್ರವಂತೂ ಎಲ್ಲ ಪ್ರೇಕ್ಷಕರ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಇದು ಕಲಾವಿದರ ನಟನೆ ಎನ್ನುವುದನ್ನು ಮರೆತು ಪಾತ್ರಗಳೊಂದಿಗೆ ಮೈಮರೆತು ಹೋಗುವಂತೆ ಸನ್ನಿವೇಶ ಹೊಸೆದಿರುವುದೇ ಈ ಚಿತ್ರ ಪ್ರೇಕ್ಷಕರ ಮನಗೆಲ್ಲಲು ಪ್ರಮುಖ ಕಾರಣ ಎನ್ನಬಹುದು. ಆದಿತ್ಯ ಶಶಿಕುಮಾರ್ ಅವರಿಗೆ ಇದು ಕಮ್ ಬ್ಯಾಕ್ ಆಗುವ ಸಾಧ್ಯತೆ ಎದ್ದು ಕಾಣಿಸಿದೆ. ಹೆತ್ತವರು ಮತ್ತು ಪ್ರೇಯಸಿ ಇಬ್ಬರು ಕೂಡ ರಾಶಿ ಪ್ರೀತಿ ತೋರಿಸಿದಾಗ ಹುಡುಗನ ಆಯ್ಕೆ ಯಾವುದಾಗಬೇಕು? ನಮ್ಮ ಅಭ್ಯಾಸ, ಹವ್ಯಾಸಗಳು ನಮ್ಮ ಬಾಳನ್ನು ಹೇಗೆಲ್ಲ ಬದಲಾಯಿಸುತ್ತವೆ ? ವಿದ್ಯಾರ್ಥಿ ಬದುಕಿನಿಂದಲೇ ನಾವು ಹೇಗೆ ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು ಮೊದಲಾದ ವಿಚಾರಗಳನ್ನು ಅತ್ಯಂತ ಆಪ್ತವಾಗಿ, ಮನಮುಟ್ಟುವಂತೆ ತೋರಿಸಿರುವ ಕೀರ್ತಿ ರಾಶಿ ಚಿತ್ರಕ್ಕೆ ಸಲ್ಲುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,