ಶಬರಿ : ಇದು ಬರೀ ಪ್ರೀತಿ, ಪ್ರೇಮದ ಕಥೆಯಲ್ಲ!
ಚಿತ್ರ: ಶಬರಿ
ನಿರ್ದೇಶನ: ಒರಟ ಶ್ರೀ
ನಿರ್ಮಾಣ: ರಮೇಶ್ ಬಿ, ಬದ್ರಿ ಮತ್ತುವಿಷ್ಣುಕಾಂತ್
ತಾರಾಗಣ: ಸಮರ್ಥ್ ರಮೇಶ್, ಕೃತ್ತಿಕಾ ಗೌಡ, ಧನ್ವಿ ಚಿನ್ನು ಮುಂತಾದವರು.
ಒಂದು ಜೀಪ್ ಮತ್ತು ಅದನ್ನು ಪ್ರೀತಿಸುವ ಯುವಕನ ಮಧ್ಯೆ ನಡೆಯುವ ಕಥೆಯೇ ಶಬರಿ.
ಶಬರಿ ಎನ್ನುವ ಹೆಸರಿಗೆ ಆಸ್ತಿಕ ಹಿಂದೂ ಭಾವನೆಗಳೊಂದಿಗೆ ಬಂಧವಿದೆ. ರಾಮನಿಗಾಗಿ ಕಾದ ಶಬರಿ ಎನ್ನುವುದು ಅದರಲ್ಲಿ ತುಂಬ ಮುಖ್ಯವಾಗಿರುವಂಥದ್ದು. ಇಲ್ಲಿಯೂ ಶಬರಿ ಇದ್ದಾಳೆ. ಇವಳು ಕೂಡ ಈ ಚಿತ್ರದ ನಾಯಕ ರಾಮ್ ಗಾಗಿ ಕಾದಂತಿರುತ್ತಾಳೆ. ಹಾಗಂತ ಇಲ್ಲಿನ ಶಬರಿ ಮುದುಕಿಯಲ್ಲ ಬಾಲಕಿ. ಹೀಗಾಗಿ ಈ ಕಥೆಯಲ್ಲಿ ಅರ್ಜುನ ಎನ್ನುವ ಜೀಪ್ ಜೊತೆಗೆ ರಾಮ್ ಎನ್ನುವ ನಾಯಕ ಮತ್ರು ಶಬರಿ ಎನ್ನುವ ಬಾಲಕಿಯ ಕಥೆ ಇದೆ. ಅದನ್ನು ನಿರ್ದೇಶಕರು ಆಸಕ್ತಿಕರವಾಗಿ ಹೇಳಿದ್ದಾರೆ.
ರಾಮ್ ಜೀಪ್ ಇಷ್ಟಪಡಲು ತುಂಬ ಮುಖ್ಯವಾದ ಕಾರಣಗಳಿವೆ. ಆತನಿಗೆ ಜೀಪ್ ಮೇಲೆ ಬಾಲ್ಯದಿಂದಲೇ ಪ್ರೀತಿ ಹುಟ್ಟಿರುತ್ತದೆ. ಇದೇ ಸಂದರ್ಭದಲ್ಲಿ ಗೌಡನ ಮಗಳು ಸೀತೆ ಕೂಡ ಪರಿಚಯವಾಗಿರುತ್ತಾಳೆ. ಸೀತೆಗೆ ರಾಮ್ ಯಾಕೆ ಇಷ್ಟ ಮತ್ತು ರಾಮ್ ಗೆ ಸೀತೆ ಯಾಕೆ ಇಷ್ಟ ಎನ್ನುವುದಕ್ಕೆ ಬೇರೆಯದೇ ಆದ ಎರಡು ಕಾರಣಗಳಿವೆ. ಅವು ಏನು? ಅದರಿಂದ ಎದುರಾಗುವ ಸಮಸ್ಯೆ ಏನು ಎನ್ನುವುದನ್ನು ಚಿತ್ರ ಮಂದಿರದಲ್ಲೇ ನೋಡಿದರೆ ಸೊಗಸು.
ಚಿತ್ರದ ನಾಯಕ ರಾಮ್ ಪಾತ್ರದಲ್ಲಿ ಸಮರ್ಥ್ ರಮೇಶ್ ನಟಿಸಿದ್ದಾರೆ. ಆರಂಭದಲ್ಲಿ ಜೀಪ್ ಹುಚ್ಚನಾಗಿ ಬಳಿಕ ನೊಂದ ಪತಿಯಾಗಿ, ಆನಂತರ ವಾತ್ಸಲ್ಯ ಭರಿತ ಬಂಧುವಾಗಿ ಬದಲಾಗುವ ರೀತಿ ಅದ್ಭುತ.
ಈ ಎಲ್ಲ ಸಂದರ್ಭಕ್ಕೆ ಸರಿಯಾಗಿ ವಾಯ್ಸ್ ಮಾಡ್ಯುಲೇಶನ್ ಕೂಡ ಮಾಡಿರುವುದು ಸಮರ್ಥ್ ಪಾತ್ರಕ್ಕಾಗಿ ಮಾಡಿರುವ ತಯಾರಿಯನ್ನು ತೋರಿಸುತ್ತದೆ. ಅದರಲ್ಲೂ ಕುಡುಕನಾಗಿ ಆಡುವ ಮಾತುಗಳು ನಗು ಸೃಷ್ಟಿಸುತ್ತವೆ.
ರಾಮ್ ನನ್ನು ಪ್ರೀತಿಸುವ ಕಥಾನಾಯಕಿ ಸೀತಾ ಪಾತ್ರವನ್ನು ಕೃತ್ತಿಕಾ ಗೌಡ ಮಾಡಿದ್ದಾರೆ. ಆರಂಭದಲ್ಲಿ ರಾಮ್ ದ್ವೇಷಿಯಂತೆ ಕಾಣಿಸುವ ಸೀತಾ ಕಥೆಯ ಫ್ಲ್ಯಾಷ್ ಬ್ಯಾಕ್ ಎಂಥವರನ್ನೂ ಕಣ್ಣೀರಾಗಿಸುತ್ತದೆ. ಇವರಿಬ್ಬರ ಮಧ್ಯೆ ಟೈಟಲ್ ರೋಲ್ ಶಬರಿ ರೂಪದಲ್ಲಿ ಪ್ರತ್ಯಕ್ಷವಾಗುವ ಧನ್ವಿ ನಟನೆಯ ಬಗ್ಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗ್ತಿದೆ. ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಧನ್ವಿ ತನ್ನ ನಟನೆಯಿಂದ ನವರಸಗಳನ್ನು ಕೂಡ ತೋರಿಸುವಲ್ಲಿ ಗೆದ್ದಿದ್ದಾರೆ.
ಶಬರಿ ಮತ್ತು ರಾಮ್ ನಟನೆಯ ಹಾಡು ಈಗಾಗಲೇ ಎಲ್ಲರ ಮೆಚ್ಚಿನ ಗೀತೆಯಾಗಿ ಬದಲಾಗಿದೆ. ಹಾಡಿನ ಮ್ಯೂಸಿಕ್ ಡೈರೆಕ್ಟರ್ ಬಿ.ಆರ್ ಹೇಮಂತ್ ಕುಮಾರ್ ಕೂಸ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಛಾಯಾಗ್ರಹಣ ಸೇರಿದಂತೆ ತಾಂತ್ರಿಕವಾಗಿಯೂ ಗಮನ ಸೆಳೆಯುವ ಸಿನೆಮಾ ಇದು.
ಬ್ರೇಕ್ ಬಳಿಕ ಮರಳಿ ಬಂದಿರುವ ಒರಟ ಶ್ರೀ, ನಿರೀಕ್ಷೆಗೆ ತಕ್ಕಂಥ ಒಂದು ಅದ್ಭುತ ಸಂದೇಶದ ಚಿತ್ರವನ್ನು ನೀಡಿದ್ದಾರೆ. ಇದು ಜನಸಾಮಾನ್ಯರ ಸಿನೆಮ ಎಂದು ಹೇಳಬಹುದು. ಯಾಕೆಂದರೆ ಯೂತ್ ಗೆ ವಾಹನದ ಪ್ರೀತಿ, ಪ್ರೇಮಿಗಳಿಗೆ ಪ್ರೇಮದ ನೀತಿ, ಮಗುವಿನೊಂದಿಗಿನ ವಾತ್ಸಲ್ಯ ಇವೆಲ್ಲವನ್ನು ಕುಟುಂಬ ಸಮೇತ ಸವಿಯಬೇಕಾದರೆ ಚಿತ್ರ ಮಂದಿರಕ್ಕೇನೇ ಹೋಗಬೇಕು.