ಯೋಗ್ಯತೆಯ ಕಡೆಗಿನ ಅಮೋಘ ಪಯಣ
ಚಿತ್ರ: ಅಯೋಗ್ಯ 2****
ನಿರ್ದೇಶನ: ಮಹೇಶ್ ಕುಮಾರ್
ನಿರ್ಮಾಣ: ಎಮ್.ಮುನೇಗೌಡ
ತಾರಾಗಣ: ನೀನಾಸಂ ಸತೀಶ್, ರಚಿತಾ ರಾಮ್, ರವಿಚಂದ್ರನ್, ರವಿಶಂಕರ್ ಮೊದಲಾದವರು.
ಸಾಮಾನ್ಯವಾಗಿ ಪ್ರೇಮಕಥೆಗಳು ಮದುವೆಯೊಂದಿಗೆ ಶುಭಂ ಆಗಿಬಿಡುತ್ತದೆ. ಅಯೋಗ್ಯ ಕೂಡ ಹಾಗೆಯೇ ಆಗಿತ್ತು. ಆದರೆ ಪ್ರೇಮ ಸಫಲತೆಯ ತನಕದ ಪಯಣ ಮನೋರಂಜನಾತ್ಮಕವಾಗಿತ್ತು. ಈಗ ಅಯೋಗ್ಯ 2 ಬಂದಿದೆ. ವಿಶೇಷ ಏನೆಂದರೆ, ಅಲ್ಲಿ ಮದುವೆಯಾದರೆ ಇಲ್ಲಿ ಪ್ರಥಮ ರಾತ್ರಿಯಿಂದಲೇ ಕಥೆ ಮುಂದುವರಿಯುತ್ತದೆ.
ಈ ಬಾರಿ ಅಯೋಗ್ಯನ ಪಯಣ ಇರುವುದು ಯೋಗ್ಯತೆಯ ಕಡೆಗೆ. ಆತ ಸ್ವಯಂ ದುಡಿದು ಸಂಪಾದಿಸುವವನಾಗಬೇಕು ಎನ್ನುವುದು ಪ್ರಥಮ ರಾತ್ರಿ ಪತ್ನಿಯೇ ಮುಂದಿಡುವ ಬೇಡಿಕೆ. ಅಥವಾ ತಾನೇ ಕೆಲಸಕ್ಕೆ ಹೋಗುವುದಾಗಿ ಪಟ್ಟು ಬೀಳುತ್ತಾಳೆ. ಆದರೆ ಆತ ಎರಡನ್ನೂ ನಿರಾಕರಿಸಿದಾಗ ಆಕೆ ಮನೆಯನ್ನೇ ತೊರೆಯುತ್ತಾಳೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ.
ಈ ಚಿತ್ರದಲ್ಲಿ ಅಯೋಗ್ಯ ಸಿದ್ದೇಗೌಡನಾಗಿ ಸತೀಶ್ ತಮ್ಮ ಶೈಲಿಯ ನಟನೆಯನ್ನು ಮುಂದುವರಿಸಿದ್ದಾರೆ. ಹೊಸ ಶಕ್ತಿಯಾಗಿ ಹೊಸ ಪಾತ್ರಗಳ ಎಂಟ್ರಿಯಾಗಿದೆ. ಶಿವರಾಜ್ ಕೆ ಆರ್ ಪೇಟೆ ಮತ್ತು ಗಿರೀಶ್ ಶಿವಣ್ಣ ಹಾಸ್ಯದಲ್ಲಿ ಸಾಥ್ ನೀಡಿದ್ದಾರೆ. ರಚಿತಾ ಅವರಿಗೆ ಮೊದಲಾದರ್ಧದಲ್ಲಿ ಅಷ್ಟೇನೂ ಪ್ರಾಧಾನ್ಯತೆ ಇಲ್ಲ. ಆದರೆ ಸೆಕೆಂಡ್ ಹಾಫ್ ನಲ್ಲಿ ಬಂದು ಅಭಿಮಾನಿಗಳ ಮನತಣಿಸುತ್ತಾರೆ.
ಬಚ್ಚೇಗೌಡನಾಗಿ ರವಿಶಂಕರ್ ಅವರ ನಟನೆ ಇಲ್ಲಿಯೂ ಸವಾಲುಗಳನ್ನು ಒಡ್ಡುತ್ತಾ ಮುಂದುವರಿದಿದೆ. ತಬಲಾನಾಣಿಯವರ ಪಾತ್ರಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ದೇವರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ ಕ್ರೇಜಿಸ್ಟಾರ್ ರವಿಚಂದ್ರನ್ ಸರ್ಪ್ರೈಸ್ ವಿಸಿಟ್ ಕೊಟ್ಟು ಚಿತ್ರದ ಪ್ರಧಾನ ಭಾಗವಾಗಿದ್ದಾರೆ.
ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳು ಚೆನ್ನಾಗಿವೆ. ಮನರಂಜನೆಯ ಜತೆಯಲ್ಲೇ ಹಳ್ಳಿ ಕಥೆಯಲ್ಲಿ ಸಣ್ಣದೊಂದು ನೀತಿಯನ್ನು ಕೂಡ ತೋರಿಸಲಾಗಿದೆ. ಹೀಗಾಗಿಯೇ ನಿರ್ದೇಶಕ ಮಹೇಶ್ ಕುಮಾರ್ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.