ಕೊಂದವರು ಯಾರು? ಸತ್ತವರು ಯಾರು?
ಚಿತ್ರ: ತದ್ವಿರುದ್ಧ****
ನಿರ್ದೇಶನ: ವಿನೋದ್ ಜೆ ರಾಜ್
ನಿರ್ಮಾಣ: ವಿಕ್ರಮ್ ರಾಮಯ್ಯ
ತಾರಾಗಣ: ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ರಾಮಯ್ಯ ಮುಂತಾದವರು.
ತೊಂಬತ್ತರ ದಶಕದಲ್ಲಿ ನಡೆದಿದೆ ಎನ್ನಲಾದ ಕೊಲೆಯನ್ನು ತನಿಖೆಯ ಮೂಲಕ ಬಯಲಿಗೆಳೆಯುವ ಕಥೆಯೇ ತದ್ವಿರುದ್ಧ. ಕಥೆಯೊಳಗಿನ ಪ್ರಧಾನ ಅಂಶವನ್ನು ಕೇಂದ್ರವಾಗಿಸಿ ತದ್ವಿರುದ್ಧ ಎನ್ನುವ ಹೆಸರನ್ನು ನೀಡಲಾಗಿದೆ. ಆದರೆ ಸಿನಿಮಾ ನೋಡಲು ಕುಳಿತ ಪ್ರೇಕ್ಷಕನ ಲೆಕ್ಕಾಚಾರ ಕೂಡ ಇಲ್ಲಿ ತದ್ವಿರುದ್ಧವಾಗುತ್ತಾ ಹೋಗುತ್ತದೆ ಎನ್ನುವುದು ವಿಶೇಷ.
ಜೆ.ಡಿ ಕೆರೆ ಎಸ್ಟೇಟ್ ನಲ್ಲಿ ನಾಪತ್ತೆಯಾಗಿರುವ ಸಂಬಂಧಿಯ ಬಗ್ಗೆ ಅಲ್ಲಿನ ಪೊಲೀಸ್ ಸ್ಟೇಷನ್ ಗೆ ದೂರೊಂದು ಬರುತ್ತದೆ. ಆ ದೂರಿನಲ್ಲಿ ಹೇಳುವ ಪ್ರಕಾರ ಆಕೆಯ ರಿಲೇಟಿವ್ ಮಹಿಳೆಯೊಬ್ಬರು ಮೂರು ವರ್ಷಗಳಿಂದ ಸಂಪರ್ಕದಲ್ಲಿಲ್ಲ. ಹಾಗಾದರೆ ಆಕೆ ಎಲ್ಲಿ ಹೋಗಿರಬಹುದು ಎಂದು ಹುಡುಕಾಟ ಶುರುವಾಗುತ್ತದೆ. ಜೆಡಿಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಕಲ್ಪನಾ ನಡೆಸುವ ತನಿಖೆಯಲ್ಲಿ ಅಂಥ ವಿಶೇಷಗಳೇನೂ ಕಾಣುವುದಿಲ್ಲ. ಆದರೆ ಮನೆಯಲ್ಲಿ ಅಡಗಿರುವ ರಹಸ್ಯವನ್ನು ಭೇದಿಸಲು ಆಕೆಯ ಹಿರಿಯ ಅಧಿಕಾರಿಯೇ ಬರಬೇಕಾಗುತ್ತದೆ. ಆತ ಕುಂಟು ಕಾಲಿನ ಆಂಟನಿ. ಆತ ಮಾಡುವ ತನಿಖೆಯಿಂದ ಹೊರ ಬರುವ ಸತ್ಯವೇನು ಎನ್ನುವುದೇ ಚಿತ್ರ ಮುಖ್ಯ ಹೂರಣ.
ಎಸ್ಟೇಟ್ ಒಳಗೆ ಕಾಣೆಯಾಗಿದ್ದಾಳೆ ಎಂದು ಹೇಳಲಾದ ಮಹಿಳೆಯೇ ಮಯೂರಿ ವರ್ಮ. ಆಕೆಯ ಪತಿ ಭೂಷಣ್ ವರ್ಮ. ಮಯೂರಿ ವರ್ಮ ಪಾತ್ರವನ್ನು ಸುಮನ್ ರಂಗನಾಥ್ ನಿರ್ವಹಿಸಿದ್ದಾರೆ. ಇಂದಿಗೂ ಸುಂದರಿಯಾಗಿಯೇ ಕಾಣಿಸುವ ಸುಮನ್ ರಂಗನಾಥ್ ತಮ್ಮ ನೋಟದಲ್ಲೇ ನಿಗೂಢತೆ ಕಾಯ್ದುಕೊಂಡಿದ್ದಾರೆ. ಮತ್ತೆ ಮತ್ತೆ ಬದಲಾಗುವ ಸ್ವಭಾವವನ್ನು ತೋರಿಸಿರುವ ಸುಚೇಂದ್ರ ಪ್ರಸಾದ್ ನಟನೆ ಅಮೋಘ. ತನಿಖಾಧಿಕಾರಿಯಾಗಿ ವಿಕ್ರಮ್ ರಾಮಯ್ಯ ಅವರ ಅಭಿನಯವನ್ನು ಕೂಡ ಮೆಚ್ಚಲೇಬೇಕು.
ಮೊದಲ ಚಿತ್ರದಲ್ಲೇ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ವಿನೋದ್ ಜೆ ರಾಜ್ ಅವರಿಗೆ ಸಲ್ಲುತ್ತದೆ. ತಾವೇ ಛಾಯಾಗ್ರಾಹಕರಾಗಿರುವ ಕಾರಣ, ದೃಶ್ಯಗಳ ಮೂಲಕವೇ ನೇರವಾಗಿ ನಮ್ಮನ್ನು ಚಿತ್ರದೊಳಕ್ಕೆ ಕೊಂಡೊಯ್ಯುತ್ತಾರೆ. ಹಿನ್ನೆಲೆ ಸಂಗೀತ, ಸಂಕಲನ ಸೇರಿದಂತೆ ಪ್ರತಿಯೊಂದು ತಾಂತ್ರಿಕ ವಿಭಾಗದಿಂದಲೂ ಉತ್ತಮ ಕೆಲಸವನ್ನು ತೆಗೆಸಲಾಗಿದೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರಿಯರು, ವಿಂಟೇಜ್ ಸಿನಿಮಾ ಪ್ರಿಯರು ನೋಡಲೇಬೇಕಾದ ಚಿತ್ರ ಇದು. ಯಾವ ಪ್ರೇಕ್ಷಕರನ್ನು ಕೂಡ ನಿರಾಸೆಗೊಳಿಸದು ಎಂದು ಧೈರ್ಯದಿಂದ ಹೇಳಬಹುದು.