Jolly.Film Reviews

Friday, July 31, 2026

 

ಏಳು ಬೀಳಿನ ’ಜಾನು ಜಾಲಿ’ ಪ್ರೇಮ ಕಥೆ

 

 

ಚಿತ್ರ: ಜಾಲಿ****

ನಿರ್ದೇಶನ: ತಾರುಷ್ ಕೃಷ್ಣ

ನಿರ್ಮಾಣ: ಬ್ರಿಜ್ ಯಾದವ್

ತಾರಾಗಣ: ತಾರುಷ್ ಕೃಷ್ಣ, ಪದ್ಮಶ್ರೀ ಸಿ ಜೈನ್, ಶೋಭರಾಜ್ ಮೊದಲಾದವರು.

 

ಜಾಲಿ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅದು ಕೂಡ ಕಾಲೇಜ್ ಹುಡುಗರು ತೆಗೆಸಿಕೊಟ್ಟಂಥ ಕೆಲಸ. ಜಾಲಿ ಅನಾಥ. ಆತ ತಾನು ಪ್ರೀತಿಸುವ ಹುಡುಗಿಯಲ್ಲಿ ತಾಯಿಯನ್ನು ಕಾಣುತ್ತಾನೆ. ಆಕೆಯ ಹೆಸರು ಜಾನು. ತಾಯಿಯಿಲ್ಲದೆ ತಂದೆ ಪ್ರೀತಿಯಲ್ಲಿ ಬೆಳೆದ ಹುಡುಗಿ. ಆಕೆ ಜಾಲಿಯಲ್ಲಿ ತಂದೆಯನ್ನು ಕಾಣುತ್ತಾಳೆ. ಇನ್ನೇನು ಇವರಿಬ್ಬರು ಪ್ರೀತಿಸಿ ಒಂದಾಗಬೇಕು ಎನ್ನುವಷ್ಟರಲ್ಲಿ ವೈದ್ಯರು ಒಂದು ಆಘಾತಕಾರಿ ಸುದ್ದಿ ಹೇಳುತ್ತಾರೆ. ಜಾನುಗೆ ಎಚ್ ಐ ವಿ ಸೋಂಕು ಇದೆ ಎನ್ನುತ್ತಾರೆ. ಅಲ್ಲಿಗೆ ಚಿತ್ರ ಮಧ್ಯಂತರ ತಲುಪಿರುತ್ತದೆ. ಮುಂದೇನಾಯಿತು ಎನ್ನುವುದೇ ಈ ಚಿತ್ರದ ಪ್ರಮುಖ ಘಟ್ಟ. ಅದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.

 

 

ಇದು ಹೊಸಬರ ತಂಡದ ಸಿನಿಮಾ. ಆದರೆ ಯಾವ ಸ್ಟಾರ್ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಮಾದರಿಯಲ್ಲಿ ಚಿತ್ರವನ್ನು ತೆಗೆದಿರುವ ಕೀರ್ತಿ ನಿರ್ದೇಶಕ ತಾರುಷ್ ಕೃಷ್ಣ ಅವರಿಗೆ ಸಲ್ಲುತ್ತದೆ. ಮಾತ್ರವಲ್ಲ, ಸ್ವತಃ ಜಾಲಿ ಎನ್ನುವ ನಾಯಕನಾಗಿಯೂ ನಟಿಸಿರುವ ತಾರುಷ್, ಎತ್ತರದಲ್ಲಿ ಹಾಗೂ ಧ್ವನಿಯಲ್ಲಿ ಸುದೀಪ್ ಅವರನ್ನು ನೆನಪಿಸುತ್ತಾರೆ. ಆದರೆ ಚಿತ್ರದ ತುಂಬ ತಾವು ಓರ್ವ ಪುನೀತ್ ರಾಜ್ ಕುಮಾರ್ ಅಭಿಮಾನಿ ಎಂದು ಸಾಬೀತು ಮಾಡಿದ್ದಾರೆ.

 

ಜಾಲಿಯ ಜೋಡಿಯಾಗಿ ಜಾನು ಪಾತ್ರದಲ್ಲಿ ಪದ್ಮಶ್ರೀ ಜೈನ್ ಭರವಸೆಯ ನಾಯಕಿಯಾಗಿ ಕಾಣಿಸಿದ್ದಾರೆ. ಈಕೆಯ ತಂದೆಯಾಗಿ  ನಟಿಸಿರುವ ಕೃಷ್ಣಪ್ಪ ವೇಣುಗೋಪಾಲ್, ದಾದ ಎನ್ನುವ ಪಾತ್ರದಿಂದ ಕುತೂಹಲ ಮೂಡಿಸುತ್ತಾರೆ. ಆರ್.ಕೆ ಎನ್ನುವ ಮತ್ತೋರ್ವ ರೌಡಿಯಾಗಿ ಶೋಭರಾಜ್ ನಟನೆ ಎಂದಿನಂತೆ ಲವಲವಿಕೆಯಿಂದ ಕೂಡಿದೆ.

 

ರೇಖಾದಾಸ್, ಸುಷ್ಮಿತಾ ಜಗ್ಗಪ್ಪ, ಮಹಾಂತೇಶ್ ಹೀರೇಮಠ ಮೊದಲಾದ ಕಲಾವಿದರು ಒಂದೊಂದೇ ದೃಶ್ಯದಲ್ಲಿ ಬಂದರೂ ನೆನಪಿಟ್ಟುಕೊಳ್ಳುವಂಥ ಪಾತ್ರಗಳನ್ನು ಮಾಡಿದ್ದಾರೆ. ತಾರುಷ್ ಕೃಷ್ಣ ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದಾರೆ. ನಿತಿನ್ ರಾಜ್ ಸಂಗೀತದಲ್ಲಿನ ಹಾಡುಗಳು ಹೆಜ್ಜೆ ಹಾಕುವಂತಿವೆ. ಯೋಗೇಶ್ವರನ್ ಛಾಯಾಗ್ರಹಣದಲ್ಲಿ ಅದ್ಧೂರಿತನ ಎದ್ದು ಕಾಣುತ್ತದೆ.

 

ಇದೊಂದು ಪ್ರೇಮಕಥೆಯುಳ್ಳ ಚಿತ್ರ. ಆದರೆ ಇಂದಿನ ನಿಜವಾದ ಪ್ರೇಮಿಗಳು ಹೇಗೆ ಪ್ರಾಣ ಪಣಕ್ಕಿಟ್ಟು ಪ್ರೇಮಿಸಬಲ್ಲರು ಎಂದು ತೋರಿಸಿರುವಂಥ ಆ್ಯಕ್ಷನ್ ಡ್ರಾಮ. ಹೀಗಾಗಿಯೇ ಜಾಲಿ ಬಹುವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ‌ ಚಿತ್ರ.

 

Copyright@2018 Chitralahari | All Rights Reserved. Photo Journalist K.S. Mokshendra,