ಅಮರ ಸ್ನೇಹದ ಅನುಬಂಧ ಸಾರುವ ಅಮರ್ಥ
ಚಿತ್ರ: ಅಮರ್ಥ 4/5 Rating Star
ನಿರ್ದೇಶನ: ಗುರುಹೆಗ್ಡೆ ಮತ್ತು ವಿನಯ್ ಪ್ರೀತಮ್
ನಿರ್ಮಾಣ: ಕನ್ಯಾನ ಸದಾಶಿವ ಶೆಟ್ಟಿ
ತಾರಾಗಣ: ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಮೊದಲಾದವರು.
ಕರಾವಳಿ ತೀರದ ಅಮೃತಹಳ್ಳಿ ಎನ್ನುವಲ್ಲಿ ನಡೆಯುವ 25 ವರ್ಷಗಳ ಘಟನೆಯನ್ನು ಅಮರ್ಥದ ಮೂಲಕ ನೀಡಲಾಗಿದೆ. ಲಕ್ಷ್ಮೀ ಎನ್ನುವ ವಿಚ್ಛೇದಿತ ಕಯುವತಿಯೋರ್ವಳು ತನ್ನ ಹಳ್ಳಿಗೆ ಮರಳುತ್ತಾಳೆ. ಇದೇ ಸಂದರ್ಭದಲ್ಲಿ ಆಕೆಗೆ ಬಾಲ್ಯದಲ್ಲಿ ರಮೇಶನೊಂದಿಗೆ ಮೂಡಿದ ಮೊದಲ ಪ್ರೇಮದ ನೆನಪಾಗುತ್ತದೆ. ಸುಮಾರು ಎರಡು ದಶಕದ ಬಳಿಕ ಅವರು ಸೇತುವೆಯೊಂದರ ಮೇಲೆ ಭೇಟಿಯಾಗುತ್ತಾರೆ. ಈ ಘಟನೆ ಎರಡು ದಶಕಗಳ ಹಿಂದಿನ ಭಾವನೆಗಳಿಗೆ ಸೇತುವೆಯಾಗುತ್ತದೆ. ಬಾಲ್ಯದ ಅವರ ಸ್ನೇಹದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ಎನ್ನುವುದೆಲ್ಲವನ್ನೂ ಅತ್ಯಂತ ರಸವತ್ತಾಗಿ ಹೇಳಿರುವ ಚಿತ್ರವೇ ಅಮರ್ಥ.
ಲಕ್ಷ್ಮೀ ಪಾತ್ರವನ್ನು ಮೇಘನಾ ರಾಜ್ ಆಕರ್ಷಕವಾಗಿ ನಿಭಾಯಿಸಿದ್ದಾರೆ. ಅದೇ ರೀತಿ ರಮೇಶ್ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಲೀಲಾಜಾಲವಾಗಿ ಸೇರಿಕೊಂಡಿದ್ದಾರೆ. ಈ ಎರಡು ಪಾತ್ರಗಳು ಮುಂದೇನು ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಬಗ್ಗೆ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕುತೂಹಲದಿಂದ ನೋಡುವಂತೆ ಮಾಡುವ ಚಿತ್ರ ಇದು. ನಾಯಕ, ನಾಯಕಿ ಸೇರಿದಂತೆ ಇಬ್ಬರ ಹಾಗೂ ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುವಂಥ ಬಾಲಕಲಾವಿದರನ್ನೇ ಬಳಸಿರುವುದು ವಿಶೇಷ.
ಮಧ್ಯಂತರದ ಬಳಿಕ ಚಿತ್ರವು ಪ್ರೇಕ್ಷಕರನ್ನು ಸಂಪೂರ್ಣವಾಗಿ ತನ್ನ ಮಡಿಗೆ ಸೇರಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಚಿತ್ರದಿಂದ ಹೊರಗೆ ಬಂದು ಯೋಚಿಸುವ ಅವಕಾಶ ಕೂಡ ಸಿಗುವುದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಅಂತ್ಯದಲ್ಲಿ ಸಿನೆಮಾ ಶೈಲಿಯೇ ಬದಲಾಗುವ ರೀತಿ ಇದೆ. ಆ ಅನುಭವ ಚಿತ್ರಮಂದಿರದಲ್ಲೇ ಸಿಕ್ಕರೆ ಚೆನ್ನಾಗಿರುತ್ತದೆ. ಒಟ್ಟು ಎರಡು ಗಂಟೆ ಹದಿನಾರು ನಿಮಿಷಗಳ ಚಿತ್ರ ಪ್ರತಿ ಪ್ರೇಕ್ಷಕರನ್ನು ಭಾವುಕಗೊಳಿಸುವುದು ಖಚಿತ.