ತೆರೆದಿದೆ ಮನೆ ಓ ಬಾ ಅತಿಥಿ..!
ಚಿತ್ರ: ಅನಿರೀಕ್ಷಿತ ಅತಿಥಿಗಳು 3/5 Rating Star
ನಿರ್ದೇಶನ: ಮನೋಜ್ ಅಣ್ಣಯ್ಯ
ನಿರ್ಮಾಣ: ವಿನೋದ್ ಬಸವರಾಜ್
ತಾರಾಗಣ: ವಿವೇಕ್ ಸಿಂಹ, ಮೈತ್ರಿ ಜಗ್ಗಿ ಮತ್ತು ಸಂಪ್ರತಿ ಆಳ್ವ ಮುಂತಾದವರು.
ಈಗಿನ ಕಾಲದಲ್ಲಿ
ನಿಜವಾದ ಪ್ರೇಮಿಗಳು ಯಾರು ಮತ್ತು ಪ್ರೇಮದ ಹೆಸರಲ್ಲಿ ಕಾಮದಾಟ ನಡೆಸುವವರು ಯಾರು ಎಂದು ಪತ್ತೆ ಮಾಡುವುದೇ ಕಷ್ಟ. ಅದು ಎಷ್ಟೊಂದು ಕಷ್ಟ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿರುವ ಚಿತ್ರವೇ ’ಅನಿರೀಕ್ಷಿತ ಅತಿಥಿಗಳು.’
ಅವನೋರ್ವ ಬಾರ್ ಸಪ್ಲೈರ್. ಹೆಸರು ಚಕ್ರವರ್ತಿ. ಆಪ್ತರ ಬಾಯಲ್ಲಿ ಚಕ್ರಿಯೆಂದೇ ಜನಪ್ರಿಯ. ಬಾರ್ ಕೋಳಿ ಸಪ್ಲೈ ಆಗುವ ಜಾಗದಲ್ಲಿ ಒಬ್ಬಳು ಯುವತಿ. ಕೋಳಿ ಕಡಿದು ಮಾಂಸ ಮಾಡಿ ಕೊಡುವ ಆಕೆಯ ಹೆಸರು ಗಿರಿಜಾ. ಆಪ್ತರ ಬಾಯಲ್ಲಿ ಕೋಳಿ ಗಿರಿಜಾ.
ಚಕ್ರವರ್ತಿಗೆ ಗಿರಿಜಾಳನ್ನು ಮದುವೆಯಾಗುವ ಯೋಜನೆ ಇದೆ. ಆದರೆ ಅದಕ್ಕೂ ಮೊದಲು ಗಿರಿಜಾ ಜೊತೆಗೆ ಸೇರಬೇಕೆನ್ನುವುದು ಆತನ ಕನಸು. ಗಿರಿಜಾ ಕೂಡ ಅದಕ್ಕೆ ಸಾಥ್ ನೀಡಲು ಸಿದ್ಧವಾಗುತ್ತಾಳೆ. ಆದರೆ ಆನಂತರ ನಡೆಯುವುದೆಲ್ಲ ತುಂಬಾ ತುಂಬಾ ಅನಿರೀಕ್ಷಿತವಾದಂಥ ಘಟನೆಗಳು.
ಇನ್ನೊಂದು ಪ್ರೇಮ ಕಥೆಯನ್ನು ಚಿತ್ರದ ಆರಂಭದಲ್ಲೇ ತೋರಿಸಲಾಗುತ್ತದೆ. ಅವರಿಬ್ಬರು ಕೂಡ ಊರಾಚೆಗಿನ ರೆಸಾರ್ಟ್ ನಲ್ಲಿ ಕಾಲಕಳೆಯಲು ಯೋಜನೆ ಹಾಕುತ್ತಾರೆ. ಆದರೆ ಮುಂದೇನಾಗುತ್ತದೆ? ಯಾರು ಯಾರ ಪಾಲಿಗೆ ಅನಿರೀಕ್ಷಿತ ಅತಿಥಿಗಳಾಗುತ್ತಾರೆ ಎನ್ನುವುದೇ ಚಿತ್ರದ ಪ್ರಮುಖ ತಿರುವು.
ನಿರ್ದೇಶಕ ಮನೋಜ್ ಅಣ್ಣಯ್ಯ ಅವರ ನಿರ್ದೇಶನದಲ್ಲಿ ಹೊಸತನವಿದೆ. ಛಾಯಾಗ್ರಹಣ, ಸಂಗೀತ ಸೇರಿದಂತೆ ಒಟ್ಟು ಚಿತ್ರದ ತಂತ್ರಜ್ಞಾನವನ್ನು ಹೊಸ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಮನೋಜ್ ಗೆದ್ದಿದ್ದಾರೆ ಎಂದು ಹೇಳಬಹುದು.
ಚಕ್ರವರ್ತಿ ಯಾನೇ ಚಕ್ರಿಯಾಗಿ ಮೈತ್ರಿ ಖ್ಯಾತಿಯ ಜಗ್ಗಿ ನಟಿಸಿದ್ದಾರೆ. ಚಕ್ರಿಯ ಜೋಡಿ ಗಿರಿಜಾ ಪಾತ್ರದಲ್ಲಿ ಸಂಪ್ರತಿ ಆಳ್ವಾ ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಜೋಡಿಯಾಗಿ ವಿಭಿನ್ನ್ ಮತ್ತು ತಾಶ್ವಿ ಎನ್ನುವ ಜೋಡಿಗಳು ಇರುತ್ತಾರೆ. ಶ್ರೀದತ್ತ ಮತ್ತು ಹರಿತ ಶಾ ಈ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಎಲ್ಲ ಪಾತ್ರಗಳ ಮಧ್ಯೆ ಶಕ್ತಿ ಎನ್ನುವ ಪಾತ್ರವಾಗಿ ಬಂದು ಶಕ್ತಿ ನೀಡುವಾತನೇ ವಿವೇಕ್ ಸಿಂಹ.
ಕಥೆ ಬೇರೆ ಬೇರೆ ಮಂದಿಯ ನೋಟದಲ್ಲಿ ಸಾಗುತ್ತದೆ. ಅದಕ್ಕೆ ಪೂರಕವಾಗಿ ಚಿತ್ರವನ್ನು ಆಯಾ ವ್ಯಕ್ತಿಗಳ ದೃಷ್ಟಿಕೋನದಲ್ಲು ಚಿತ್ರೀಕರಿಸಲಾಗಿದೆ. ಹೀಗಾಗಿ ಒಂದೇ ಘಟನೆ ಪರದೆಯ ಮೇಲೆ ಎರಡು ಮೂರು ಬಾರಿ ಬರುತ್ತವೆ. ಆದರೆ ಅವುಗಳನ್ನು ಕೂಡ ಆಸಕ್ತಿಯುತವಾಗಿ ಕಾಣುವಂತೆ ತೋರಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಇದೊಂದು ವಯಸ್ಕರ ಚಿತ್ರ. ಅದನ್ನು ನೆನಪಿಟ್ಟಕೊಂಡು ಥಿಯೇಟರ್ ಗೆ ಬಂದರೆ ಉಳಿದಂತೆ ಕಥೆಯೊಳಗೆ ಮುಳುಗಿಸಿ ಬಿಡುವಂಥ ಚಿತ್ರ ಇದು.