ಬೆದರಿಸುವವರ ಪಾಲಿಗೆ ಬೆಂಕಿಯಾಗುವ ಬೆಂಟ್ಲಿ
ಚಿತ್ರ: ಬೆಂಟ್ಲಿ 4/5 Rating Star
ನಿರ್ದೇಶನ: ಸಂತೋಷ್ ಬಾಲರಾಜ್
ನಿರ್ಮಾಣ: ಶ್ವೇತಾ ಬಾಲರಾಜ್
ತಾರಾಗಣ: ಸಂತೋಷ್ ಬಾಲರಾಜ್, ಸಿಮ್ರಾನ್, ಚರಣ್ ರಾಜ್, ಶ್ರುತಿ ಮುಂತಾದವರು.
ಬೆಂಟ್ಲಿ ಅಂದರೆ ಆ ಊರಿನ ಪ್ರೇಮಿಗಳನ್ನು ಒಂದು ಮಾಡಿಸಿ, ಮದುವೆ ಮಾಡಿಸುವವನೇ ಎಂದು ಖ್ಯಾತಿ. ಆದರೆ ಇದಕ್ಕೆ
ಅಲ್ಲಿನ ಕಡಿದಾಳ್ ಶಿವಯ್ಯನಿಂದ ವಿರೋಧ ಇರುತ್ತದೆ. ಆತ ಊರ ಸಾಹುಕಾರ. ಕ್ರೂರ ವ್ಯಕ್ತಿತ್ವ ಹೊಂದಿದವನು ಕೂಡ ಹೌದು. ಬೆಂಟ್ಲಿ ಮತ್ತು ಆತನಿಗೆ ಕಂಡರಾಗದು. ನಿನ್ನ ಮಗಳೇ ಯಾರನ್ನಾದರೂ ಪ್ರೀತಿಸಿದರೆ ಅವಳನ್ನು ಕೂಡ ಮದುವೆ ಮಾಡಿಸಿ ಕೊಡುತ್ತೇನೆ ಎಂದು ಶಿವಯ್ಯನಲ್ಲೇ ಚಾಲೆಂಜ್ ಹಾಕಿರುತ್ತಾನೆ ಬೆಂಟ್ಲಿ. ಆದರೆ ಶಿವಯ್ಯ ಮದುವೆಯೇ ಆಗಿಲ್ಲ ಎನ್ನುವುದು ಊರವರಿಗೆ ಗೊತ್ತು. ಹೀಗಿರುವಾಗ
ಶಿವಯ್ಯನ ಹಿರಿಯ ಸಹೋದರ ರಾಜೇಂದ್ರಪ್ಪ ವಿದೇಶದಿಂದ ಬರುತ್ತಾನೆ. ರಾಜೇಂದ್ರಪ್ಪನಿಗೆ ಮಡದಿ, ಮಕ್ಕಳು ಕೂಡ ಇರುತ್ತಾರೆ. ರಾಜೇಂದ್ರಪ್ಪನ ದೊಡ್ಡ ಮಗಳು ಕಾಜಲ್ ಳನ್ನು ಕಂಡ ಬೆಂಟ್ಲಿಗೆ ಮೊದಲ ನೋಟದಲ್ಲೇ ಪ್ರೀತಿಯಾಗುತ್ತದೆ. ಆ ಮಗಳನ್ನು ಭಾರತದಲ್ಲೇ ಬಿಟ್ಟು ಹೋಗುವ ರಾಜೇಂದ್ರಪ್ಪನ ಕುಟುಂಬ. ಬೆಂಟ್ಲಿಯ ಪ್ರೇಮಕಥೆ ವಿಭಿನ್ನ ರೂಪ ಪಡೆಯುವುದೇ ಇಲ್ಲಿಂದ. ಅದೇನೇನಾಗುತ್ತದೆ ಎನ್ನುವುದನ್ನು ಅರಿಯಲು ಬೆಂಟ್ಲಿ ಚಿತ್ರ ವೀಕ್ಷಿಸಬೇಕು.
ವೇಗವಾಗಿ ಸಾಗುವ ಕಥೆ ಈ ಚಿತ್ರದ ಹೈಲೈಟ್. ಬೆಂಟ್ಲಿಯಾಗಿ ನಟಿಸಿರುವ ಸಂತೋಷ್ ಬಾಲರಾಜ್ ಖುದ್ದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಂಥ ಮಾಸ್ ಲುಕ್ ಉಳಿಸಿಕೊಂಡೇ ಆಪ್ತವಾಗುವಂಥ ಪಾತ್ರ ಮಾಡಿದ್ದಾರೆ. ಡ್ಯಾನ್ಸ್, ಫೈಟ್ ಗಳಲ್ಲಿ ಇಲ್ಲಿಯೂ ವಿಜೃಂಭಿಸಿದ್ದಾರೆ.
ಕಡಿದಾಳ್ ಶಿವಯ್ಯನ ಪಾತ್ರಕ್ಕೆ ನಟ ಬಲರಾಜ್ ವಾಡಿ ಜೀವ ತುಂಬಿದ್ದಾರೆ. ಇವರ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ಅದನ್ನು ಅದ್ಭುತವಾಗಿ ನಿಭಾಯಿಸಿ ತಾವು ಎಂಥ ನಟ ಎಂದು ತೋರಿಸಿಕೊಟ್ಟಿದ್ದಾರೆ. ಬಹಳ ಸಮಯದ ಬಳಿಕ ವಾಣಿಶ್ರೀಯವರಿಗೂ ಉತ್ತಮ ಪಾತ್ರ ಲಭಿಸಿದೆ. ಶಿವಯ್ಯನ ಅಣ್ಣ ರಾಜೇಂದ್ರಪ್ಪನ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ಅಭಿನಯಿಸಿದ್ದಾರೆ. ರಾಜೇಂದ್ರಪ್ಪನ ಹಿರಿಮಗಳು ಕಾಜಲ್ ಪಾತ್ರವನ್ನು ನವನಟಿ ಸಿಮ್ರಾನ್ ನಿಭಾಯಿಸಿದ್ದಾರೆ. ಶ್ರುತಿಯವರು ಒಂದು ವಿಶೇಷ ಪಾತ್ರಕ್ಕೆ ಜೀವ ತುಂಬಿ ಕಳೆಮೂಡಿಸಿದ್ದಾರೆ.
ದುರದೃಷ್ಟವಶಾತ್ ಸಂತೋಷ್ ಬಾಲರಾಜ್ ಅವರಿಗೆ ಇದು ಕೊನೆಯ ಚಿತ್ರವಾಗಿದೆ. ಆದರೆ ಅವರು ಸದಾ ನೆನಪಿರಿಸಬಹುದಾದ ನಟನೆ ನೀಡಿರುವ ಚಿತ್ರಗಳಲ್ಲಿ ಇದನ್ನು ಕೂಡ ಸೇರಿಸಬಹುದು.
ಜೂಡಾ ಸ್ಯಾಂಡಿ ಸಂಗೀತದಲ್ಲಿನ ಹಾಡುಗಳು ಕೂಡ ಸುಲಭವಾಗಿ ಮನದೊಳಗೆ ಸೇರಬಲ್ಲವು.
ಬೆಂಟ್ಲಿ ಕಾನೂನನ್ನು ಕೈಗೆತ್ತಿಕೊಂಡರು ಕೂಡ ಅದರ ಹಿಂದೆ ಒಂದು ಬಲವಾದ ಕೌಟುಂಬಿಕ ಕಾರಣ ಇರುತ್ತದೆ. ಅದೇನು ಎಂದು ತಿಳಿಯುವ ಕುತೂಹಲ ಇದ್ದರೆ ಈ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಬಹುದು.