A Date.Film Reviews

Friday, September 04, 2026

 

ಒಂದು ದಿನದ ಪ್ರೇಮಲೋಕ

 

 

ಚಿತ್ರ: ಎ ಡೇಟ್ ****

ನಿರ್ದೇಶನ: ವಿಮಲ್ ರಾಜ್ ಎನ್

ನಿರ್ಮಾಣ: ಎ ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಪ್ರೊಡಕ್ಷನ್

ತಾರಾಗಣ: ಸುಜನೀತ್ ಶೆಟ್ಟಿ, ಅಶ್ವಿನಿ ಶೆಣೈ

 

ಆತನಿಗೆ ಲೋಕ ಸುತ್ತುವ ಆಸೆ. ಆಕೆಗೆ ಭಗ್ನ ಪ್ರೇಮದ ನೋವು. ನೊಂದು ಬೆಂದ ಹುಡುಗಿಯನ್ನು ಬೆಂಗಳೂರು ಸುತ್ತಿಸುವ ಯುವಕನಿಗೆ ದಿನದ ಕೊನೆಯಲ್ಲಿ ಆಗಿದ್ದೇನು? ಡೇಟಿಂಗ್ ಗೆ ಕರೆದು ಬಳಿಕ ಆದದ್ದೇನು? ಕುತೂಹಲದ ಪ್ರೇಮಕಥೆಯನ್ನು ಹಂಚುವ ಚಿತ್ರವೇ ಎ ಡೇಟ್.

 

ಮೋನಿಷಾ ದೆಹಲಿಯಿಂದ ಬಂದಿರುವಂಥ ಯುವತಿ. ಆಕೆ ಕೆಲಸ ಮಾಡುವ ಐ.ಟಿ ಸಂಸ್ಥೆಯಲ್ಲೇ ಉದ್ಯೋಗಿಯಾಗಿರುವವನು ಕಾರ್ತಿಕ್.  ಕಾರ್ತಿಕ್ ಒಂದು ದಿನ ಮೋನಿಷಾಳನ್ನು ಡೇಟ್ ಗೆ ಕರೆಯುತ್ತಾನೆ. ಆಕೆಯೂ ಒಪ್ಪುತ್ತಾಳೆ. ಆನಂತರ ಏನಾಗುತ್ತದೆ ಎನ್ನುವುದೇ ಎ ಡೇಟ್ ನ ಕಥೆ.

 

ಪ್ರೇಮಕಥೆಗಳು ಸಿನಿಮಾವಾಗಿ ಬರುತ್ತಲೇ ಇರುತ್ತವೆ. ಪ್ರೇಮ ಜೋಡಿಗಳು ಕೊನೆಯಲ್ಲಿ  ಒಂದಾಗುವುದು ಅಥವಾ ಬೇರಾಗುವ ಮೂಲಕ‌ ಚಿತ್ರ ಕೊನೆಯಾಗುತ್ತದೆ. ಆದರೆ ಪ್ರೇಮಭಗ್ನಗೊಂಡಿರುವ ಯುವತಿಯೊಂದಿಗಿನ ಸ್ನೇಹವನ್ನು ಹೇಳುವ ವಿಭಿನ್ನ ಕಥೆ ಇದು. ಕಥೆ ಮುಂದೆ  ಏನಾಗುತ್ತದೆ ಎನ್ನುವುದಕ್ಕಿಂತಲೂ ಅದೊಂದು‌ ದಿನವನ್ನು  ಚಿತ್ರೀಕರಿಸಿರುವ ರೀತಿ ಮಾತ್ರ ಅದ್ಭುತವಾಗಿದೆ.

ಆಸ್ವಾದಿಸುವಂಥ ಆಕರ್ಷಕ ಹಿನ್ನೆಲೆ ಸಂಗೀತ ಮಾತ್ರವಲ್ಲ ಮೈಮರೆಸುವಂಥ ಹಾಡುಗಳು ಇವೆ. ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಆಸ್ವಾದಿಸುವಂತೆ ತೋರಿಸಲಾಗಿದೆ. ನೂರಾಮೂವತ್ತು ನಿಮಿಷಗಳ ಕಾಲ ಚಿತ್ರ ಇದ್ದರೂ ಪ್ರತಿಯೊಂದು ನಿಮಿಷವನ್ನು ಕೂಡ ಆಸ್ವಾದಿಸುವಂತೆ ಇದೆ.

 

ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ನಟಿಸಿರುವ ಕಾರ್ತಿಕ್ ಪಾತ್ರಧಾರಿ ಸುಜನೀತ್ ಶೆಟ್ಟಿ ಯುವ ನಾಯಕರ ಪಟ್ಟಿ ಸೇರಬಲ್ಲಂಥ ಕಲಾವಿದ. ಮೋನಿಷಾ ಪಾತ್ರದಲ್ಲಿರುವ ಅಶ್ವಿನಿ ಶೆಣೈ ಕೂಡ ಅದ್ಭುತವಾದ ನಟನೆಯನ್ನೇ ನೀಡಿದ್ದಾರೆ. ಬೆರಳೆಣಿಕೆಯ ಪಾತ್ರಗಳನ್ನಿರಿಸಿಕೊಂಡು ಇಂಥದೊಂದು‌ ಚಿತ್ರ ನೀಡಿರುವ ತಂಡವನ್ನು ಮೆಚ್ಚಲೇಬೇಕು. ಪ್ರೇಮಿಗಳು, ಪ್ರೇಮಿಸಬಯಸುವವರು ನೋಡಲೇಬೇಕಾದ ಚಿತ್ರ ಇದು.

 

Copyright@2018 Chitralahari | All Rights Reserved. Photo Journalist K.S. Mokshendra,