ವಿಷಕಾರಿ ಮನದ ವಿನಾಶಕಾರಿ ಕಥೆ
ಚಿತ್ರ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್ ದಾಸ್
ನಿರ್ಮಾಣ: ಮಾನ್ಸ್ಟರ್ ಮೈಂಡ್ ಸೆಟ್, ಕೆ.ವಿ.ಎನ್
ತಾರಾಗಣ: ಯಶ್, ನಯನ್ ತಾರಾ ಮೊದಲಾದವರು.
ಇದು ಸ್ವಾತಂತ್ರ್ಯ ಕಾಲದ ಗೋವಾದಲ್ಲಿ ನಡೆದ ಕಥೆ. ಹಾಗಾಗಿಯೇ ಇದರಲ್ಲಿ ಪೋರ್ಚುಗೀಸರಿದ್ದಾರೆ. ಅಂದಿನ ಪೊಲೀಸರಿದ್ದಾರೆ. ಕ್ರೌರ್ಯ ತುಂಬಿದ ವ್ಯಾಪಾರಗಳಿವೆ. ಇಂಥ ಕಾಲದಲ್ಲಿ ತೀರ ಸಂಕಷ್ಟಕ್ಕೆ ಒಳಗಾದ ಅಕ್ಕ ಮತ್ತು ತಮ್ಮನ ಕಥೆ ಇದು. ಅಕ್ಕ ನಯನ್ ತಾರಾ ಆದರೆ ತಮ್ಮ ರಾಯನಾಗಿ ಯಶ್ ಅಭಿನಯಿಸಿದ್ದಾರೆ.
ಯಶ್ ಅವರಿಗೆ ಇದು ಹೊಸ ಮಾದರಿಯ ಪಾತ್ರ. ಯಾಕೆಂದರೆ ಇಲ್ಲಿ ಅಂತರಂಗದ ಶತ್ರು ಇದ್ದಾನೆ. ಬಹಿರಂಗದ ಶತ್ರುಗಳನ್ನು ಎದುರಿಸಲು ಸದಾ ಕೈಯ್ಯಲ್ಲಿ ಕೋವಿ ಹಿಡಿದೇ ತಿರುಗಾಡುತ್ತಾನೆ ರಾಯ. ಆದರೆ ಅಂತರಂಗದ ಶತ್ರು ಮುಖಾಮುಖಿಯಾದಾಗ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ಚಿತ್ರ.
ರಾಕಿಂಗ್ ಸ್ಟಾರ್ ಗೆ ಇಲ್ಲಿ ಮೂರು ಲುಕ್ ಗಳಿವೆ. ಮಾತ್ರವಲ್ಲ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ತಂದೆ ಮತ್ರು ಮಗ ಎನ್ನುವ ಎರಡು ಪಾತ್ರಗಳಿಗೂ ಜೀವ ನೀಡಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಮನಮುಟ್ಟುವಂಥ ಸಂಭಾಷಣೆಗಳಿಗೂ ಧ್ವನಿಯಾಗಿದ್ದಾರೆ. ಯಶ್ ಅವರನ್ನು ಹೊರತು ಪಡಿಸಿದರೆ ಅಷ್ಟೇ ಪರಿಣಾಮಕಾರಿಯಾಗಿ ಕಾಡುವ ಪಾತ್ರ ನಯನ್ ತಾರಾ ಅವರದ್ದು. ಅದೇ ರೀತಿ ಕಿಯಾರಾ ಮತ್ರು ತಾರಾ ಸುತಾರಿಯಾ ಕೂಡ ಗಮನ ಸೆಳೆಯುತ್ತಾರೆ. ಕ್ಲೈಮ್ಯಾಕ್ಸ್ ನಲ್ಲಿ ರುಕ್ಮಿಣಿ ವಸಂತ್ ಕೂಡ ಸ್ಕೋರ್ ಮಾಡಿದ್ದಾರೆ.
ಇದು ಒಂದು ಕಮರ್ಷಿಯಲ್ ಸಿನಿಮಾ ಮಾತ್ರವಲ್ಲ. ಕಮರ್ಷಿಯಲ್ ಅಂಶಗಳೊಂದಿಗೆ ಇರುವಂಥ ಪ್ರಯೋಗಾತ್ಮಕ ಚಿತ್ರ ಕೂಡ ಹೌದು. ದೊಡ್ಡ ಮಟ್ಟದ ಬಂಡವಾಳ ಹಾಕಿ ಇಂಥದೊಂದು ಪ್ರಯೋಗ ನಡೆಸಿರುವುದಕ್ಕಾಗಿ ಯಶ್ ಅವರನ್ನು ಅಭಿನಂದಿಸಲೇಬೇಕು. ಅಭಿಮಾನಿಗಳ ಪಾಲಿಗೆ ಇದು ಮತ್ತೊಂದು ಸಂಭ್ರಮದ ಮಣಿಯಾಗುವುದರಲ್ಲಿ ಸಂದೇಹವಿಲ್ಲ.