ಈ ಬಾಸ್ ಅಭಿಮಾನಿಗಳ ಪಾಲಿಗೆ ಪಕ್ಕಾ ಕ್ಲಾಸ್!
ಚಿತ್ರ: ಬಾಸ್****
ನಿರ್ದೇಶನ: ವಿ. ಲವ
ನಿರ್ಮಾಣ: ಶ್ರೀ ಪ್ರೊಡಕ್ಷನ್ಸ್
ತಾರಾಗಣ: ತನುಷ್ ಶಿವಣ್ಣ, ವಂದಿತಾ ಗೌಡ, ನೀನಾಸಂ ಸಂದೀಪ್, ಪಾಯಲ್ ಮೊದಲಾದವರು.
ಕರ್ನಾಟಕದ ಒಬ್ಬ ಜನಪ್ರಿಯ ಕ್ರಿಕೆಟರ್ ಬಾಳಿನಲ್ಲಿ ನಡೆಯುವ ಕೆಟ್ಟ ಘಟನೆಯೊಂದನ್ನು ಆಧಾರವಾಗಿಸಿ ಚಿತ್ರದ ಕಥೆ ಸಾಗುತ್ತದೆ. ಅಭಿಮಾನಿಗಳಿಂದ ಬಾಸ್ ಎಂದೇ ಕರೆಸಿಕೊಳ್ಳುವ ಆ ಕ್ರಿಕೆಟರ್ ಹೆಸರು ತನುಷ್. ಎಲ್ಲವೂ ಉತ್ತಮವಾಗಿಯೇ ಇದ್ದ ಸಂದರ್ಭದಲ್ಲಿ ಈ ಬಾಸ್ ಕೊಲೆ ಆರೋಪದಲ್ಲಿ ಜೈಲು ಸೇರಬೇಕಾಗುತ್ತದೆ. ಇದಕ್ಕೆ ಕಾರಣವಾದ ಘಟನೆ ಏನು ಎನ್ನುವುದೇ ಒಟ್ಟು ಚಿತ್ರದ ಹೂರಣ.
ಚಿತ್ರ ನೋಡುವಾಗ ಇದು ಯಾವುದೋ
ನೈಜ ಘಟನೆಯನ್ನು ಆಧಾರಿಸಿದಂತೆ ಕಾಣಿಸುತ್ತದೆ. ಆದರೆ ಖಂಡಿತವಾಗಿ ಇದೊಂದು ಕಾಲ್ಪನಿಕ ಘಟನೆ ಎಂದು ಚಿತ್ರದ ಆರಂಭದಲ್ಲೇ ಸ್ಪಷ್ಟಪಡಿಸಲಾಗುತ್ತದೆ. ತನುಷ್ ಎರಡನೇ ಪತ್ನಿಯಾಗಿ ವಂದಿತಾ ಗೌಡ ನಟಿಸಿದ್ದಾರೆ. ಅವರಿಗೆ ಫೋನಲ್ಲೇ ಕಿರಿಕಿರಿ ನೀಡುವ ಕಾಮಿಯ ಪಾತ್ರವನ್ನು ನೀನಾಸಂ ಸಂದೀಪ್ ನಿಭಾಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪಾತ್ರಗಳು ಕೂಡ ಗಮನ ಸೆಳೆಯುವಂತಿವೆ. ಒಂದು ಅಪರಾಧವನ್ನು ಆಧಾರಿಸಿ ನಡೆಯುವ ಈ ಚಿತ್ರದ ಹೆಚ್ಚಿನ ಪಾತ್ರಗಳಲ್ಲಿ ನೈಜ ಹಿನ್ನೆಲೆಯ ಅಭಿನಯ ಎದ್ದು ಕಾಣುತ್ತದೆ.
ಕ್ರೀಡೆಯಾಗಲೀ, ಸಿನಿಮಾವಾಗಲೀ ಅಭಿಮಾನಿಗಳಿಗೆ ಸದಾ ಪ್ರಿಯವೇ. ಅದರಲ್ಲಿ ಹೆಸರು ಮಾಡಿದ ತಾರೆಯರನ್ನು ಅಪಾರವಾಗಿ ಆರಾಧಿಸುವವರು ಈ ಚಿತ್ರದ ಸನ್ನಿವೇಶವನ್ನು ರಿಲೇಟ್ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಎಲ್ಲ ಸಿನಿಮಾ ಅಭಿಮಾನಿಗಳ ಮನಗೆಲ್ಲುವ ಚಿತ್ರವಾಗಿ ಬಾಸ್ ಮೂಡಿಬಂದಿದೆ.