ಪ್ರೇಮದಲ್ಲಿ ವಂಚಿಸಿದರೆ ಪ್ರೇಯಸಿಯೇ ಮೃತ್ಯು ದೇವತೆ!
ಚಿತ್ರ: ಮೃತ್ಯುದೇವತೆ****
ನಿರ್ದೇಶನ: ನವೀನ್ ಮಹಾದೇವ್
ನಿರ್ಮಾಣ: ನವೀನ್ ಮಹಾದೇವ್
ತಾರಾಗಣ: ಮಹಿನ್ ಕುಬೇರ್, ಸಾರಿಕಾ ರಾವ್, ಡಯಾನ ಜೆಸ್ಸಿಕಾ, ಹಿಮಾ ಮೋಹನ್, ನವೀನ್ ಮಹಾದೇವ್ ಮೊದಲಾದವರು.
ಎರಡು ಯುವ ಪ್ರೇಮಜೋಡಿಗಳು ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ರೆಸಾರ್ಟ್ ಒಂದಕ್ಕೆ ಹೋಗುವ ಕಥೆಯೊಂದಿಗೆ ಆಕರ್ಷಕವಾದ ಆರಂಭ. ಆದರೆ ಪ್ರೇಮಕಥೆಯಂತೆ ಶುರುವಾಗುವ ಚಿತ್ರದಲ್ಲಿ ರೆಸಾರ್ಟ್ ತಲುಪುತ್ತಿದ್ದಂತೆ ಹೊಸದೊಂದು ಟ್ವಿಸ್ಟ್ ಸೃಷ್ಟಿಯಾಗುತ್ತದೆ. ತಮ್ಮ ಜತೆಗಿರುವುದು ಪ್ರೇಮಿಗಳಲ್ಲ, ವಂಚಕರು ಎನ್ನುವ ಸತ್ಯ ಇಬ್ಬರು ಪ್ರೇಯಸಿಯರಿಗೂ ಅರ್ಥವಾಗುತ್ತದೆ. ಆದರೆ ಅವರ ವಂಚನೆ ಯಾವ ರೀತಿಯದ್ದು? ಅದಕ್ಕೆ ಬ್ರೇಕ್ ಹಾಕಲು ಕಥಾ ನಾಯಕಿ ಕೈಗೊಳ್ಳುವ ತೀರ್ಮಾನ ಏನು ಎನ್ನುವುದೇ ಚಿತ್ರದ ಪ್ರಮುಖ ಕಥೆ.
ಮೃತ್ಯುದೇವತೆ ಎನ್ನುವ ಶೀರ್ಷಿಕೆಯ ಬಳಿಯಲ್ಲೇ ಕಾಮದ ಅಟ್ಟಹಾಸಕ್ಕೆ ತಕ್ಕ ಶಾಸ್ತಿ ಎನ್ನುವ ಉಪಶೀರ್ಷಿಕೆ ಇದೆ. ಒಂದು ರೀತಿಯಲ್ಲಿ ಇದರಲ್ಲೇ ಚಿತ್ರದ ಪೂರ್ತಿ ಕತೆಯೇ ಅಡಗಿದೆ.
ದೀಪಾ ಮತ್ತು ಆರತಿ ಇಬ್ಬರು ಸ್ನೇಹಿತೆಯರು. ದೀಪಾಳ ಪ್ರಿಯಕರ ಕಿಶೋರ್. ಆರತಿ ಅನುಷ್ ನನ್ನು ಪ್ರೀತಿಸುತ್ತಿರುತ್ತಾಳೆ. ಅನುಷ್ ಮತ್ತು ಕಿಶೋರ್ ಕೂಡ ಆಪ್ತ ಸ್ನೇಹಿತರು. ಹೀಗಾಗಿಯೇ ನಾಲ್ವರ ತಂಡ ಜತೆಯಾಗಿಯೇ ರೆಸಾರ್ಟ್ ಗೆ ಹೋಗುತ್ತದೆ.
ಚಿತ್ರದಲ್ಲಿ ದೀಪಾ ಪಾತ್ರವನ್ನು ಡಯಾನ ಜೆಸ್ಸಿಕಾ ಮಾಡಿದ್ದಾರೆ. ಸ್ನೇಹಿತೆ ಆರತಿ ಪಾತ್ರವನ್ನು ಸಾರಿಕಾ ರಾವ್ ನಿಭಾಯಿಸಿದ್ದಾರೆ. ನಿರ್ದೇಶಕರು ಈ ಎರಡು ಪಾತ್ರಗಳಿಗೂ ಸಮಾನವಾದ ಅವಕಾಶವನ್ನು ನೀಡಿದ್ದಾರೆ. ಇಬ್ಬರಿಗೂ ಮೃತ್ಯುದೇವತೆ ಎನ್ನುವ ಶೀರ್ಷಿಕೆ ಹೊಂದುತ್ತದೆ. ದೀಪಾ ಜೋಡಿ ಕಿಶೋರ್ ಪಾತ್ರವನ್ನು ಮಹಿನ್ ಕುಬೇರ್ ನಿರ್ವಹಿಸಿದ್ದಾರೆ. ಆರತಿ ಜೋಡಿ ಅನುಷ್ ಆಗಿ ಮಧು ಸೂರ್ಯ ನಟಿಸಿದ್ದಾರೆ.
ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿರುವ ನವೀನ್ ಮಹಾದೇವ್ ನಾಟಿಕೋಳಿ ಮಾದೇವ ಎನ್ನುವ ಪಾತ್ರದಲ್ಲಿ ಕಾಣಿಸಿದ್ದಾರೆ. ತಮ್ಮ ಪಾತ್ರವನ್ನು ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಮೆಚ್ಚಲೇಬೇಕು. ಮಾದೇವನ ತಾಯಿಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ. ಅತ್ತೆ ಮಗಳು ಸಂಧ್ಯಾ ಪಾತ್ರದಲ್ಲಿ ಹಿಮಾ ಮೋಹನ್ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ಜೈಕುಮಾರ್ ಛಾಯಾಗ್ರಹಣದಲ್ಲಿ ಹಸಿರು ಸಿರಿ ಚೆನ್ನಾಗಿ ಕಾಣಿಸಿದೆ. ಸಂಗೀತವೂ ಆಕರ್ಷಕವಾಗಿದೆ.
ಸಿನಿಮಾದಲ್ಲಿ ಪ್ರೇಮ, ಕಾಮ, ಹೊಡೆದಾಟ, ಆತಂಕ ಹೀಗೆ ಎಲ್ಲ ವೈವಿಧ್ಯತೆಯೂ ಇದೆ. ಯುವ ಪ್ರೇಮಿಗಳ ಪಾಲಿಗೆ ಪಾಠದಂತಿರುವ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಾವ ಸಂದೇಹವೂ ಇಲ್ಲ.