ಚಿತ್ರ: ಶಿಖಂಡಿ****
ನಿರ್ದೇಶಕರು: ವಿ. ಗುರುಮೂರ್ತಿ
ನಿರ್ಮಾಪಕರು: ಪೋಲ ಪ್ರವೀಣ್ ಕುಮಾರ್
ಕಲಾವಿದರು: ಯುವರಾಜ್ ಗೌಡ, ನಿಖಿಲ್ ಮಲಿಯಕ್ಕಲ್, ನೀತು ವನಜಾಕ್ಷಿ ಮೊದಲಾದವರು.
ಆತನ ಹೆಸರು ಸೂರ್ಯ. ಒಂದು ಇಂಜನಿಯರಿಂಗ್ ಪ್ರಾಜೆಕ್ಟ್ ಗಾಗಿ ತನ್ನ ತಂಡದೊಡನೆ ಬೆಂಗಳೂರು ತೊರೆದು ಹಳ್ಳಿಗಾಡನ್ನು ಸೇರುತ್ತಾನೆ. ಅಲ್ಲಿ ಸಂಗೀತ ಎನ್ನುವ ಶ್ರೀಮಂತೆ ಹಳ್ಳಿಯ ಮಂದಿಗಾಗಿ ಆಸ್ಪತ್ರೆ ಕಟ್ಟುವ ಕನಸು ಕಂಡಿರುತ್ತಾಳೆ. ಆ ಕನಸಿಗೆ ಜತೆ ನೀಡುವ ಸೂರ್ಯನ ಬಾಳಿಗೆ ಆಕೆಯೂ ಸಾಥ್ ನೀಡುತ್ತಾಳೆ. ಆದರೆ ಈ ಕನಸುಗಳ ನಿರ್ಮಾಣದ ಆರಂಭದಲ್ಲೇ ಅಪಾಯವೊಂದು ಎದುರಾಗುತ್ತದೆ. ಅತೀಂದ್ರೀಯ ಶಕ್ತಿಯ ಒಳಗೊಳ್ಳುವಿಕೆ ಇರುವ ಆ ಘಟನೆಯಿಂದ ನಾಯಕ ಹೇಗೆ ಹೊರಗೆ ಬರುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ಚಿತ್ರದ ಮೊದಲಾರ್ಧವು
ಸೂರ್ಯ ಮತ್ತು ಸಂಗೀತ ಎನ್ನುವ ಪಾತ್ರಗಳ ಸುತ್ತ ಸುತ್ತುತ್ತದೆ. ಸೂರ್ಯನ ಪಾತ್ರದಲ್ಲಿ
ಯುವರಾಜ್ ಗೌಡ ಯುವ ನಾಯಕನಾಗಿ ಮನ ಸೆಳೆಯುವ ನಟನೆ ನೀಡಿದ್ದಾರೆ. ದ್ವಿತೀಯಾರ್ಧದಲ್ಲಿ ಜೋಗತಿಯರ ಆತ್ಮವನ್ನು ಮೈ ಸೇರಿಸಿಕೊಂಡು ಹೊಡೆದಾಟ ನಡೆಸುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ. ಸೂರ್ಯನ ಜತೆಗಾತಿ ಸಂಗೀತ ಪಾತ್ರದಲ್ಲಿ ಖ್ಯಾತಿ ಅಭಿನಯಿಸಿದ್ದಾರೆ. ಇವರ ಅಭಿನಯ ಕಲೆ ಮುಂದೆ ಇವರಿಗೂ ಖ್ಯಾತಿ ತಂದುಕೊಟ್ಟರೆ ಅಚ್ಚರಿ ಇಲ್ಲ.
ಹಾಸ್ಪಿಟಲ್ ಪ್ಲ್ಯಾನ್ ಅನುಷ್ಠಾನಗೊಳಿಸಲು ಕಳಿಸುವ ಇಂಜನಿಯರಿಂಗ್ ತಂಡದ ಬಾಸ್ ಆಗಿ ರಘು ರಾಮನ ಕೊಪ್ಪ ಅಭಿನಯಿಸಿದ್ದಾರೆ. ಇವರ ತಂಡದಲ್ಲಿ ನವೀನ್ ಪಾತ್ರದ ಮೂಲಕ ವಿಜಯ್ ಚೆಂಡೂರ್ ನಕ್ಕು ನಗಿಸುತ್ತಾರೆ. ಹಳ್ಳಿಗಾಡಿನಲ್ಲಿ ಈ ತಂಡಕ್ಕೆ ನೀಡಲಾದ ಮನೆಯಲ್ಲಿ ಕೆಲಸದಾಕೆಯಾಗಿ ಕಾಮಿಡಿ ಕಿಲಾಡಿಗಳು ನಯನಾ ಕಾಮಿಡಿ ಮಾಡಿದ್ದಾರೆ. ಸಿಂಹ ಹೆಸರಿನ ಕೆಲಸಗಾರನಾಗಿ ಕಿರಣ್ ತಾವು ನಗದೇನೇ ಪ್ರೇಕ್ಷಕರನ್ನು ನಗಿಸುತ್ತಾರೆ.
ಚಿತ್ರದಲ್ಲಿ ಪ್ರಮುಖ ಖಳನಾಗಿ ರಾಜ್ ದೀಪಕ್ ಶೆಟ್ಟಿ ಸಾಟಿಯಿಲ್ಲದ ಅಭಿನಯ ನೀಡಿದ್ದಾರೆ. ಅಮರನಾಥ ರಾಜೇಂದ್ರ ಎನ್ನುವ ಈ ಪಾತ್ರದ ಮಾವ ನರಹರಿ ಮೋಕ್ಷೇಂದ್ರನಾಗಿ ಬಲರಾಜ್ವಾಡಿ ಬಲ ನೀಡಿದ್ದಾರೆ. ರಾಜ್ ದೀಪಕ್ ಶೆಟ್ಟಿಯವರಿಗೆ ಸಮಬಲ ಎದುರಾಳಿಯಾಗಿ ಪೂರ್ಣಚಂದ್ರ ಎನ್ನುವ ಪಾತ್ರವಿದೆ. ಆ ಪಾತ್ರಕ್ಕೆ
ನಿಖಿಲ್ ಜೀವ ನೀಡಿದ್ದಾರೆ.
ಜೋಗತಿ ಮಂಜಮ್ಮ ಅವರು ತಮ್ಮದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೀತು ವನಜಾಕ್ಷಿ, ಕಾಮಿಡಿ ಕಿಲಾಡಿ ರಾಘವೇಂದ್ರ
ಸೇರಿದಂತೆ ಒಟ್ಟು
7 ಮಂದಿ ಅವರ ಶಿಷ್ಯೆಯಂದಿರಾಗಿ ನಟಿಸಿದ್ದಾರೆ. ಇವರೆಲ್ಲರ ಸಂಗಮದ ದೃಶ್ಯಗಳು ಮೈ ರೋಮಾಂಚನಗೊಳಿಸುತ್ತವೆ. ಪ್ರೀತಿ, ಪ್ರೇಮ, ಭಕ್ತಿ ಎಲ್ಲವೂ ತುಂಬಿರುವ ಚಿತ್ರ ಶಿಖಂಡಿ ಎನ್ನುವುದರಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವುದು ಖಚಿತ.