ರೌಡಿಯಲ್ಲ, ರಕ್ಷಕ ಈ ರಕ್ಕಿ
ಚಿತ್ರ: ರಕ್ಕಿ
ನಿರ್ದೇಶನ: ವೆಂಕಟ್ ಭಾರದ್ವಾಜ್
ನಿರ್ಮಾಣ: ಸುರೇಶ್ ಸಾಲಿಗ್ರಾಮ
ತಾರಾಗಣ: ರಕ್ಕಿ ಸುರೇಶ್, ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್, ಬಿ ಸುರೇಶ್ ಮೊದಲಾದವರು.
ಈ ಚಿತ್ರದಲ್ಲಿ ಎಲ್ಲವೂ ಇವೆ. ಅಂದರೆ ಮೇಲ್ನೋಟಕ್ಕೆ ಒಂದು ರೌಡಿಸಮ್ ಸಿನಿಮಾದಂತೆ ಆರಂಭವಾಗುವ ಕಥೆಯಲ್ಲಿ ಹಾಸ್ಯ, ಪ್ರೇಮ, ಕೌಟುಂಬಿಕ ಸಂಬಂಧ, ಸ್ನೇಹ ಈ ಎಲ್ಲ ಭಾವಗಳನ್ನು ಒಂದಾಗಿಸಿದ ಸಂಭ್ರಮವಾಗಿಸಿದ್ದಾರೆ ನಿರ್ದೇಶಕ ವೆಂಕಟ್ ಭಾರದ್ವಾಜ್.
ಆತನ ಹೆಸರು ರಕ್ಕಿ. ಡ್ಯಾನಿ ಎನ್ನುವ ಪಾತಕಿಯ ಆಣತಿ ಅನುಸರಿಸುವ ರೌಡಿಯೇ ರಕ್ಕಿ. ಡ್ಯಾನಿಯ ಹತ್ತು ಮಂದಿ ಶಿಷ್ಯಂದಿರ ನಡುವೆ ರಕ್ಕಿಗೆ ಒಳ್ಳೆಯ ಕೆಲಸಗಾರನೆಂಬ ಹೆಸರಿದೆ. ಆ ಗ್ಯಾಂಗ್ ನಲ್ಲಿ ರಕ್ಕಿಗೆ ಸಮನಾಗಿರುವಾತ ಅಂದರೆ ಅದು ಗಣೇಶ ಒಬ್ಬನೇ. ಆದರೆ ರಕ್ಕಿಗೆ ಗಣೇಶನನ್ನು ಕಂಡರಾಗದು. ಯಾಕೆಂದರೆ ರಕ್ಕಿ ಯಾರನ್ನೇ ಹಿಡಿದು ತಂದರು, ಅವರ ಮೇಲೆ ಬಂದೂಕು ಚಲಾಯಿಸುವುದು ಗಣೇಶನೇ. ಇಂಥ ರಕ್ಕಿಯೊಂದಿಗೆ ಡ್ಯಾನಿಯ ಮಗಳಿಗೆ ಪ್ರೀತಿ. ಇದು ಡ್ಯಾನಿಗೂ ತಿಳಿದ ವಿಚಾರವೇ. ಇವೆಲ್ಲದರ ನಡುವೆ ಡ್ಯಾನಿಗೆ ಒಬ್ಬ ರಾಜಕಾರಣಿಯ ಕೊಲೆಗೆ ಸುಪಾರಿ ನೀಡಲಾಗುತ್ತದೆ. ಈ ಕೆಲಸವನ್ನು ಡ್ಯಾನಿಯು ರಕ್ಕಿ ಮತ್ತು ಗಣೇಶ್ ಗೆ ವಹಿಸುತ್ತಾನೆ. ಕೊಲೆಗೆ ಬಲೆ ಹೆಣೆದು ಹೊರಡುವ ಈ ಜೋಡಿಗಳು ಎದುರಿಸಬೇಕಾಗುವ ತಿರುವುಗಳೇ ಚಿತ್ರದ ಪ್ರಮುಖ ಅಂಶ. ಮಧ್ಯಂತರದ ತನಕ ಪ್ರೀತಿ, ಪ್ರೇಮ ಎಂದು ಮಧುರವಾಗಿ ಸಾಗುವ ಚಿತ್ರದ ದ್ವಿತೀಯಾರ್ಧದಲ್ಲಿನ ರಸಾಸ್ವಾದನೆಗೆ ನೀವು ಈ ಚಿತ್ರವನ್ನು ನೋಡಲೇಬೇಕು.
ನವನಟ ರಕ್ಕಿ ಈ ಚಿತ್ರದಲ್ಲಿ ತಮ್ಮದೇ ಹೆಸರಿನ ಪಾತ್ರವನ್ನು ನಿಭಾಯಿಸಿದ್ದಾರೆ. ಮೊದಲ ಚಿತ್ರ ಎನ್ನುವ ಯಾವ ಲಕ್ಷಣಗಳು ಕಾಣದಂತೆ ಆಕರ್ಷಕ ಅಭಿನಯ ನೀಡಿದ್ದಾರೆ. ನಟನೆ ಮಾತ್ರವಲ್ಲ, ಹಾಡು, ಹೊಡೆದಾಟದಲ್ಲೂ ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಕಾಣಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆಶಿಕಾ ಸೋಮಶೇಖರ್ ಮತ್ತು ಪಲ್ಲವಿ ಮಂಜುನಾಥ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಡ್ಯಾನಿಯಾಗಿ ಬಿ ಸುರೇಶ್ ತಾವು ಯಾವ ಪಾತ್ರಕ್ಕೂ ಸೈ ಎಂದು ತೋರಿಸಿದ್ದಾರೆ. ಡಾನ್ ಪತ್ನಿಯಾದರೂ ಕೌಟುಂಬಿಕ ಮಹಿಳೆಯ ಕರ್ತವ್ಯವನ್ನು ನಿಭಾಯಿಸುವ ಪತ್ನಿಯಾಗಿ ಹರಿಣಿ ಮನಗೆಲ್ಲುತ್ತಾರೆ.
ರೇಖಾ ಕುಮಾರ್, ಬಲ ರಾಜ್ ವಾಡಿ, ಸಪ್ನಾ ದೀಕ್ಷಿತ್, ಗೋವಿಂದೇ ಗೌಡ, ರಮೇಶ್ ಪಂಡಿತ್ ಮೊದಲಾದ ಕಲಾವಿದರ ದಂಡೇ ಚಿತ್ರದಲ್ಲಿದೆ. ಎಲ್ಲ ರೀತಿಯಿಂದಲೂ ಮನರಂಜನೆ ನೀಡಬಲ್ಲ ಈ ಚಿತ್ರವನ್ನು ಕುಟುಂಬ ಸಮೇತ ನೋಡಿ ಖುಷಿ ಪಡಬಹುದು.