Deadly Killer.Reviews

Friday, July 03, 2026

 

ಅಡವಿಯಲ್ಲಿ ಅಡಗಿ ಕಾಡುವ ಕೊಲೆಗಾರ

 

ಚಿತ್ರ: ಡೆಡ್ಲಿ ಕಿಲ್ಲರ್‌****

ನಿರ್ದೇಶನ: ಥ್ರಿಲ್ಲರ್‌ ಮಂಜು

ನಿರ್ಮಾಣ: ಪ್ರಶಾಂತ್‌ ಆರ್‌ ತಂಬ್ರಲ್ಲಿ ಮಠ

ತಾರಾಗಣ: ಥ್ರಿಲ್ಲರ್‌ ಮಂಜು, ಅಭಯ್‌ ವೀರ್‌ ಮತ್ತು ನಿವಿಷ್ಕಾ ಮುನಿರತ್ನಂ ಮೊದಲಾದವರು.

 

ಆರು ಜನ ಹಂತಕರು ಕಾಡಿನ ದಾರಿಯಲ್ಲಿ ಪೊಲೀಸರ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಮತ್ತೆ ಪೊಲೀಸರು ಸುತ್ತು ಹಾಕಿ ಬಂಧಿಸುವ ಮೊದಲು ಆ ಕೊಲೆಗಾರರ ಬಾಳಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥೆ.

 

 

ಥ್ರಿಲ್ಲರ್‌ ಮಂಜು ಎನ್ನುವ ಬಹುಮುಖ ಪ್ರತಿಭೆ ತನ್ನ ಪ್ರತಿಭೆಯನ್ನು ಸಂಪೂರ್ಣವಾಗಿ ಪ್ರದರ್ಶಿಸುವ ಪ್ರಯತ್ನ ಮಾಡಿರುವ ಚಿತ್ರ ಇದು. ಸಿನಿಮಾದ ಆರಂಭವೇ ಚೇಸಿಂಗ್‌, ಹೊಡೆದಾಟಗಳಿಂದ ಶುರುವಾಗುತ್ತದೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಆರು ಮಂದಿಯಲ್ಲಿ ಐವರು ಗಂಡಸರು. ಒಬ್ಬಾಕೆ ಮಾತ್ರ ಹೆಣ್ಣು. ಆಕೆ ಡಯಾನ. ಆ ತಂಡದಲ್ಲಿ ಎಲ್ಲರೂ ಡಾನ್‌ ಎಂದೇ ಕರೆಯುವ ಪಾತ್ರವನ್ನು ಥ್ರಿಲ್ಲರ್‌ ಮಂಜು ನಿಭಾಯಿಸಿದ್ದಾರೆ. ಉಳಿದಂತೆ ಒಬ್ಬಾತ ಮೂಗ. ಇನ್ನೊಬ್ಬಾತ ಈಗಲ್.‌ ಮತ್ತಿಬ್ಬರ ಹೆಸರು ಪ್ರಸನ್ನ ಮತ್ತು ಶೋಭರಾಜ್.‌ ಒಬ್ಬೊಬ್ಬರು ಕೂಡ ಒಂದೊಂದು ರೀತಿಯಲ್ಲಿ ಖತರ್ನಾಕ್‌ ಎನಿಸಿಕೊಂಡವರು. ಆದರೆ ಇವರೆಲ್ಲ ಸೇರಿಕೊಳ್ಳುವುದು ಕಾಡಿನ ಮಧ್ಯೆ ಇರುವ ಒಂದು ಭವ್ಯವಾದ ಬಂಗಲೆಯೊಳಗೆ.

ಬಂಗಲೆಯೊಳಗಿರುವವರು ಇಬ್ಬರು. ಜಯ್‌ ಮತ್ತು ಆತನ ಪ್ರೇಯಸಿ ಕಾವೇರಿ ಆ ಬಂಗಲೆಯ ನಿವಾಸಿಗಳು. ಆದರೆ ನಿಜಕ್ಕೂ ಅಲ್ಲಿ ಅವರಿಬ್ಬರೂ ಇದ್ದರೇ? ಅಥವಾ ಅವರಿಬ್ಬರೂ ದೆವ್ವಗಳೇ? ಕ್ಷಣ ಕ್ಷಣಕ್ಕೂ ಕುತೂಹಲ ಸೃಷ್ಟಿಸುತ್ತಾ ಸಾಗುವ ಕತೆ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತದೆ.

 

ಸಸ್ಪೆನ್ಸ್‌ ಥ್ರಿಲ್ಲರ್‌ ಜತೆಗೆ ಹಾರರ್‌ ಸೇರಿಸಿ ಒಂದೊಳ್ಳೆಯ ಕಥೆ ಬರೆದಿದ್ದಾರೆ ಥ್ರಿಲ್ಲರ್‌ ಮಂಜು. ನಿರ್ದೇಶನ ಮಾತ್ರವಲ್ಲ, ಡಾನ್‌ ಪಾತ್ರವನ್ನು ನಿರ್ವಹಿಸುವ ಮೂಲಕ ಮತ್ತೊಮ್ಮೆ ತಮ್ಮ ದಶಕದ ಹಿಂದಿನ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಕರೆಸಬಲ್ಲ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.  ಜಯ್‌ ಪಾತ್ರವನ್ನು ಅಭಯ್‌ ವೀರ್‌ ಮಾಡಿದ್ದಾರೆ. ಜಯ್‌ ಪಾತ್ರಕ್ಕೆ ಎರಡು ಶೇಡ್ಸ್‌ ಇವೆ. ಎರಡನ್ನು ಕೂಡ ಮನಮೋಹಕವಾಗಿ ಅಭಿನಯಿಸಿದ ಕೀರ್ತಿ ಅಭಯ್‌ ವೀರ್‌ ಅವರಿಗೆ ಸಲ್ಲುತ್ತದೆ. ಕಾವೇರಿಯಾಗಿ ನಿವಿಷ್ಕಾ ಮುನಿರತ್ನಂ ನೀಡಿರುವ ಅಭಿನಯದಿಂದ ಪ್ರೇಕ್ಷಕರ  ಪ್ರಶಂಸೆಗಿಟ್ಟಿಸುತ್ತಾರೆ.

 

ಆರಂಭದಲ್ಲಿ ಅಷ್ಟೇನೂ ವಿಶೇಷವಿಲ್ಲ ಎನ್ನುವಂತೆ ತೋರುವ ಕಥೆಗೆ ಮಧ್ಯಂತರಕ್ಕೂ ಮೊದಲೇ ವಿಶೇಷ ತಿರುವುಗಳು ಸೃಷ್ಟಿಯಾಗುತ್ತವೆ.  ಆದರೆ ಅಂತಿಮ ತಿರುವು ಅದುವರೆಗಿನ ಟ್ವಿಸ್ಟ್‌ ಗಳನ್ನು ಮೀರಿಸುವಂತಿದೆ. ನಿಜಕ್ಕೂ ಥ್ರಿಲ್ಲರ್‌ ಮಂಜು ಒಂದು ಥ್ರಿಲ್ಲಿಂಗ್‌ ಚಿತ್ರವನ್ನೇ ನೀಡಿದ್ದಾರೆ. ಸಾಮಾನ್ಯವಾಗಿ ಇಂಥ ಸಿನಿಮಾಗಳಲ್ಲಿ ಹಾಡುಗಳಿಗೆ ಪ್ರಾಧಾನ್ಯತೆ ಇರುವುದಿಲ್ಲ. ಆದರೆ ಇಲ್ಲಿ ವಿನು ಮನಸು ಸಂಗೀತದಲ್ಲಿ ವೈವಿಧ್ಯಮಯ ಹಾಡುಗಳಿವೆ.  ಒಂದೇ ರೀತಿಯ ಸಿನಿಮಾಗಳನ್ನು ನೋಡಿ ಬೇಸತ್ತ ಮಂದಿ ನೋಡಬಹುದಾದ ಚಿತ್ರ ಇದು. ನಿಜವಾದ ಕೊಲೆಗಾರ ಯಾರು ಎನ್ನುವುದನ್ನು ತಿಳಿಯಲು ಮತ್ತು ಕೊಲೆಯ ಕಾರಣಗಳನ್ನು ಅರ್ಥೈಸಲು ಖುದ್ದು ಚಿತ್ರಮಂದಿರಕ್ಕೆ ಹೋಗಿ ನೋಡುವುದೇ ಉತ್ತಮ.

 

Copyright@2018 Chitralahari | All Rights Reserved. Photo Journalist K.S. Mokshendra,