Love Seasons.Reviews

Friday, July 03, 2026

 

ರಾಮನ ಪ್ರೇಮ ಕಾಲದ ಕಥೆಗಳು

 

ಚಿತ್ರ: ಲವ್ ಸೀಸನ್ಸ್****

ನಿರ್ದೇಶನ: ಕೃತ್ವಿಕ್ ಶೆಟ್ಟಿ

ನಿರ್ಮಾಣ: ಮಂಜುನಾಥ ನೀಲೇರಿ

ತಾರಾಗಣ: ಮುಕುಂದ ರಾಮಸ್ವಾಮಿ, ದಿಯಾ ಕೀರ್ತಿ, ಚಂದನಾ ಗೌಡ, ರಾಜೇಶ್ ನಟರಂಗ, ಮಂಡ್ಯ ರಮೇಶ್ ಮೊದಲಾದವರು.

 

ಲವ್ ಸೀಸನ್ಸ್  ಚಿತ್ರದ ಹೆಸರೇ ಸೂಚಿಸುವಂತೆ ಇದು ಮೂಲಕ ⅓ಕಾಲಘಟ್ಟಗಳ‌ ಪ್ರೀತಿ. ನಾಯಕನ ಬಾಳಿನ‌ ಮೂರು ಕಾಲಗಳಲ್ಲಿ ಬರುವ ಮೂರು ಪ್ರೇಮದ ಕಥೆ. ಅವು ಮೂರು ಕೂಡ ಒಂದೇನಾ? ಹಾಗಾದರೆ ಚಿತ್ರದ ಇತರ ನಾಯಕಿಯರ ಪಾತ್ರಗಳೇನು? ಮುಖ್ಯವಾಗಿ ನೈಜ ಪ್ರೀತಿಯ ಸೂತ್ರಗಳೇನು ಎನ್ನುವುದನ್ನು ಮನಮುಟ್ಟುವಂತೆ ತೋರಿಸಿರುವ ಚಿತ್ರ ಇದು.

 

 

ಚಿತ್ರದ ಕಥೆ ಫ್ಲ್ಯಾಶ್ ಬ್ಯಾಕ್ ಮೂಲಕ‌ ಆರಂಭವಾಗುತ್ತದೆ. ಅದು ಪೀಟರ್ ಮತ್ತು ಮರಿಯಾ  ದಂಪತಿಯ ಮನೆ. ಪೀಟರ್ ಒಬ್ಬ ಕುಡುಕ. ಪೀಟರ್ ಮೂರು ಹೊತ್ತು ಕೂಡ ಕುಡಿಯುತ್ತಿರುತ್ತಾನೆ. ಫ್ಯಾಕ್ಟರಿ ಕೆಲಸಕ್ಕೆ ಹೋಗುವಾಗಲೂ ಕುಡಿದೇ ಹೋಗುತ್ತಾನೆ. ಅದೇ ಮನೆಯಲ್ಲೇ ಕಥಾ ನಾಯಕ ರಾಮ್ ಕೂಡ ಇರುತ್ತಾನೆ. ಪೀಟರ್ ನನ್ನು ಅಪ್ಪಾ ಎಂದು ಮರಿಯಾಳನ್ನು ಅಮ್ಮ ಎಂದು ಕರೆಯುತ್ತಿರುತ್ತಾನೆ.‌ ಆತನಿಗೆ ಆಗಾಗ ಮೇರಿ ಎನ್ನುವ ಹುಡುಗಿಯ ಕನಸು ಬೀಳುತ್ತದೆ. ಮೇರಿ ಯಾರು? ರಾಮ್ ಯಾಕೆ ಪೀಟರ್ ಮನೆಯಲ್ಲಿದ್ದಾನೆ? ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಸರಳವಾಗಿ ಊಹಿಸಬಹುದು. ಆದರೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮೀರಿಸುವಂಥ ಕಥೆಯೊಂದಿಗೆ ಚಿತ್ರ ಮಾಡಿದ್ದಾರೆ ಕೃತ್ವಿಕ್ ಶೆಟ್ಟಿ.

ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ರಾಮ್ ಪಾತ್ರವನ್ನು ನಿಭಾಯಿಸಿದ್ದಾರೆ. ಬಾಲ್ಯದಿಂದ ಯೌವನದ ತನಕದ ವಿವಿಧ ದೃಶ್ಯಗಳನ್ನು ಖುದ್ದಾಗಿ ನಿರ್ವಹಿಸಿದ್ದಾರೆ. ಎಲ್ಲ ವಯಸ್ಸಿಗೂ ಹೊಂದುವಂಥ ಲುಕ್ ಅವರ ವಿಶೇಷತೆ. ಅವರ ಸ್ನೇಹಿತರ ಪಾತ್ರಗಳು ಸೇರಿದಂತೆ ಉಳಿದ ಪಾತ್ರಗಳನ್ನು ಕೂಡ ಮೂರು ಕಾಲಘಟ್ಟಕ್ಕೆ ಹೊಂದುವಂತೆ ತೋರಿಸಿರುವುದು ನೈಜವಾಗಿದೆ.

 

 

ರಾಜೇಶ್ ನಟರಂಗ ಪೀಟರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕುಡುಕನ ಪಾತ್ರಕ್ಕೆ ಹೊಂದುವ ಅಭಿನಯದಿಂದ ಮನಸೆಳೆಯುತ್ತಾರೆ. ಮರಿಯ ಪಾತ್ರವನ್ನು ಸಂಗೀತಾ ಅನಿಲ್ ನಿರ್ವಹಿಸಿದ್ದಾರೆ. ಉಳಿದಂತೆ ದಿಯಾ ಕೀರ್ತಿ, ಚಂದನಾ ಗೌಡ ಮೊದಲಾದವರು ಇತರ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

 

ಮಂಡ್ಯ ರಮೇಶ್ ಅವರು ಚಿತ್ರದಲ್ಲಿ ಒಂದು ಪ್ರಧಾನ ಪಾತ್ರ ಮಾಡಿದ್ದಾರೆ. ಚಿತ್ರದ ಸಂಭಾಷಣೆಯಲ್ಲಿ ಗಟ್ಟಿತನ ಇದೆ. ಹಾಡಿನ ಸಾಹಿತ್ಯ ಕೂಡ ಮನಮುಟ್ಟುವಂತಿದೆ. ಸಂಗೀತ ಮತ್ತೆ ಮತ್ತೆ ಆಲಿಸುವಂತಿದೆ. ಸಬ್ಜೆಕ್ಟ್ ಕೂಡ ವಿಭಿನ್ನವಾಗಿರುವ ಕಾರಣ ಚಿತ್ರ ವಿಶೇಷ ಆಕರ್ಷಣೆ ಮೂಡಿಸಬಲ್ಲದು. ಪ್ರೇಮಕಥೆಯ ಚಿತ್ರವಾದರೂ ಬದುಕಿನ ಸಾರವನ್ನು ಸಾರುವ ಚಿತ್ರ ಇದು.‌ ಹಾಗಾಗಿಯೇ ಕುಟುಂಬ ಸಮೇತ ನೋಡಬಹುದಾದ ಸಿನಿಮಾ.

 

Copyright@2018 Chitralahari | All Rights Reserved. Photo Journalist K.S. Mokshendra,