ಭೂಗತ ಲೋಕದ ಬಲವಾದ ಕಥೆ
ಚಿತ್ರ: ಬಲರಾಮನ ದಿನಗಳ****
ನಿರ್ದೇಶನ: ಕೆ.ಎಂ ಚೈತನ್ಯ
ನಿರ್ಮಾಣ: ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಜಯರಾಮ್
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಷ್ ವಿದ್ಯಾರ್ಥಿ ಮೊದಲಾದವರು.
ಇದು 1980 ಮತ್ತು 1990ರ ಮಧ್ಯೆ ಬೆಂಗಳೂರಿನಲ್ಲಿ ನಡೆದಂಥ ಕಾಲ್ಪನಿಕ ಕಥಾನಕ ಎನ್ನುವುದನ್ನು ಆರಂಭದಲ್ಲೇ ಹೇಳಲಾಗುತ್ತದೆ. ಆದರೆ ಕಥೆಯ ಸುರುಳಿ ಬಿಚ್ಚುತ್ತಾ ಸಾಗಿದಂತೆ ಪ್ರೇಕ್ಷಕರನ್ನು ಭೂಗತ ಲೋಕದ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತದೆ.
ಹಳ್ಳಿಯಿಂದ ಕೆಲಸಕ್ಕೆಂದು ಬರುವ ಯುವಕ ರೌಡಿಯಾಗುವ ಕಥೆ ಇದು. ಇಲ್ಲಿ ಸೆಂಟ್ ಮೆಂಟ್ ಗಳು ಕಡಿಮೆ. ಆದರೆ ಜಯರಾಮನ ಗ್ಯಾಂಗ್ ಮಾತ್ರ ಒಂದಷ್ಟು ಭಾವುಕವಾಗಿರುವಂಥದ್ದು. ಜಯರಾಮನ ಗ್ಯಾಂಗ್ ಗೆ ಬಲಗೈನಂತೆ ಸೇರಿಕೊಳ್ಳುವಾತನೇ ಬಲರಾಮ. ಬೆಂಗಳೂರಿನಲ್ಲೇ ಆತನಿಗೊಂದು ಪ್ರೇಮಕಥೆಯಿದೆ. ಆ ಪ್ರೇಯಸಿ ಒಬ್ಬಳು ಶಿಕ್ಷಕಿ. ರೌಡಿಸಂ ಮತ್ತು ಪ್ರೇಮದ ನಡುವೆ ನಿಜವಾದ ಪಾಠ ಹೇಳುವುದು ಮಾತ್ರ ಬದುಕು. ಆ ಪಾಠದ ಪುಟಗಳನ್ನು ತಿರುವಿ ನೋಡಬೇಕಾದರೆ ನೀವು ಈ ಚಿತ್ರವನ್ನು ನೋಡಬೇಕು.
ಬಲರಾಮನಾಗಿ ನಟಿಸಿರುವ ವಿನೋದ್ ಪ್ರಭಾಕರ್ ಗೆ ಫುಲ್ ಮಾರ್ಕ್ಸ್. ಎಂಬತ್ತರ ದಶಕದ ಯುವಕನ ಪಾತ್ರಕ್ಕೆ ವಿನೋದ್ ಜೀವ ನೀಡಿರುವ ರೀತಿ ಆಕರ್ಷಕ. ಬಲರಾಮನ ಬಾಸ್ ಜಯರಾಮನಾಗಿ ಆಶೀಷ್ ವಿದ್ಯಾರ್ಥಿ ನಟಿಸಿದ್ದಾರೆ. ವಿರೋಧಿ ಗ್ಯಾಂಗ್ ನಲ್ಲಿ ಮೋನಪ್ಪ ರೈ ಪಾತ್ರವನ್ನು ರಮೇಶ್ ಇಂದಿರಾ ನಿಭಾಯಿಸಿದ್ದಾರೆ. ಕೊತ್ವಾಲ್ ಆಗಿ ಶರತ್ ಲೋಹಿತಾಶ್ವ ನಟಿಸಿದ್ದಾರೆ. ರೈ ಗ್ಯಾಂಗ್ ನಲ್ಲಿರುವ ಎದುರಾಳಿಯಾಗಿ ವಿನಯ್ ಗೌಡ ಆಕರ್ಷಕ ನಟನೆ ನೀಡಿದ್ದಾರೆ. ವಿನಯ್ ಗೌಡ ಪತ್ನಿಯ ಪಾತ್ರವನ್ನು ನಿಕಿತಾ ದೋರ್ತೋಡಿ ನಿಭಾಯಿಸಿದ್ದಾರೆ.
ಬಲರಾಮನ ಜೋಡಿಯಾಗಿ ರೇವತಿ ಎನ್ನುವ ಪಾತ್ರವನ್ನು ಪ್ರಿಯಾ ಆನಂದ್ ನಿರ್ವಹಿಸಿದ್ದಾರೆ. ಪ್ರಿಯಾ ತಂದೆಯ ಪಾತ್ರದಲ್ಲಿ ಅವಿನಾಶ್ ನಟಿಸಿದ್ದಾರೆ.
ಸಂತೋಷ್ ನಾರಾಯಣ್ ಸಂಗೀತದಲ್ಲಿ ಹಾಡುಗಳು ಮೋಹಕವಾಗಿವೆ. ಕಾಸ್ಟ್ಯೂಮ್ಸ್, ನೃತ್ಯ ನಿರ್ದೇಶನ, ಎಂಬತ್ತರ ದಶಕಕ್ಕೆ ಹೊಂದುವಂಥ ಕಲಾ ನಿರ್ದೇಶನ ಪ್ರತಿಯೊಂದು ಕೂಡ ಮೆಚ್ಚುವಂತೆ ಮೂಡಿಬಂದಿದೆ. ವೇಣು ಛಾಯಾಗ್ರಹಣವನ್ನು ಮೆಚ್ಚಲೇಬೇಕು.
ಆ ದಿನಗಳ ರೌಡಿಸಂ ಹೇಗಿತ್ತು ಎನ್ನುವುದನ್ನು ತೋರಿಸುತ್ತಲೇ, ಒಮ್ಮೆ ರೌಡಿಸಂ ಸಹವಾಸಕ್ಕೆ ಹೋದರೆ ಆಗುವ ಅಪಾಯವೇನು ಎನ್ನುವುದನ್ನು ನಿರ್ದೇಶಕರು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.