ಇದು ಪ್ರೇಮ ಸವಿಯುವ ವಾತಾವರಣ!
ಚಿತ್ರ: ಮೋಡ ಕವಿದ ವಾತಾವರ****
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಸುನಿ ಸಿನೆಮಾಸ್
ತಾರಾಗಣ: ಶೀಲಂ ಸ್ವಾಮಿ, ಮೋಕ್ಷ ಕುಶಲ್, ಸಾತ್ವಿಕಾ, ರೇಖಾ ಎಸ್ ಪ್ರಸಾದ್, ಋಷಿ ಮೊದಲಾದವರು
ರೆಸಾರ್ಟ್ ನಲ್ಲಿ ಭೇಟಿಯಾಗುವ ಎರಡು ಜೋಡಿಗಳ ನಡುವಿನ ಪರಿಚಯದಿಂದ ಶುರುವಾಗುವ ಚಿತ್ರ ಇದು. ಆದರೆ ಆ ಪರಿಚಯ ಯಾವ ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಪ್ರೇಕ್ಷಕರ ನಿರೀಕ್ಷೆಗೂ ಮೀರುವಂತೆ ತೋರಿಸಲಾಗಿದೆ.
ಆತನ ಹೆಸರು ಚರಿಷ್. ಆತ ತನ್ನ ಪ್ರಿಯತಮೆ ಸಾತ್ವಿಕಾ ಜತೆಗೆ ರೆಸಾರ್ಟ್ ಒಂದಕ್ಕೆ ಹೋಗಿರುತ್ತಾನೆ. ಅಲ್ಲಿಗೆ ಸೌಪರ್ಣಿಕಾ ಎನ್ನುವ ಯುವತಿ ತನ್ನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿರುವ ಮಧು ಎನ್ನುವಾತನೊಡನೆ ಬಂದಿರುತ್ತಾಳೆ. ಇದರ ನಡುವೆ ಸೌಪರ್ಣಿಕಾಗೆ ಒಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ ಎನ್ನುವುದು ಅರಿವಾಗುತ್ತದೆ. ಆ ಕಥೆ ಹೇಗಿದೆ ಎಂದರೆ ಬಿಚ್ಚುತ್ತಾ ಸಾಗಿದಂತೆ ಆಸಕ್ತಿಕರ ಸುರುಳಿಗಳು ಹೆಚ್ಚುತ್ತಾ ಸಾಗುತ್ತವೆ. ಆ ಸುಳಿಗಳೊಂದಿಗೆ ಚರಿಷ್ ನಡೆಸುವ ಪ್ರಯಾಣವೇ ಮೋಡ ಕವಿದ ವಾತಾವರಣ.
ಇಡೀ ಚಿತ್ರವನ್ನು ಮೋಡ ಕವಿದ ವಾತಾವರಣದಲ್ಲಿ, ಮಳೆಯಲ್ಲಿ ಚಿತ್ರೀಕರಿಸಿದ್ದಾರೆ ಸುನಿ. ಇಲ್ಲಿ ಮಳೆ ಸುರಿದಷ್ಟು ಮತ್ತಷ್ಟು ಮೋಡಗಳು ಬಂದು ಸೇರುತ್ತವೆ. ಚರಿಷ್ ಪಾತ್ರದಲ್ಲಿ ಶೀಲಂ ಎಮ್ ಸ್ವಾಮಿ ನಟಿಸಿದ್ದಾರೆ. ಲವಲವಿಕೆಯ ಯುವಕನ ಪಾತ್ರಕ್ಕೆ ಆಕರ್ಷಕವಾಗಿ ಜೀವ ತುಂಬಿದ್ದಾರೆ. ಇಲ್ಲಿ ನಾಯಕಿ ಮೋಕ್ಷ ಕುಶಾಲ್ ಗೂ ನಟನೆಗೆ ಹೆಚ್ಚಿನ ಅವಕಾಶಗಳು ದೊರಕಿವೆ. ಭಯ, ಆತಂಕದ ಜತೆಗೆ ರೌದ್ರವನ್ನು ಕೂಡ ರಮಣೀಯವಾಗಿ ತೋರಿಸಿದ್ದಾರೆ.
ರಿಷಿ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಒಂದೇ ದೃಶ್ಯದಲ್ಲಿಯೇ ತಾನು ಎಂಥ ಕಲಾವಿದ ಎಂದು ಸಾಬೀತುಪಡಿಸಿದ್ದಾರೆ. ಸ್ಪರ್ಶ ರೇಖಾ ಇಲ್ಲಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತದಲ್ಲಿ ಪ್ರೇಮಗೀತೆಗಳು ಸೊಗಸಾಗಿವೆ. ಎಂದಿನಂತೆ ಸುನಿಯ ಸಂಭಾಷಣೆಗಳು ಚುರುಕಾಗಿವೆ.
ಜಲಪಾತ ಮತ್ತು ಮೋಡ ಕವಿದ ವಾತಾವರಣದ ಮಧ್ಯೆ ಸುನಿ ಒಂದು ವಿಭಿನ್ನ ಪ್ರೇಮಕಥಾನಕವನ್ನು ಬಣ್ಣಿಸಿದ್ದಾರೆ. ಯುವ ಪ್ರೇಮಿಗಳನ್ನು ಸೆಳೆಯಬಲ್ಲ ಸುನಿ, ಆ ನಿಟ್ಟಿನಲ್ಲಿ ತಮ್ಮ ಮತ್ತೊಂದು ನೈಜ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ.