ಪ್ರೀತಿ, ಕರುಣೆ ಮೂಡಿಸುವ ಕರುಣಾಕರನ ಕಥೆ
ಚಿತ್ರ: ನಾನು ಕರುಣಾಕರ****
ನಿರ್ದೇಶನ: ಆರ್ಯನ್ ತೇಜಸ್
ನಿರ್ಮಾಪಕರು: ನಮನ್ ನಾರಾಯಣ್ ಸಂತೋಷ್ ಮತ್ತು ವೈಭವ್ ಸುರೇಶ್
ತಾರಾಗಣ: ಆರ್ಯನ್ ತೇಜಸ್, ರಾಧಾ ಭಗವತಿ ಮೊದಲಾದವರು.
ಮಕ್ಕಳ ಆಸೆಯನ್ನು ಈಡೇರಿಸಲು ಬಯಸುವ ತಂದೆಯ ಪಾಡೇನು ಎನ್ನುವುದನ್ನು ’ನಾನು ಕರುಣಾಕರ’ ಮನ ಮುಟ್ಟುವಂತೆ ತೋರಿಸಿದೆ.
ಕರುಣಾಕರ ಕಥೆ ಪ್ರತಿಯೊಬ್ಬ ಜನಸಾಮಾನ್ಯನ ಬಾಳಿಗೂ ಒಂದಲ್ಲ ಒಂದು ರೀತಿಯಲ್ಲಿ ಬಂಧ ಬೆಸೆಯುವ ಕಥೆ. ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಬದುಕು ಹೇಗಿರುತ್ತದೆ ಎನ್ನುವುದನ್ನು ಪರದೆ ಮೇಲೆ ಕಟ್ಟಿ ಕೊಡುವ ಜತೆಗೆ ಸ್ವತಃ ಅಭಿನಯಿಸಿ ತೋರಿಸಿದ್ದಾರೆ ನಿರ್ದೇಶಕ ಆರ್ಯನ್ ತೇಜಸ್.
ಆರ್ಯನ್ ತೇಜಸ್ ನಟನೆ ನಟನೆಯಂತೆ ಕಾಣಿಸುವುದಿಲ್ಲ. ಕರುಣಾಕರನಾಗಿ ನಮ್ಮಲ್ಲಿ ಒಬ್ಬರ ಪಾತ್ರ ಇದು ಎನ್ನುವಂತೆ ಗೋಚರಿಸುತ್ತದೆ. ಕರುಣಾಕರನ ಪತ್ನಿಯಾಗಿ ಕಿರುತೆರೆ ಖ್ಯಾತಿಯ ರಾಧಾ ಭಗವತಿ ನಟಿಸಿದ್ದಾರೆ. ಈಕೆ ಬಾಯಿ ಬಡುಕಿ. ಆದರೆ ಈಕೆಯ ಕನಸುಗಳೇನಿತ್ತು ಎನ್ನುವುದನ್ನು ಕೇಳುವವರೇ ಇಲ್ಲ. ಇದೇ ಸಂದರ್ಭದಲ್ಲಿ ಮಗನ ಆಸೆ ನೆರವೇರಿಸುವಲ್ಲಿ ತಂದೆಯ ಓಡಾಟಕ್ಕೆ ಕೊನೆಯೇ ಇಲ್ಲ. ಮುದ್ದಿನ ಪುತ್ರ ಅಪ್ಪುವಾಗಿ ಮಾಸ್ಟರ್ ಭವಿಷ್ ಗೌಡ ನಟನೆ ಅಮೋಘವಾಗಿದೆ.
ಮಕ್ಕಳಿಗೆ ತಂದೆಯ ಜತೆಗಿನ ತಮ್ಮ ಬಾಂಧವ್ಯ ಹಾಗೂ ತಂದೆಗೆ ಮಕ್ಕಳ ಮೇಲಿನ ಪ್ರೀತಿಯನ್ನು ನೆನಪಿಸುವ ದೃಶ್ಯಗಳಿವೆ. ಈ ಕಾರಣಕ್ಕಾಗಿಯೇ ಚಿತ್ರ ನೋಡಿದ ತಂದೆ ಮಕ್ಕಳು ಭಾವುಕರಾಗುತ್ತಾರೆ.
ಹಾಡುಗಳು ಕಥೆಯೊಂದಿಗೆ ಹೊಂದಿಕೊಂಡಂತೆ ಸಾಗುತ್ತದೆ. ಕರಿ ಸುಬ್ಬು ಒಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಶ್ರೀ, ಬಿ.ಎಂ ವೆಂಕಟೇಶ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಎಂ.ಕೆ ಮಠ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ಎಲ್ಲ ಪಾತ್ರಗಳು ಕೂಡ ಸಂಬಂಧಗಳನ್ನು ಕಟ್ಟಿಕೊಡುತ್ತಾ ಸಾಗುತ್ತವೆ. ಕೌಟುಂಬಿಕ ಪ್ರೇಕ್ಷಕರನ್ನು ಸೆಳೆದಿಡಬಲ್ಲ ಇಂಥದೊಂದು ಸಿನಿಮಾ ಸದ್ಯದ ಮಟ್ಟಿಗೆ ಕನ್ನಡದಲ್ಲಿ ಬಂದೇ ಇಲ್ಲ ಎಂದು ಧೈರ್ಯದಿಂದ ಹೇಳಬಹುದು.