ಬಲು ಚಂದ ಈ ತಂದೆ ಮಗಳ ಅನುಬಂಧ
ಚಿತ್ರ: ಲವ್ ಮಾಕ್ಟೇಲ್ 3*****
ನಿರ್ದೇಶಕ: ಡಾರ್ಲಿಂಗ್ ಕೃಷ್ಣ
ನಿರ್ಮಾಪಕ: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಬೇಬಿ ಸಂವೃತಾ, ಶ್ವೇತಾ ಪ್ರಸಾದ್ ಮೊದಲಾದವರು.
ಲವ್ ಮಾಕ್ಟೇಲ್ ನ ಎರಡು ಭಾಗಗಳನ್ನು ನೋಡಿದವರಿಗಷ್ಟೇ ಅಲ್ಲ, ಹೊಸದಾಗಿ ನೋಡುವವರಿಗೂ ಇಷ್ಟವಾಗುವಂತೆ ಮೂಡಿದೆ ಈ ಮೂರನೇ ಭಾಗ.
ಪತ್ನಿಯನ್ನು ಕಳೆದುಕೊಂಡ ಆದಿ ಮಗುವೊಂದನ್ನು ದತ್ತು ತೆಗೆದುಕೊಳ್ಳುತ್ತಾನೆ. ಆ ಮಗುವಿಗೆ ನಿಧಿ ಎನ್ನುವ ಹೆಸರಿಡುತ್ತಾನೆ. ಇದಿಷ್ಟು ಎರಡನೇ ಭಾಗದಲ್ಲೇ ರಿವೀಲಾಗಿರುವ ಕಥೆ. ಆದರೆ ಆ ಮಗುವಿನ ಜತೆಗಿನ ಒಡನಾಟವನ್ನೇ ಹೈಲೈಟ್ ಮಾಡಿರುವ ಚಿತ್ರ ಇದು. ತಂದೆ ಮಗುವಿನ ಅನುಬಂಧಕ್ಕೆ ಎದುರಾಗುವ ಸಮಸ್ಯೆ ಏನು? ಅದಕ್ಕೆ ಕಾರಣವಾಗುವ ಅಂಶಗಳೇನು? ಚಿತ್ರ ನೀಡುವ ಪರಿಹಾರವೇನು ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಚಂದ.
ಲವ್ ಮಾಕ್‌ಟೇಲ್ ಸಿನಿಮಾದ ಈ 3ನೇ ಭಾಗದಲ್ಲಿ ಕೃಷ್ಣನ ಜತೆಗೆ ಈ ಹಿಂದಿನ ಒಂದಷ್ಟು ಪಾತ್ರಗಳು ಕೂಡ ಸೇರಿಕೊಂಡಿವೆ. ಬಾಲನಟಿ ಸಂವೃತಾ ನಟನೆ ಮೆಚ್ಚುವಂತಿದೆ. ವಿಜಯ್ ಪಾತ್ರದಲ್ಲಿ ನಟಿಸಿರುವ ಅಭಿಲಾಷ್ ಹಾಸ್ಯ ಇಲ್ಲಿಯೂ ಇದೆ. ಮಿಲನಾ ಮತ್ತು ಅಮೃತಾ ಅಯ್ಯಂಗಾರ್ ಕೂಡ ಇದ್ದಾರೆ. ಆದರೆ
ಜಗ್ಗಾ ಮಮ್ಮಿ ಎನ್ನುವ ಹೊಸ ಪಾತ್ರದಲ್ಲಿ ನಟಿಸಿರುವ ಕಲಾವಿದ ಥಿಯೇಟರ್ ನಿಂದ ಹೊರಗೆ ಬಂದ ಮೇಲೆಯೂ ನೆನಪಲ್ಲಿ ಉಳಿದುಕೊಳ್ಳುತ್ತಾರೆ.
ಉಳಿದಂತೆ ರೇಖಾ ಕೂಡ್ಲಿಗಿ ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪ್ರಮುಖ ಘಟ್ಟ ಕೋರ್ಟ್ ನಲ್ಲಿ ನಡೆಯುತ್ತದೆ. ವಕೀಲರಾಗಿ ದಿಲೀಪ್ ರಾಜ್ ಮತ್ತು ಶ್ವೇತಾ ಆರ್ ಪ್ರಸಾದ್ ವಾದ ಪ್ರತಿವಾದ ಆಕರ್ಷಕವಾಗಿ ಮೂಡಿ ಬಂದಿದೆ. ನ್ಯಾಯಾಧೀಶರಾಗಿ
ಬಿ ಎಂ ಗಿರಿರಾಜ್ ಮನಸೆಳೆಯುತ್ತಾರೆ.
ನಕುಲ್ ಅಭಯಂಕರ್ ಸಂಗೀತದಲ್ಲಿನ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದೆ. ಎಲ್ಲ ರೀತಿಯಿಂದಲೂ ಪ್ರೇಕ್ಷಕರನ್ನು ಆಕರ್ಷಿಸುವಂಥ ಚಿತ್ರ ಇದು.