ದುಷ್ಟರ ದಂಧೆಯ ವಿರುದ್ಧ ’ಶೇರ್’ ಘರ್ಜನೆ
ಚಿತ್ರ: ಶೇರ್****
ನಿರ್ದೇಶನ: ಪ್ರಸಿದ್ಧ್
ನಿರ್ಮಾಪಕ: ಸುದರ್ಶನ್ ಸುಂದರ್ ರಾಜ್
ತಾರಾಗಣ: ಕಿರಣ್ ರಾಜ್, ಸುರೇಖಾ, ತನಿಷಾ ಮೊದಲಾದವರು.
ಆ ಹಳ್ಳಿಯ ಅಧ್ಯಕ್ಷ ಅನಾಥ ಹುಡುಗರಿಗೆಲ್ಲ ಆಶ್ರಯ ನೀಡಿ ಕೆಲಸಕ್ಕೆ ಇಟ್ಟುಕೊಂಡಿರುತ್ತಾನೆ. ಅಂಥ ಅನಾಥರ ನಡುವೆ ಅನಾಥನಾಗಿ ಬೆಳೆದ ಶಿವು ಅವರಿಗೆಲ್ಲ ನಾಯಕನಂತೆ ಇರುತ್ತಾನೆ. ಮತ್ತೊಂದೆಡೆ ಅದೇ ಊರಿನ ಮತ್ತೋರ್ವ ರಾಜಕಾರಣಿ ತನ್ನ ಬಳಿಯೂ ಒಂದಷ್ಟು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾನೆ. ಅವರ ನಡುವೆ ಗಿಲ್ಲಿ ಎನ್ನುವ ಹುಡುಗ ಚಾಲಾಕಿಯಂತೆ ಕಾಣುತ್ತಾನೆ. ಗಿಲ್ಲಿ ಮತ್ತು ಶಿವು ಮಧ್ಯೆ ಆಗಾಗ ಜಗಳ ಆಗುವುದು ಕೂಡ ಇದೆ. ಆದರೆ ಅದೊಂದು ಘಟನೆ ಮಾತ್ರ ಸಾವಿಗೂ ಹೆದರದಷ್ಟು ಹೊಡೆದಾಟಕ್ಕೆ ಕಾರಣವಾಗುತ್ತದೆ. ಅದರ ಹಿನ್ನೆಲೆ ಏನು ಎನ್ನುವುದೇ ಚಿತ್ರದ ಕಥೆ.
ಇಬ್ಬರು ಯುವಕರ ನಡುವಿನ ವೈಷಮ್ಯದ ಬಗ್ಗೆ ಹೇಳುವ ದೃಶ್ಯ ಮುಂದುವರಿದಾಗ ಅದು ಒಂದು ಊರಿನ ಸಮಸ್ಯೆಗೆ ಕನ್ನಡಿಯಾಗುತ್ತದೆ. ಊರನ್ನು ಕಾಡುವ ಕರಾಳ ದಂಧೆಯನ್ನು ಅನಾವರಣ ಮಾಡುತ್ತದೆ. ಹೀಗೆ ತಿರುವುಗಳೊಂದಿಗೆ ಸಾಗುವ ಕಥೆಯನ್ನು ಆಕರ್ಷಕವಾಗಿ ತೆರೆಗೆ ತಂದಿರುವ ಕೀರ್ತಿ ನಿರ್ದೇಶಕ ಪ್ರಸಿದ್ಧ್ ಗೆ ಸಲ್ಲುತ್ತದೆ.
ಶಿವು ಎನ್ನುವ ಚಿತ್ರದ ಕೇಂದ್ರ ಕಥಾಪಾತ್ರದಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಶಿವು ದುರುಳರ ವಿರುದ್ಧ ಶೇರ್ ನಂತೆ ಘರ್ಜಿಸಿದ್ದಾನೆ.
ಆಕರ್ಷಕ ಮುಖ ಮತ್ತು ಸಾಹಸ ದೃಶ್ಯಗಳಲ್ಲಿನ ಪಕ್ವತೆಯಿಂದ ಕಿರಣ್ ರಾಜ್ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇವರಿಗೆ ಜೋಡಿಯಾಗಿ ಭುವನ ಪಾತ್ರದಲ್ಲಿ ಸುರೇಖ ನಟಿಸಿದ್ದಾರೆ.
ಗಿಲ್ಲಿಯಾಗಿ ಯುವ ನಟ ಕ್ರಿಷ್ ಅಭಿನಯಿಸಿದ್ದಾರೆ. ಹಳ್ಳಿಯ ಅಧ್ಯಕ್ಷರಾಗಿ ಬಲ ರಾಜ್ವಾಡಿ ನಟಿಸಿದ್ದಾರೆ. ಅಲ್ಲಿಗೆ ಬರುವ ಹೊಸ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ತನಿಷಾ ಕುಪ್ಪಂಡ ಎಂಟ್ರಿ ನೀಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಕ್ಕೆ ಮಾಲಾಶ್ರೀ ಬಳಿಕ ಮತ್ತೋರ್ವ ನಟಿ ಯಾರು ಎನ್ನುವ ಪ್ರಶ್ನೆಗೆ ತನಿಷಾ ಎನ್ನುವ ಉತ್ತರ ನೀಡಬಹುದು ಎನ್ನುವ ಭರವಸೆ ಸೃಷ್ಟಿಸಿದ್ದಾರೆ.
ಗಿಲ್ಲಿಯನ್ನು ಕೆಲಸಕ್ಕಿಟ್ಟುಕೊಂಡ ವ್ಯಕ್ತಿಯಾಗಿ ಶೋಭರಾಜ್ ನಟಿಸಿದ್ದಾರೆ. ಶೋಭರಾಜ್ ನಡೆಸುವ ದಂಧೆಗೆ ಬಾಸ್ ಆಗಿ ಯಶ್ ಶೆಟ್ಟಿ ಪಾತ್ರ ಮಾಡಿದ್ದಾರೆ. ತಮಗೆ ದೊರಕಿರುವ ದೊಡ್ಡ ಮಟ್ಟದ ಖಳ ಪಾತ್ರಕ್ಕೆ ಯಶ್ ಶೆಟ್ಟಿ ನ್ಯಾಯ ಒದಗಿಸಿದ್ದಾರೆ. "ಪಂಜ ಬೀಸೋ ಸಿಂಹಾನೆ ಪಂಜರ ದಲ್ಲಿ ಇಟ್ಟಿದ್ದೀನಿ" ಎನ್ನುವಂಥ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆಯುತ್ತಾರೆ.
ಚಿತ್ರದ ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಮತ್ತು ಸಂಕಲನದ ಗುಣಮಟ್ಟವನ್ನು ಮೆಚ್ಚಲೇಬೇಕು. ರಕ್ತಪಾತ ಇದ್ದರೂ ಕೂಡ ಸಮಾಜದ ಸತ್ಯವನ್ನು ತೆರೆದಿಡುವ ಉತ್ತಮ ಚಿತ್ರ. ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವ ಸಂದೇಹವೂ ಇಲ್ಲ.