KD.Film Reviews

Thursday, April 30, 2026

 

ರೌಡಿಸಂ ಗಡಿ ದಾಟಿ ಮಿಡಿಯುವ ಕೇಡಿ!

*****

K.D ಎನ್ನುವ ಹೆಸರಿಗೆ ಕಾಳಿದಾಸ ಎನ್ನುವ ಪೂರ್ಣರೂಪವಿದೆ. ಆದರೆ ಉಚ್ಚಾರಣೆಯ ದೃಷ್ಟಿಯಿಂದ ಪಕ್ಕಾ ಕೇಡಿಯೇ ಇರಬಹುದೇ ಎನ್ನುವ ಸಂದೇಹವು ಮೂಡಿತ್ತು. ಆದರೆ ಅವನ್ನೆಲ್ಲ ನಿವಾರಿಸುವಂತೆ ಚಿತ್ರ ಮೂಡಿ ಬಂದಿದೆ.

 

ಚಿತ್ರ: ಕೆ ಡಿ

ನಿರ್ದೇಶನ: ಪ್ರೇಮ್

ನಿರ್ಮಾಣ: ವೆಂಕಟ್ ಕೆ ನಾರಾಯಣ

ತಾರಾಗಣ: ಧ್ರುವ ಸರ್ಜಾ, ಸಂಜಯ್ ದತ್, ರೀಶ್ಮಾ ನಾಣಯ್ಯ, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮುಂತಾದವರು.

 

ಸುಮಾರು 1975ರ ಕಾಲ ಘಟ್ಟದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ನಡೆಯುತ್ತಿದ್ದ ಕಾಲ. ಆ ಸಂದರ್ಭದಲ್ಲಿ

ಸೀಮೆ ಎಣ್ಣೆ ಮಾರಾಟ ನಡೆಸುತ್ತಿರುವ ಕಾಳಿದಾಸ ಎನ್ನುವ ಸಾಮಾನ್ಯ ಯುವಕನ ಬಾಳಿನಲ್ಲಿ ಸಂಭವಿಸಿದ್ದೇನು ಎನ್ನುವುದನ್ನು ಅತ್ಯಂತ ಮಾಸ್ ಆಗಿ ಹೇಳಿದ್ದಾರೆ ನಿರ್ದೇಶಕ ಪ್ರೇಮ್.

 

ಸೀಮೆ ಎಣ್ಣೆ ಮಾರುವ ಯುವಕ ಕಾಳಿದಾಸ ಸೀಮೆಗಿಲ್ಲದ ಸುಂದರಿ ಒಬ್ಬಳ ಪ್ರೀತಿಗೆ ಬೀಳುತ್ತಾನೆ. ಅಲ್ಲೇ ಗಂಧದ ಕಡ್ಡಿ ಕಾರ್ಖಾನೆಯಲ್ಲಿ ದುಡಿಯುವ ಯುವತಿಯೊಡನೆ ಮೂಡಿದ ಸಲುಗೆ ಪ್ರೀತಿಯ ಹಾದಿ ಹಿಡಿದಿರುತ್ತದೆ. ಆದರೆ ಈ ಪ್ರೀತಿಯ ಹಾದಿಯಲ್ಲಿ ಒಬ್ಬ ಖಳನ ಎಂಟ್ರಿಯಾಗುತ್ತದೆ. ವಿಶೇಷ ಏನೆಂದರೆ ಆತ ಕಾಳಿದಾಸನ ಪರಿಚಿತನೇ ಆಗಿರುತ್ತಾನೆ. ಆತನ ಬಾಸ್ ದೇವ ಅಂದರೆ ಕಾಳಿದಾಸ ಮನಸಾರೆ ಆರಾಧಿಸುವ ವ್ಯಕ್ತಿ ಆಗಿರುತ್ತಾನೆ. ರೌಡಿಸಂಗೆ ಹೆಸರಾದ ದೇವನಿಗೂ ಕಾಳಿದಾಸ ಅಂದರೆ ಅಕ್ಕರೆ. ಆದರೆ ಅದೊಂದು ಘಟನೆ ಅವರಿಬ್ಬರನ್ನೂ ಬದ್ಧ ವಿರೋಧಿ ಗಳನ್ನಾಗಿ ಮಾಡುತ್ತದೆ. ಅದೇನು ಅಂತಹ ಘಟನೆ ಎಂದು ತಿಳಿಯಲು KD ಚಿತ್ರವನ್ನು ಪೂರ್ತಿ ವೀಕ್ಷಿಸಬೇಕು.

ಚಿತ್ರದಲ್ಲಿ ಕಾಳಿದಾಸನಾಗಿ ಧ್ರುವ ಸರ್ಜಾ ನಟನೆ ಆಕರ್ಷಕವಾಗಿದೆ. ಮುಗ್ದ ಪ್ರೇಮಿಯಾಗಿ ನಟಿಸುತ್ತಲೇ ದೇವನ ಮುಂದೆ ಕುಸ್ತಿಯ ಪಟ್ಟುಗಳನ್ನು ತೋರಿಸುತ್ತಾನೆ. ಮಚ್ಚಿನ ಪಟ್ಟುಗಳನ್ನು ಕೂಡ ಪ್ರದರ್ಶಿ ಸುತ್ತಾನೆ.

 

ಧ್ರುವ ಸರ್ಜಾ ಮಾದರಿಯಲ್ಲೇ ಪ್ರಧಾನ್ಯತೆ ಪಡೆದಿರುವ ಮತ್ತೊಂದು ಪಾತ್ರ ಸಂಜಯ್ ದತ್ ಅವರದ್ದು. ದೇವ ಪಾತ್ರಕ್ಕೆ ಅವರು ಕೂಡ ಅಕ್ಷರಶಃ ಜೀವ ತುಂಬಿದ್ದಾರೆ. ಕಾಳಿದಾಸನ ಅಣ್ಣನ ಪಾತ್ರದಲ್ಲಿ ರಮೇಶ್ ಅರವಿಂದ್ ಅದ್ಭುತವಾಗಿ ನಟಿಸಿದ್ದಾರೆ. ಅವರದು ಸಾಮಾನ್ಯ ಪೋಷಕ ಪಾತ್ರ ಮಾತ್ರವಾಗಿರದೆ ಕಥೆಗೆ ಒಂದು ವಿಶೇಷ ತಿರುವು ನೀಡುತ್ತದೆ.

 

ಕಾಳಿದಾಸ ಚಿತ್ರದ ಒಂದು ಭಾಗವಾದರೆ, ಅಂದಿನ ರಾಜಕೀಯ, ರೌಡಿಸಂ, ವ್ಯಾಪಾರ ಹೀಗೆ ವಿವಿಧ ಮಜಲುಗಳನ್ನು ತೋರಿಸುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ. ಅಂದಿನ ಕಾಲಘಟ್ಟದ ಬೆಂಗಳೂರನ್ನು, ವಾಹನಗಳನ್ನು ವಾಸ್ತವ ರೂಪದಲ್ಲಿ ತೋರಿಸುವಲ್ಲಿ ಕಲಾ ನಿರ್ದೇಶಕರು ಗೆದ್ದಿದ್ದಾರೆ. ಅರ್ಜುನ್ ಜನ್ಯ ಹಾಡುಗಳಿಗೆ ಆಕರ್ಷಕ ನೃತ್ಯ ನಿರ್ದೇಶನವಿದೆ.

 

ಈ  ಸಿನಿಮಾದಲ್ಲಿ ಸ್ಟಾರ್ ಕಲಾವಿದರು ಮಾತ್ರ ಅಲ್ಲ. ನಾಯಕ, ಖಳನಾಯಕರಾಗಿ ನಟಿಸುವ ಯಶ್ ಶೆಟ್ಟಿ ಕೂಡ ಒಂದು ಪ್ರಧಾನ ಪಾತ್ರ ನಿಭಾಯಿಸಿದ್ದಾರೆ.

 

ನಾಯಕಿಯಾಗಿ ರೀಶ್ಮಾ ನಾಣಯ್ಯ, ನಾಯಕಿ ತಾಯಿ ಪಾತ್ರದಲ್ಲಿ

ಮಾನಸಿ ಸುಧೀರ್, ಪೊಲೀಸ್ ಪಾತ್ರಗಳಲ್ಲಿ ಪಿ. ರವಿಶಂಕರ್, ಅಶ್ವಿನ್ ಹಾಸನ್,

ಸುಚೇಂದ್ರ ಪ್ರಸಾದ್, ಮುನಿ ಮೊದಲಾದವರು ಇದ್ದಾರೆ. ಉಳಿದಂತೆ ಶೋಭರಾಜ್, ಬಿಗ್ ಬಾಸ್ ಖ್ಯಾತಿಯ ರಘು, ಹೀಗೆ ಜನಪ್ರಿಯ ಕಲಾವಿದರ ದಂಡೇ ಇಲ್ಲಿದೆ.

 

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪಾತ್ರದ ಮುಖ್ಯ ಭಾಗ ಎರಡನೇ ಭಾಗಕ್ಕೆ ಸೀಮಿತವಾದ ಹಾಗಿದೆ. ಮಾತ್ರವಲ್ಲ ಸುದೀಪ್ ಅವರ ಪಾತ್ರ ಕೂಡ ಎರಡನೇ ಭಾಗದಲ್ಲಿ ಮುಂದುವರಿಯಲೇಬೇಕಾಗಿದೆ. ಹೀಗಾಗಿಯೇ

ಚಿತ್ರದ ಎರಡನೇ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಯಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,