ಜೀ 5ನಲ್ಲಿ ಜಾದು ಮಾಡುವ ’ಜೆರಾಕ್ಸ್’ ಮಶೀನ್!****
ಹೊಸತನದ ವೆಬ್ ಸಿರೀಸ್ ಮೂಲಕ ಜಾದು ಮಾಡುವ ಜೀ5, ಈ ಬಾರಿ ಕಥೆಯಲ್ಲೇ ಜಾದೂ ಮಾಡಿದೆ! ಡಾಲಿ ಧನಂಜಯ ನಿರ್ಮಾಣದ ’ಜೆರಾಕ್ಸ್’ ಹೆಸರಿನ ಈ ಸಿರೀಸ್ ಇದೇ ಏಪ್ರಿಲ್ 24ರಿಂದ ಪ್ರದರ್ಶನ ಕಾಣಲಿದೆ.
ಇದು ಒಂದು ಜೆರಾಕ್ಸ್ ಮಶೀನ್ ಸುತ್ತ ಸುತ್ತುವ ಕಥೆ. ಆದರೆ ಇಡೀ ಕಥೆಯಲ್ಲಿ ಜೆರಾಕ್ಸ್ ಜಾದು ಜತೆಜತೆಗೇನೆ ಪ್ರೇಮಕಥೆ, ರಾಜಕೀಯ ಮತ್ತು ಹಾಸ್ಯವನ್ನು ಕೂಡ ಸೇರಿಸಿರುವಂಥ ಕಥೆ ಇದು.
ಕಥೆಯಲ್ಲಿ ನಾಗಭೂಷಣ್ ಅವರದ್ದು ಪ್ರಧಾನ ಪಾತ್ರ. ಜೆರಾಕ್ಸ್ ಅಂಗಡಿ ಕೂಡ ಆತನದ್ದೇ. ಆದರೆ ಹಾಳಾದ ಜೆರಾಕ್ಸ್ ಮಶೀನ್ ಕೂಡ ಸಾಮಾನ್ಯನೊಬ್ಬನ ಹಣೆ ಬರಹವನ್ನೇ ಬದಲಾಯಿಸಿ ಹೇಗೆ ಆತನನ್ನು ನಾಯಕನಾಗಿಸುತ್ತದೆ ಎನ್ನುವುದನ್ನು ಫ್ಯಾಂಟಸಿ ರೂಪದಲ್ಲಿ ತೋರಿಸುತ್ತದೆ.
ನಾಗಭೂಷಣ್ ಗೆ ಜೆರಾಕ್ಸ್ ಅಂಗಡಿ ಹಾಕಿಕೊಟ್ಟಂಥ ಸಂಬಂಧಿಕರಾಗಿ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ನಟಿಸಿದ್ದಾರೆ. ಜೆರಾಕ್ಸ್ ಅಂಗಡಿಗೆ ಎಂಟ್ರಿ ಕೊಡುವ ಓಂ ಪ್ರಕಾಶ್ ಪಾತ್ರದೊಂದಿಗೇನೇ ಕಥೆಗೆ ಫ್ಯಾಂಟಸಿ ಎಂಟ್ರಿಯಾಗುತ್ತದೆ. ಆದರೆ ಅದಕ್ಕೆ ಕಥಾನಾಯಕ ಕಟ್ಟಿರುವ ತಾಯತವೇ ಕಾರಣ ಎನ್ನುವುದು ಮತ್ತೊಂದು ಪ್ರಮುಖ ಅಂಶ. ಆದರೆ ನಾಗಭೂಷಣ್ ಜೆರಾಕ್ಸ್ ಅಂಗಡಿಯಲ್ಲಿ ಪತ್ರಿಕೆಗಳಷ್ಟೇ ಜೆರಾಕ್ಸ್ ಆಗುವುದಿಲ್ಲ. ಫೊಟೋ ಕೊಟ್ಟರೆ ಮನುಷ್ಯ ರೂಪವೇ ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತದೆ! ಹಾಗೆ ಪ್ರತ್ಯಕ್ಷಗೊಂಡ ಆಕಾರ, ನಾಗಭೂಷಣ್ ಮಾತಾಡುವುದನ್ನೇ ಏಕಕಾಲದಲ್ಲಿ ಪ್ರತಿನುಡಿಯುತ್ತದೆ. ಇಂಥದೊಂದು ಜಾದು ಕಥೆಗೊಂದು ಅದ್ಭುತ ಆಯಾಮವನ್ನೇ ತಂದುಕೊಟ್ಟಿದೆ.
ಇಲ್ಲಿ ನಾಗಭೂಷಣ್ ಗೆ ಒಂದು ಒನ್ ಸೈಡೆಡ್ ಪ್ರೇಮಕಥೆಯಿದೆ. ಆತನಲ್ಲಿ ಪ್ರೀತಿ ಮೂಡಿಸಿದಾಕೆ ಪಾಯಲ್ ಚೆಂಗಪ್ಪ. ಆದರೆ ಆಕೆಗೆ ಮತ್ತೊಂದು ಪ್ರೇಮಕಥೆ ಇದೆ. ಆ ಪ್ರೇಮದ ಕಥೆಯೇನು? ಪಾಯಲ್ ವಿಚಾರದಲ್ಲಿ ಪಾಗಲ್ ಆದ ನಾಗಭೂಷಣ್ ಹೂಡುವ ಉಪಾಯವೇನು? ಆದರೆ ಈ ಯೋಜನೆಯೇ ಮುಳುಗುವ ಸಂದರ್ಭ ಸೃಷ್ಟಿಯಾಗುವುದೇಕೆ? ಎನ್ನುವಂಥ ಪ್ರಶ್ನೆಗಳಿಂದ ಕಾಡಿಸುತ್ತಾ ಎಪಿಸೋಡ್ ಸಾಗುತ್ತದೆ. ಆರಂಭದ ಮೂರು ಸಂಚಿಕೆಗಳಲ್ಲಿ ಈ ಇಂಟರೆಸ್ಟಿಂಗ್ ಜರ್ನಿಯನ್ನು ಮಾಧ್ಯಮದ ಮುಂದೆ ಪ್ರದರ್ಶಿಸಲಾಗಿದೆ. ಎಲ್ಲರಿಂದ ವ್ಯಾಪಕ ಪ್ರಶಂಸೆ ಪಡೆದಿರುವುದು ಖುಷಿಯ ವಿಚಾರ.
ಬ್ಲಿಂಕ್ ಎನ್ನುವ ಸಿನಿಮಾದಿಂದ ಈಗಾಗಲೇ ವಿಮರ್ಶಕರ ಮೆಚ್ಚುಗೆ ಗಳಿಸಿರುವ ನಿರ್ದೇಶಕ ಶ್ರೀನಿಧಿ ಈ ವೆಬ್ ಸಿರೀಸ್ ಮೂಲಕ ಇನ್ನಷ್ಟು ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಡಾಲಿ ಪಿಕ್ಚರ್ಸ್ ಮೂಲಕ ನಿರ್ಮಾಣವಾಗಿರುವ ಈ ವೆಬ್ ಸಿರೀಸ್ ನಲ್ಲಿ ಧನಂಜಯನ ಆತ್ಮೀಯ ನಾಗಭೂಷಣ್ ಪ್ರಧಾನ ಪಾತ್ರ ಮಾಡಿದ್ದಾರೆ. ಈಗಾಗಲೇ ಅಮೃತ್ ಅಂಜನಾ ಸಿನಿಮಾದಲ್ಲಿ ಹೆಸರು ಮಾಡಿರುವ ಪಾಯಲ್ ಚೆಂಗಪ್ಪ ನಾಯಕಿ ಪಾತ್ರ ನಿಭಾಯಿಸಿದ್ದಾರೆ. ಅಮೃತ ಅಂಜನ್ ನಾಯಕ ಸುಧಾಕರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಓಂ ಪ್ರಕಾಶ್ ರಾವ್ ಸೇರಿದಂತೆ ಜನಪ್ರಿಯ ಕಲಾವಿದರ ತಂಡವೇ ಈ ಸಿರೀಸ್ ನಲ್ಲಿದೆ. ನಿರ್ದೇಶಕ ವಿಜಯ ಪ್ರಸಾದ್ ರಾಜಕಾರಣಿ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ
ಮಂಜು ಪಾವಗಡ,ತುಕಾಲಿ ಸಂತು, ಕಾಮಿಡಿ ಕಿಲಾಡಿ ಜಗ್ಗಪ್ಪ ಮೊದಲಾದವರ ನಟನೆ ಗಮನ ಸೆಳೆಯುವಂತಿದೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ
ಧನಂಜಯ, ನಾಗಭೂಷಣ ಮತ್ತು ತಾಂತ್ರಿಕ ವರ್ಗದವರು ಈ ವೆಬ್ ಸಿರೀಸ್ ಬಗ್ಗೆ ಭಾರಿ ಭರವಸೆ ವ್ಯಕ್ತಪಡಿಸಿದ್ದಾರೆ.