Peter.Film Reviews

Friday, April 10, 2026

 

ಚೆಂಡೆ ನಾದದಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ದೃಶ್ಯಕಾವ್ಯ

 

ಚಿತ್ರ: ಪೀಟರ್****

ನಿರ್ದೇಶನ: ಸುಕೇಶ್ ಶೆಟ್ಟಿ

ನಿರ್ಮಾಪಕರು: ರವಿ ಹಿರೇಮಠ, ರಾಕೇಶ್ ಹೆಗ್ಗಡೆ

ತಾರಾಗಣ: ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ ಮೊದಲಾದವರು.

 

ಗ್ರಾಮೀಣ ಸೊಗಡು ತುಂಬಿರುವ ಕಥೆಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಬೆರೆಸಿ ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸುಕೇಶ್ ಶೆಟ್ಟಿ. ಕಿರುತೆರೆಯಲ್ಲಿ ಜನಪ್ರಿಯರಾಗಿರುವ ರಾಜೇಶ್ ಧ್ರುವ ತಾವು ಬೆಳ್ಳಿತೆರೆಯಲ್ಲಿ ಹೇಗೆಲ್ಲ ಕಾಣಿಸಬಹುದೆನ್ನುವ ಕಲ್ಪನೆಯನ್ನು ಕೂಡ ಮೀರುವಂತೆ ತೋರಿಸಿಕೊಟ್ಟಿದ್ದಾರೆ.

 

ಚಿತ್ರದ ಶೀರ್ಷಿಕೆಯೇ ಸಾರುವಂತೆ ನಾಯಕನ ಹೆಸರು ಪೀಟರ್. ಆದರೆ ಆತನ ಕಾಯಕ ಚೆಂಡೆ ನುಡಿಸುವುದು. ಹೌದು. ಪೀಟರ್ ಚೆಂಡೆಯನ್ನು ಬಾರಿಸುವುದಿಲ್ಲ. ಆತನ‌ ಕೈಗಳಲ್ಲಿ ಚೆಂಡೆ ನುಡಿಯುತ್ತವೆ. ಆತ ಚೆಂಡೆ ನುಡಿಸಿದನೆಂದರೆ ಕೇಳುಗರ ಕಿವಿಗಳು ಆ ಮಾಂತ್ರಿಕ ಶಬ್ದಕ್ಕಾಗಿ ತುಡಿಯುತ್ತವೆ. ಪೀಟರ್ ಇಲ್ಲಿ ಕೇವಲ ಚೆಂಡೆ ನುಡಿಸುವವನಷ್ಟೇ ಅಲ್ಲ. ಬದುಕಿನ ಪೆಟ್ಟುಗಳು ಕೂಡ ಆತನನ್ನೇ ಚೆಂಡೆಯಂತೆ ಬಡಿದಾಡುತ್ತವೆ. ಆದರೆ ಆ ಬಡಿದಾಟದ ಹಿಂದಿನ ಕಥೆಗಳೆಲ್ಲ ಚಿತ್ರದುದ್ದಕ್ಕೂ ಒಂದೊಂದೇ ರಹಸ್ಯವನ್ನು ಬಿಚ್ಚಿಡುತ್ತಾ ಸಾಗುತ್ತವೆ. ಹೀಗಾಗಿ ಪೀಟರ್ ಸಿನಿಮಾ ಅಗಲ ಮಾತ್ರವಲ್ಲ, ಪ್ರೇಕ್ಷಕರನ್ನು ಆಳವಾಗಿಯೂ ಕಾಡುತ್ತಾ ಸಾಗುತ್ತದೆ. 

ಕೊಡಗು‌ ಭಾಗದಲ್ಲಿ ನಡೆಯುವ ಕಥೆಯಲ್ಲಿ ಒಂದು ಸಾಂಸ್ಕೃತಿಕ, ಕೌಟುಂಬಿಕ ಮುಖಗಳು ಕೂಡ ಇವೆ. ಪೀಟರ್ ಬದುಕಿನ ಬಹುಮುಖ್ಯ ಸಸ್ಪೆನ್ಸ್ ಒಂದು ಚಿತ್ರದ ಕೊನೆಯಲ್ಲಿ ಅನಾವರಣಗೊಳ್ಳುತ್ತದೆ. ಅದುವರೆಗೆ ನೋಡುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ನಿರ್ದೇಶಕರು ತೋರಿಸಿದ್ದಾರೆ.

 

ಪೀಟರ್ ಆಗಿ ರಾಜೇಶ್ ಧ್ರುವ ತಮ್ಮ ವೃತ್ತಿ ಬದುಕಿನ‌ ಉತ್ತಮ‌ ಅಭಿನಯವನ್ನೇ ನೀಡಿದ್ದಾರೆ. ಮುಗ್ದ ಮತ್ತು ರಫ್ ಎರಡು ಛಾಯೆಗಳಿಗೂ ನ್ಯಾಯ ಒದಗಿಸಿದ್ದಾರೆ. ಪೀಟರ್ ನಂತೆಯೇ ಪೀಟರ್ ತಾಯಿಯ ಪಾತ್ರಕ್ಕೂ ಚಿತ್ರದಲ್ಲಿ ಪ್ರಾಧಾನ್ಯತೆ ಇದೆ. ಆ ಪಾತ್ರವನ್ನು ಪ್ರತಿಮಾ ನಾಯಕ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಉಳಿದಂತೆ ಪ್ರತಿಯೊಂದು ಪಾತ್ರಗಳು ಕೂಡ ಪೀಟರ್ ಪಾತ್ರವನ್ನು ಆಪ್ತವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ರವೀಕ್ಷಾ ಶೆಟ್ಟಿ ಸೇರಿದಂತೆ ರಾಧಾ ಟೀಚರ್ ಪಾತ್ರಧಾರಿ ಜಾನ್ವಿ ರಾಯಲ ಕೂಡ ಇದಕ್ಕೊಂದು ಉದಾಹರಣೆ.

 

ಚಿತ್ರದಲ್ಲಿ ಪೀಟರ್ ಚೆಂಡೆಯಷ್ಟೇ ಮಾತನಾಡುವುದಲ್ಲ. ಒಂದಿಡೀ ಚೆಂಡೆ ಮೇಳವನ್ನೇ ಕಥೆಯೊಳಗೆ ತರಲಾಗಿದೆ. ಹೀಗಾಗಿಯೇ ರಿತ್ವಿಕ್ ಮುರಳೀಧರ್ ಅವರ ಸಂಗೀತ ಕೂಡ ಚಿತ್ರದ ಪ್ರಮುಖ ಭಾಗವಾಗಿದೆ. ಛಾಯಾಗ್ರಹಣ ಕೂಡ ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ ಈ ದೃಶ್ಯಕಾವ್ಯವನ್ನು ಪರದೆಯ ಮೇಲೆ ನೋಡುವುದು ಒಂದು ಸುಂದರವಾದ ಅನುಭೂತಿ.

 

Copyright@2018 Chitralahari | All Rights Reserved. Photo Journalist K.S. Mokshendra,