ಸ್ತ್ರೀಯರ ಆ ದಿನಗಳ ಕುರಿತೊಂದು ಅದ್ಭುತ ಸಂದೇಶ
ಚಿತ್ರ: ಕ್ಯಾಲೆಂಡರ್****
ನಿರ್ದೇಶನ: ನವೀನ್ ಶಕ್ತಿ
ನಿರ್ಮಾಣ: ಆದರ್ಶ್ ಗುಂಡುರಾಜ್
ತಾರಾಗಣ: ಆದರ್ಶ್ ಗುಂಡುರಾಜ್, ಸುಶ್ಮಿತಾ ನಾಯಕ್, ರಮೇಶ್ ಇಂದಿರಾ, ಮಾಲಾಶ್ರೀ ಮೊದಲಾದವರು.
"ಕ್ಯಾಲೆಂಡರ್ ನಲ್ಲಿರುವ ನಂಬರ್ಸ್ ಮತ್ತು ಮನೇಲಿರುವ ಮೆಂಬರ್ಸ್ ಬಗ್ಗೆ ಅಬ್ಸರ್ವ್ ಮಾಡ್ತಿದ್ರೆ ಸಮಸ್ಯೆಗಳೇ ಇರಲ್ಲ!" ಇದು ಕಥಾ ನಾಯಕನ ಸಂಭಾಷಣೆ. ಸಿನಿಮಾ ಬಿಡುಗಡೆಗೂ ಮೊದಲೇ ಟ್ರೇಲರ್ ಮೂಲಕ ಕುತೂಹಲ ಸೃಷ್ಟಿಸಿದ ಈ ಡೈಲಾಗ್ ಗೆ ಕಳಶವಿಟ್ಟಂಥ ಕಥೆಯೊಂದಿಗೆ ಕ್ಯಾಲೆಂಡರ್ ತೆರೆಗಪ್ಪಳಿಸಿದೆ.
ಸಿನಿಮಾ ನೋಡುತ್ತಾ ಹೋದಂತೆ ’ಕ್ಯಾಲೆಂಡರ್’ ಎನ್ನುವ ಹೆಸರು ಈ ಚಿತ್ರಕ್ಕೆ ಎಷ್ಟು ಸೂಕ್ತವಾಗಿದೆ ಎಂದು ಅರ್ಥವಾಗುತ್ತಾ ಹೋಗುತ್ತದೆ. ಪ್ರತಿ ಮಹಿಳೆಯ ಡಿಪ್ರೆಶನ್, ಮೂಡ್ ಸ್ವಿಂಗ್ಸ್ ಹಿಂದೆ ಇಷ್ಟೆಲ್ಲ ಕಥೆ ಇದೆ ಎನ್ನುವುದನ್ನು ರೋಚಕವಾಗಿ ಹೇಳಿರುವಂಥ ಚಿತ್ರ ಇದು.
ಬಾರ್ ಒಂದರಲ್ಲಿ ಪಾನಮತ್ತನಾಗಿ ಕುಳಿತ ಭಗ್ನಪ್ರೇಮಿ ಡಾಕ್ಟರ್ ಆಕಾಶ್ ನಿಂದ ಕಥೆ ಶುರುವಾಗುತ್ತದೆ. ಆದರೆ ಆತನ ಪ್ರೇಮ ಭಗ್ನವಾಗಲು ಕಾರಣವಾಗಿ ಆಕಾಶ್ ಗೆ ಗಗನ ಕುಸುಮವಾದ ನಕ್ಷತ್ರಾಳ ಕಥೆ ತೆರೆದುಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ನಾಯಕನ ಮತ್ತೋರ್ವ ವಿವಾಹಿತ ಗೆಳತಿಯ ಬಗ್ಗೆ ಕೂಡ ಹೇಳಲಾಗುತ್ತದೆ. ಇವೆಲ್ಲದರ ಮಧ್ಯೆ ಬಾಲ್ಯದ ಕ್ರಶ್ ರಮ್ಯಳನ್ನು ಕೂಡ ತೋರಿಸಲಾಗುತ್ತದೆ. ಆದರೆ ಇವರೆಲ್ಲರ ಬಾಳಿನಲ್ಲಿ ಕೂಡ ಅಹಿತಕರ ಘಟನೆಗಳು ನಡೆದಿರುತ್ತವೆ. ಅದಕ್ಕೂ ಈ ಡಾಕ್ಟರ್ ಆಕಾಶ್ ಗೂ ಇರುವ ಸಂಬಂಧವೇನು ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್ ಬಿಚ್ಚಿಡುವ ಸತ್ಯ.
ಡಾಕ್ಟರ್ ಅಕ್ಷಯ್ ಪಾತ್ರದಲ್ಲಿ ಆದರ್ಶ್ ಗುಂಡುರಾಜ್ ಪಾತ್ರಕ್ಕೆ ಒಪ್ಪುವ ನಟನೆ ನೀಡಿದ್ದಾರೆ. ಕುಡುಕನಾಗಿ, ಪ್ರೇಮಿಯಾಗಿ, ವೈದ್ಯನಾಗಿ ವಿವಿಧ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಯಸಿ ನಕ್ಷತ್ರಾ ಪಾತ್ರವನ್ನು ಸುಶ್ಮಿತಾ ನಾಯಕ್ ಆಕರ್ಷಕವಾಗಿ ನಿರ್ವಹಿಸಿದ್ದಾರೆ. ಪದೇ ಪದೆ ಬದಲಾಗುವ ಮನಸ್ಥಿತಿಯನ್ನು ತಮ್ಮ ಮುಖಭಾವದಲ್ಲೇ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಾಶ್ ಸ್ನೇಹಿತೆ ಮಾಳವಿಕಾಳಾಗಿ ನಿಶ್ವಿಕಾ ಪಾಟೀಲ್ ಅಭಿನಯಿಸಿದ್ದಾರೆ. ನಟನೆಯೊಂದಿಗೆ ಅದ್ಭುತ ಮೈಕಟ್ಟು ಹೊಂದಿರುವ ಈ ಸುಂದರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ಬರುವುದು ಖಚಿತ.
ಚಿತ್ರದಲ್ಲಿ ಮಹಿಳೆಯರ ಮುಟ್ಟಿನ ದಿನಗಳ ಬಗ್ಗೆ ಮಾಹಿತಿ ಇದೆ. ಮಹಿಳೆಯರ ವರ್ತನೆಯಲ್ಲಿನ ಬದಲಾವಣೆಗಳ ಬಗ್ಗೆ ಸಮರ್ಪಕವಾದ ವಿವರಣೆ ಇದೆ. ವೈದ್ಯರ ದೃಷ್ಟಿಕೋನವಿದೆ.ಆ ದಿನಗಳಲ್ಲಿ ಸ್ತ್ರೀಯರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಬಗ್ಗೆ ಸೂಚನೆಯಿದೆ. ಇದು ಕೌಟುಂಬಿಕ ಚಿತ್ರ ಮಾತ್ರವಲ್ಲ. ಸಕುಟುಂಬಿತರಾಗಿ ನೋಡಲೇಬೇಕಾದ ಚಿತ್ರ ಎನ್ನುವುದು ಇದರಿಂದ ಮನವರಿಕೆಯಾಗುತ್ತದೆ.
ಸುಚೇಂದ್ರ ಪ್ರಸಾದ್ ಅವರ ವಕೀಲನ ಪಾತ್ರ, ಪೊಲೀಸ್ ತನಿಖಾಧಿಕಾರಿ ಪಾತ್ರದ ರಮೇಶ್ ಇಂದಿರಾ ನಟನೆ ಈ ಚಿತ್ರದ ಹೈಲೈಟ್. ಆಕಾಶ್ ಫ್ರೆಂಡ್ ಸೂರ್ಯನಾಗಿ ಗುರುನಂದನ್, ಯುವ ರಾಜಕಾರಣಿಯಾಗಿ ಪ್ರಮೋದ್ ಶೆಟ್ಟಿ ಮೊದಲಾದವರ ನಟನೆ ಕೂಡ ಮರೆಯುವಂತಿಲ್ಲ. ಶಿವ ಪ್ರದೀಪ್, ಪ್ರಕಾಶ್ ತೂಮಿನಾಡು, ಚಂದ್ರಪ್ರಭ ಅವರು ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸುನಾದ್ ಗೌತಮ್ ಸಂಗೀತದಲ್ಲಿ ಹಾಡುಗಳು ಚಿತ್ರಕ್ಕೆ ಹೊಸ ಚೈತನ್ಯ ನೀಡಿವೆ. ಎಲ್ಲ ರೀತಿಯಿಂದಲೂ ವೈವಿಧ್ಯಮಯವಾಗಿರುವ ಈ ಚಿತ್ರ ಮನೆಮಂದಿಯನ್ನು ಚಿತ್ರಮಂದಿರದತ್ತ ಸೆಳೆಯುವುದು ಖಚಿತ.