ಡ್ರಗ್ ಜಾಲದ ವಿರುದ್ಧ ಭರ್ಜರಿ ಆ್ಯಕ್ಷನ್
ಚಿತ್ರ: ಆಲ್ಫಾ****
ನಿರ್ದೇಶನ: ವಿಜಯ್ ನಾಗೇಂದ್ರ
ನಿರ್ಮಾಣ: ಎಲ್. ಎ ಪ್ರೊಡಕ್ಷನ್ಸ್
ತಾರಾಗಣ: ಹೇಮಂತ್ ಕುಮಾರ್, ಗೋಪಿಕಾ ಸುರೇಶ್, ಅಯನಾ ಮುಂತಾದವರು.
ಆಲ್ಫಾ ಅಂದರೆ ’ಆರಂಭದ’ ಅಥವಾ ’ಮುನ್ನಡೆಸಬಲ್ಲ’ ಎನ್ನುವಂಥ ಪಾಸಿಟಿವ್ ಅರ್ಥಗಳಿವೆ. ಚಿತ್ರದ ನಾಯಕ ಹೇಮಂತ್ ಕುಮಾರ್ ’ಆರಂಭದ’ ಚಿತ್ರದಲ್ಲೇ ಚಿತ್ರರಂಗವನ್ನು ಮುನ್ನಡೆಸಬಲ್ಲ ಶಕ್ತಿಯೊಂದಿಗೆ ಬಂದಿರುವುದಾಗಿ ತೋರಿಸಿದ್ದಾರೆ.
ಪೊಲೀಸ್ ಅಧಿಕಾರಿ ಶಕ್ತಿ ಪ್ರಸಾದ್ ಪುತ್ರನೇ ಅರ್ಜುನ್. ಐಪಿಎಸ್ ಮಾಡಬೇಕೆನ್ನುವ ತಂದೆಯ ಕನಸನ್ನು ನನಸು ಮಾಡಲು ಹೊರಟಂಥ ಯುವಕ. ಆದರೆ ಪರೀಕ್ಷೆ ಬರೆಯುವ ಮೊದಲೇ ದಂಡಂ ದಶಗುಣಂ ಎನ್ನುವಂಥ ವರ್ತನೆ. ಇಂಥ ಹೊಡೆದಾಟಗಳ ನಡುವೆಯೇ ಒಂದು ಸರಳವಾದ ಪ್ರೇಮ. ಅಚಾನಕ್ಕಾಗಿ ಪರಿಚಿತಳಾದ ಆಕಾಂಕ್ಷಾ ಅಂದರೆ ಅದೇನೋ ಆಕಾಂಕ್ಷೆ. ಆದರೆ ಇದೇ ಪ್ರೀತಿ ಕೊನೆಯವರೆಗೂ ಉಳಿಯುತ್ತಾ? ತಂದೆಯನ್ನು ಅತಿಯಾಗಿ ಪ್ರೀತಿಸುವ ಅರ್ಜುನ್ ಗೆ ಎದುರಾಗುವ ಸಮಸ್ಯೆಗಳೇನು? ಅವುಗಳಿಂದ ಪಾರಾಗುವ ಬಗೆ ಹೇಗೆ? ಈ ಎಲ್ಲವನ್ನೂ ತೋರಿಸುವ ಚಿತ್ರವೇ ಆಲ್ಫಾ.
ಅರ್ಜುನ್ ಪಾತ್ರವನ್ನು ನವ ನಟ ಹೇಮಂತ್ ಕುಮಾರ್ ನಿರ್ವಹಿಸಿದ್ದಾರೆ. ಮೊದಲ ದೃಶ್ಯದಿಂದಲೇ ಗಮನ ಸೆಳೆಯುವ ಹೇಮಂತ್ ತಾವೊಬ್ಬ ನವ ನಟ ಎನ್ನುವ ಸುಳಿವನ್ನೇ ನೀಡದಂತೆ ನಟಿಸಿದ್ದಾರೆ. ಹೇಮಂತ್ ತಂದೆ ಪೊಲೀಸ್ ಅಧಿಕಾರಿ ಶಕ್ತಿ ಪ್ರಸಾದ್ ಪಾತ್ರವನ್ನು ಅಚ್ಯುತ್ ಕುಮಾರ್ ನಿಭಾಯಿಸಿದ್ದಾರೆ. ಅಚ್ಯುತ್ ಅವರ ಪಾತ್ರ ಈ ಹಿಂದಿನ ತಂದೆಯ ಪಾತ್ರಗಳಿಗಿಂತ ವಿಭಿನ್ನತೆ ಹೊಂದಿದೆ. ನಾಯಕನ ಜಿಮ್ ಮೇಟ್ ಗೆಳತಿ ಆಕಾಂಕ್ಷಾ ಪಾತ್ರವನ್ನು ಗೋಪಿಕಾ ಸುರೇಶ್ ಮಾಡಿದ್ದಾರೆ. ಪೊಲೀಸ್ ಗೆಳತಿ ಅನುರಾಧಾ ಪಾತ್ರವನ್ನು ಅಯನಾ ನಿರ್ವಹಿಸಿದ್ದಾರೆ.
ಚಿತ್ರದ ಪ್ರಧಾನ ಪಾತ್ರಗಳಲ್ಲಿ ಹೊಸಬರೇ ಇದ್ದರೂ ಉಳಿದಂತೆ ಭರ್ಜರಿ ತಾರಾಗವೇ ತುಂಬಿದೆ. ಅಚ್ಯುತ್ ಕುಮಾರ್ ಪತ್ನಿಯಾಗಿ ಮಾನಸ ಸುಧೀರ್, ಐಜಿ ಅಶ್ವಥ್ ಕುಮಾರ್ ಪಾತ್ರದಲ್ಲಿ ಅವಿನಾಶ್, ಪೊಲೀಸ್ ಅಧಿಕಾರಿಗಳಾಗಿ ಬಿ.ಎಮ್. ಗಿರಿರಾಜ್ ಮತ್ತು ರಾಘು ಶಿವಮೊಗ್ಗ ಮೊದಲಾದವರು ಇದ್ದಾರೆ.
ಪ್ರಮುಖ ಖಳ ಪಾತ್ರವನ್ನು ಕಾರ್ತಿಕ್ ಮಹೇಶ್ ನಿರ್ವಹಿಸಿರುವುದು ವಿಶೇಷ. ರಮೇಶ್ ಇಂದಿರಾ ಮತ್ತು ಬಾಲು ನಾಗೇಂದ್ರ ನಟಿಸಿರುವ ಪಾತ್ರಗಳು ಕೂಡ ಕಥೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿವೆ.
ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ವೇಗವಾಗಿ ಸಾಗುವ ಕಥೆಯಲ್ಲಿ ಡ್ರಗ್ಸ್ ಜಾಲದ ವಿರುದ್ಧದ ಹೋರಾಟ ಮತ್ತು ಅದೇ ಸಂದರ್ಭದಲ್ಲಿ ತಂದೆ ಮಗನ ಸೆಂಟಿಮೆಂಟ್ ಎನ್ನುವ ಎರಡು ಅಂಶಗಳನ್ನು ತೂಗಿಸಿಕೊಂಡು ಹೋಗಲಾಗಿದೆ. ಹಾಗಾಗಿಯೇ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.