ಕ್ಷಣ ಕ್ಷಣವೂ ರೋಚಕ ತಿರುವು ನೀಡುವ ತನಿಖೆ
ಚಿತ್ರ: ಸೆಕೆಂಡ್ ಕೇಸ್ ಆಫ್ ಸೀತಾರಾಮ ****
ನಿರ್ದೇಶನ: ದೇವಿ ಪ್ರಸಾದ್ ಶೆಟ್ಟಿ
ನಿರ್ಮಾಣ: ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್
ತಾರಾಗಣ: ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.
ಸೀತಾರಾಮ್ ದಕ್ಷ ಪೊಲೀಸ್ ಅಧಿಕಾರಿ. ಆದರೆ ಹೊಸದಾಗಿ ಉದ್ಭವವಾಗಿರುವ ಸಮಸ್ಯೆ ಮಾತ್ರ ತನ್ನ ತನಿಖೆಗೆ ನಿಲುಕದಂತೆ ಕಾಡುತ್ತದೆ. ಊರಿನ ಒಬ್ಬೊಬ್ಬರೇ ಪುರುಷರು ನಾಪತ್ತೆಯಾಗುತ್ತಾರೆ. ಬಳಿಕ ಚಿತ್ರಹಿಂಸೆಯಲ್ಲಿ ಸತ್ತ ಹೆಣವಾಗಿ ಪತ್ತೆಯಾಗುತ್ತಾರೆ. ಈ ಸರಣಿ ಕೊಲೆಗಾರನನ್ನು ಸೀತಾರಾಮ್ ಪತ್ತೆ ಮಾಡುವ ಕಥೆಯೇ ಸೆಕೆಂಡ್ ಕೇಸ್ ಆಫ್ ಸೀತಾರಾಮ್.
ಪೊಲೀಸ್ ಅಧಿಕಾರಿ ಸೀತಾರಾಮ್ ಎಷ್ಟೊಂದು ಚಾಣಾಕ್ಷ ಎನ್ನುವುದನ್ನು ಈಗಾಗಲೇ ’ಸೀತಾರಾಮ್ ಬಿನೋಯ್’ ಚಿತ್ರದ ಮೂಲಕ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಆದರೆ ತಾವೇ ಸೃಷ್ಟಿಸಿದ ಸೀತಾರಾಮ್ ಗೆ ಭೇದಿಸಲಾಗದ ಚಕ್ರವ್ಯೂಹದಂಥ ಸರಣಿ ಕೊಲೆಯ ಸಮಸ್ಯೆಯನ್ನು ತಂದಿಟ್ಟಿದ್ದಾರೆ. ಹೀಗಾಗಿ ಈ ಚಿತ್ರ ಆರಂಭದಿಂದ ಕೊನೆಯವರೆಗೂ ಕ್ಷಣ ಕ್ಷಣವೂ ರೋಚಕವೆನಿಸುವಂತೆ ಮಾಡಿದೆ.
ಒಂದೊಂದು ಕೊಲೆಯಾಗುತ್ತಲೂ ಕೊಲೆಗಾರ ಯಾರಿರಬಹುದು ಎನ್ನುವ ಕುತೂಹಲ ಹೆಚ್ಚಾಗುತ್ತಲೇ ಹೋಗುತ್ತದೆ. ಮಧ್ಯಂತರಕ್ಕೂ ಮೊದಲೇ ಇನ್ನೇನು ಕೊಲೆಗಾರ ಸಿಕ್ಕೇ ಬಿಟ್ಟ ಎನ್ನುವ ನಂಬಿಕೆ ಮೂಡುತ್ತದೆ. ಆದರೆ ಕೊನೆಯ ದೃಶ್ಯದ ತನಕವೂ ಆ ಸಸ್ಪೆನ್ಸ್ ಉಳಿಸಿಕೊಳ್ಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಮಾತ್ರವಲ್ಲ ಆ ಸರಣಿ ಹತ್ಯೆಗೆ ಪೂರಕವಾದ ಕಾರಣವನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ಚಿತ್ರಿಸಿದ್ದಾರೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ನಿರ್ವಹಿಸಿರುವ ಪೊಲೀಸ್ ಅಧಿಕಾರಿಯ ಪಾತ್ರ ಆಕರ್ಷಕವಾಗಿದೆ. ಸಿನಿಮೀಯ ಪಾತ್ರ ಎನ್ನುವುದಕ್ಕಿಂತಲೂ ನಮ್ಮದೇ ಊರಿಗೆ ಹೊಸದಾಗಿ ಬಂದ ಶಿಷ್ಟ ಪೊಲೀಸ್ ಅಧಿಕಾರಿಯೇನೋ ಎನ್ನುವ ಭಾವ ಮೂಡಿಸುತ್ತಾರೆ. ಪ್ರತಿಯೊಂದು ಘಟನೆಗೂ ವಿಜಯ್ ರಾಘವೇಂದ್ರ ನೀಡುವ ಪ್ರತಿಕ್ರಿಯೆಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿವೆ. ಹೀಗಾಗಿಯೇ ಸೀತಾರಾಮ್ ಪಾತ್ರ ಮನದೊಳಗೆ ಭದ್ರ ಸ್ಥಾನ ಪಡೆಯುತ್ತದೆ.
ಚಿತ್ರದ ಆರಂಭದಲ್ಲೇ ಸರಣಿ ಹಂತಕನ ಲಕ್ಷಣಗಳೊಂದಿಗೆ ಪ್ರತ್ಯಕ್ಷಗೊಳ್ಳುವುದು ಸೆಬಾಸ್ಟಿಯನ್ ಪಾತ್ರ. ಅಮಾನತುಗೊಂಡ ಶಾಲಾಶಿಕ್ಷಕ ಸೆಬಾಸ್ಟಿಯನ್ ಪಾತ್ರವನ್ನು ಗೋಪಾಲಕೃಷ್ಣ ದೇಶಪಾಂಡೆ ಅದ್ಭುತವಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಉಷಾ ಭಂಡಾರಿ ಸೇರಿದಂತೆ ಪ್ರತಿಯೊಂದು ಪಾತ್ರಗಳಿಗೂ ಚಿತ್ರದಲ್ಲಿ ಪ್ರಾಧಾನ್ಯತೆ ಇದೆ. ಆದರೆ ಆ ಪಾತ್ರಗಳ ಬಗ್ಗೆ ವಿವರಿಸಲು ಹೋದರೆ ಸಸ್ಪೆನ್ಸ್ ಬ್ರೇಕ್ ಆಗುವ ಸಾಧ್ಯತೆ ಇದೆ. ಈ ರೋಮಾಂಚಕಾರಿ ಥ್ರಿಲ್ಲರ್ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡಿ ಅನುಭವಿಸುವುದೇ ಉತ್ತಮ.
ಚಿತ್ರದ ಹೈಲೈಟ್ ಕಥೆಯಾದರೆ ಅದನ್ನು ದೇವಿ ಪ್ರಸಾದ್ ಶೆಟ್ಟಿ ನಿರೂಪಿಸಿರುವ ರೀತಿ ಅದ್ಭುತ. ಅದಕ್ಕೆ ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣಕ್ಕೆ ನವನೀತ್ ಶ್ಯಾಮ್ ಸಂಗೀತ ಜೀವಂತಿಕೆ ನೀಡಿದೆ.