ಒಂದು ಕೌಟುಂಬಿಕ ಪ್ರೇಮ ಕವನ ಈ ’ಸೀತಾ ಪಯಣ’
ಚಿತ್ರ: ಸೀತಾ ಪಯಣ****
ನಿರ್ದೇಶನ: ಅರ್ಜುನ್ ಸರ್ಜಾ
ನಿರ್ಮಾಪಕ: ಅರ್ಜುನ್ ಸರ್ಜಾ
ತಾರಾಗಣ: ನಿರಂಜನ್ ಸುಧೀಂದ್ರ, ಐಶ್ವರ್ಯಾ ಅರ್ಜುನ್, ಪ್ರಕಾಶ್ ರಾಜ್ ಮೊದಲಾದವರು.
ಇದು ಒಂದು ಪಯಣದ ಕಥೆ. ಚಿತ್ರಕ್ಕೆ ’ಸೀತಾ ಪಯಣ’ ಎನ್ನುವ ಹೆಸರಿದೆ ಎನ್ನುವ ಕಾರಣಕ್ಕೆ ಇದು ರಾಮಾಯಣಕ್ಕೆ ಸಂಬಂಧಿಸಿದ ಕಥೆ ಎಂದುಕೊಳ್ಳಬೇಕಾಗಿಲ್ಲ. ಆದರೆ ಸೀತೆ ಎನ್ನುವ ಯುವತಿಯ ಬಾಳಲ್ಲಿ ಒಂದು ಪಯಣದಿಂದ ಉಂಟಾಗುವ ಬದಲಾವಣೆಗಳೇನು ಎನ್ನುವುದನ್ನು ತೋರಿಸುವ ಕಥೆ.
ಸೀತಾ ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮಗಳು. ಹಾಗಾಗಿಯೇ ತಂದೆಯಲ್ಲೇ ತಾಯಿಯನ್ನು ಕಾಣುತ್ತಾಳೆ. ಅಪ್ಪನನ್ನು ಅಮ್ಮ ಎಂದೇ ಕರೆಯುತ್ತಾಳೆ. ತಾನು ವಿವಾಹವಾಗಿ ಹೋದರೆ ತಂದೆಯನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಆತಂಕದಿಂದಲೇ ನೋಯುತ್ತಾಳೆ. ಬದುಕಿನ ಕುರಿತಾದ ಮಗಳ ಚಿಂತೆಗಳನ್ನು ಕಂಡು ಆ ತಂದೆ ಒಳಗೊಳಗೆ ಕೊರಗುತ್ತಾನೆ. ಹೀಗೆ ಕೊರಗಿದ ತಂದೆ ಮಗಳ ಮನಸ್ಸನ್ನು ಬದಲಾಯಿಸಲು ಒಂದು ಉಪಾಯ ಹೆಣೆಯುತ್ತಾನೆ. ಆ ಉಪಾಯವೇನು? ಆ ಉಪಾಯವೇ ಒಂದು ಅಪಾಯಕ್ಕೆ ದಾರಿಯಾಗುವುದೇಕೆ?
ಇವೆಲ್ಲಕ್ಕೆ ಉತ್ತರವನ್ನು ಚಿತ್ರದಲ್ಲಿ ನೋಡುವುದೇ ಸೊಗಸು.
ಸೀತೆಯಾಗಿ ಐಶ್ವರ್ಯಾ ಪಾತ್ರಕ್ಕೆ ಹೊಂದುವಂತೆ ನಟಿಸಿದ್ದಾರೆ. ಅಥವಾ ತಂದೆಯಾಗಿ ಅರ್ಜುನ್ ಮಗಳಿಗೆಂದೇ ಪಾತ್ರವನ್ನು ಬರೆದಿದ್ದಾರೆ. ಹೀಗಾಗಿ ಸೀತಾ ಪಾತ್ರವಾಗಿಯೇ ಐಶ್ವರ್ಯಾ ಜೀವಿಸಿದಂತೆ ಕಾಣುತ್ತಾರೆ. ನಿರಂಜನ್ ಸುಧೀಂದ್ರ ಅವರ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ನಿರಂಜನ್ ಅವೆರಡನ್ನೂ ಅದ್ಭುತವಾಗಿ ನಿಭಾಯಿಸಿದ್ದಾರೆ. ನಿರಂಜನ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಹಳ್ಳಿಯ ಮುದುಕನ ಪಾತ್ರಕ್ಕೆ ಜೀವ ನೀಡಿದ್ದಾರೆ. ಪ್ರಕಾಶ್ ರಾಜ್ ಪತ್ನಿಯಾಗಿ ಹಿರಿಯ ನಟಿ ಸುಮಿತ್ರಾ ಬಾಬು ಕಾಣಿಸಿದ್ದಾರೆ. ಐಶ್ವರ್ಯಾ ತಂದೆಯಾಗಿ ತಮಿಳು ನಟ ಸತ್ಯರಾಜ್ ಅಭಿನಯಿಸಿದ್ದಾರೆ.
ವಿಶೇಷ ಪಾತ್ರಗಳಲ್ಲಿ ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಖ್ಯಾತ ತಮಿಳು ನಟಿ ಕೋವೈ ಸರಳಾ ಅವರು ಕೂಡ ಎರಡು ದೃಶ್ಯಗಳಲ್ಲಿ ಕಾಣಿಸುತ್ತಾರೆ. ಬಹುಭಾಷೆಯ ಕಲಾವಿದರ ಆಯ್ಕೆ ಮಾತ್ರವಲ್ಲ, ಸಬ್ಜೆಕ್ಟ್ ಆಯ್ಕೆಯಲ್ಲೂ ಅರ್ಜುನ್ ಸರ್ಜಾ ಬುದ್ಧಿವಂತಿಕೆ ಮೆರೆದಿದ್ದಾರೆ. ಯಾವ ಭಾಷೆಗೂ ಹೊಂದಬಲ್ಲ ಭಾರತೀಯ ಮಣ್ಣಿನ ಗುಣ ಸಾರುವ ಕಥೆಯನ್ನು ಪರದೆಯ ಮೇಲೆ ತೋರಿಸಿದ್ದಾರೆ. ಹಾಡುಗಳು ಕೂಡ ಆಕರ್ಷಕವಾಗಿವೆ.
ಬಾಲಮುರುಗನ್ ಛಾಯಾಗ್ರಹಣದಲ್ಲಿ ದೃಶ್ಯಕಾವ್ಯವಾಗಿ ಮೂಡಿರುವ ಸೀತಾ ಪಯಣ ಕೌಟುಂಬಿಕ ಪ್ರೇಕ್ಷಕರ ಜತೆಗೆ ಆ್ಯಕ್ಷನ್ ಪ್ರಿಯರಿಗೂ ಇಷ್ಟವಾಗುವಂಥ ಚಿತ್ರ.