Veera Kambala.Reviews

Friday, February 27, 2026

 

ಚಿತ್ರ: ವೀರ ಕಂಬಳ****

ನಿರ್ದೇಶನ: ಎಸ್.ವಿ ರಾಜೇಂದ್ರ ಸಿಂಗ್ ಬಾಬು

ನಿರ್ಮಾಣ: ಅರುಣ್ ರೈ ತೋಡಾರ್  ಮತ್ತು ವನಿತಾ ವಿಜಯ್ ಕುಮಾರ್ ರೆಡ್ಡಿ

ತಾರಾಗಣ: ಆದಿತ್ಯ, ರಾಧಿಕಾ ನಾರಾಯಣ್, ನವೀನ್ ಡಿ ಪಡೀಲ್ ಮೊದಲಾದವರು

 

ಕಂಬಳ‌ ಕರ್ನಾಟಕದ ತುಳುನಾಡು ಭಾಗದ ಜಾನಪದ ಕ್ರೀಡೆ. ಈ ಕ್ರೀಡೆ ಅಲ್ಲಿನ ಜನ ಜೀವನದೊಂದಿಗೆ, ಕೌಟುಂಬಿಕ ಸಂಬಂಧದೊಂದಿಗೆ ಎಷ್ಟೊಂದು ಹಾಸುಹೊಕ್ಕಾಗಿದೆ ಎನ್ನುವುದನ್ನು ವೀರ ಕಂಬಳ‌ ಚಿತ್ರದ ಮೂಲಕ ತೋರಿಸಲಾಗಿದೆ.

 

ಇಲ್ಲಿ ದುಬೈನಲ್ಲಿ ಆಯುಧ‌ ಕೈಗೆತ್ತಿಕೊಂಡ ಉದ್ಯಮಿ ಇದ್ದಾನೆ. ಹಳ್ಳಿಯಲ್ಲಿ ಹೋಟೆಲ್ ನಡೆಸುವ ಸ್ಥಳೀಯ ಉದ್ಯಮಿ ಇದ್ದಾನೆ. ಕಂಬಳದ ಗದ್ದೆಯಲ್ಲಿ ನಡೆದ ಜಗಳದಲ್ಲಿ ಮಾತು ಬಿಟ್ಟ ಎರಡು ಕುಟುಂಬಗಳಿವೆ. ಆದರೆ ಇವರೆಲ್ಲರ ಮನದ ಬಯಕೆ ಕಳೆದ 6 ದಶಕಗಳಿಂದ ತಮ್ಮ ಊರಿನಲ್ಲಿ ನಿಂತೇ ಹೋದ ಕಂಬಳವನ್ನು ಮತ್ತೆ ಆರಂಭಿಸುವುದೇ ಆಗಿದೆ. ಆದರೆ ಈ ಪ್ರಯತ್ನಕ್ಕೆ ತಡೆ ಒಡ್ಡುವ ಶಕ್ತಿಗಳಿವೆ. ಅವುಗಳಲ್ಲಿ ಒಂದು ಮಾಜಿ ಶಾಸಕನ ತಂಡ. ಆತನ‌ ಆಸೆಯನ್ನು ‌ಕಾರ್ಯಗತಗೊಳಿಸಲು ಪೆಟಾ ಕೂಡ‌ ಜೋಡಿ ಸೇರುತ್ತದೆ.

ಕಂಬಳದ ಪರವಾಗಿ ನ್ಯಾಯಾಲಯದಲ್ಲಿ ಸಿಕ್ಕ ತೀರ್ಪು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ನೈಜ ಘಟನೆಯ ಹಿನ್ನೆಲೆಯಲ್ಲಿ ಮೂಡಿ‌ ಬಂದಿರುವ ಈ ಚಿತ್ರ ಕಂಬಳ ಪ್ರಿಯರನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.

 

ದುಬೈನಲ್ಲಿರುವ ಉದ್ಯಮಿಯಾಗಿ ಆದಿತ್ಯ, ಹಳ್ಳಿಯ ಹೋಟೆಲ್ ಉದ್ಯಮಿಯಾಗಿ ಗೋಪಿನಾಥ್ ಭಟ್, ಮಾತು ಬಿಟ್ಟ ಕುಟುಂಬಗಳಲ್ಲಿ ಒಬ್ಬರು ಉಷಾ ಭಂಡಾರಿ, ಮತ್ತೊಬ್ಬರು ಗೀತಾ ಸುರತ್ಕಲ್ ಹೀಗೆ ಅಭಿನಯಿಸಿದ್ದಾರೆ.

 

ತುಳುರಂಗಭೂಮಿಯ ಜನಪ್ರಿಯ ಕಲಾವಿದರಾದ ಭೋಜರಾಜ್ ವಾಮಂಜೂರು, ಮೈಮ್ ರಾಮದಾಸ್ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ.‌ ನವೀನ್ ಡಿ ಪಡೀಲ್ ಅವರಂತೂ ಒಂದು ಪ್ರಮುಖ ಪಾತ್ರವನ್ನೇ ನಿಭಾಯಿಸಿದ್ದಾರೆ. ಕಂಬಳದ ಪರವಾದ ವಾದ ಮಂಡಿಸಲು ಪ್ರಕಾಶ್ ರಾಜ್, ವಿರುದ್ಧವಾಗಿ ವಾದಿಸಲು ಪಿ ರವಿಶಂಕರ್ ಎನ್ನುವ ಇಬ್ಬರು ದಿಗ್ಗಜರನ್ನು ಜತೆಯಾಗಿ ಕಾಣುವುದೇ ಖುಷಿ. ಎಲ್ಲಕ್ಕೂ ಕಳಶ ಇಟ್ಟಂತೆ ರಾಧಿಕಾ ನಾರಾಯಣ್ ಒಂದು ವಿಶೇಷ ಪಾತ್ರದಲ್ಲಿ ಚಿತ್ರಕ್ಕೆ ಹೊಸ ಕಳೆ ತಂದಿದ್ದಾರೆ‌.

 

ಚಿತ್ರದ ದ್ವಿತೀಯಾರ್ಧದಲ್ಲಿ ಕಂಬಳದ ಕೋಣಗಳ ನಡುವಿನ ಸ್ಪರ್ಧೆ ನೋಡುವುದೇ ಸೊಗಸು.ಅವುಗಳ ಮಧ್ಯದ ಗೆಲುವನ್ನು ಕೂಡ ಕಥೆಗೆ ಹೊಂದುವಂತೆ ಕಟ್ಟಿಕೊಟ್ಟ ನಿರ್ದೇಶಕರ ಪ್ರಯತ್ನ ಅಭಿನಂದನಾರ್ಹ. ಕರಾವಳಿಯ ಸೊಗಡನ್ನು ತೋರಿಸುವ ಈ ಚಿತ್ರ ಎಲ್ಲ ಕರುನಾಡಿನ ಪ್ರೇಕ್ಷಕರ ಮನಕ್ಕೆ ಆಪ್ತವಾಗುವಂತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,