ಈ ನಗುವಿನ ಹಬ್ಬ ಖಂಡಿತಾ ’ಸೂಪರ್ ಹಿಟ್’
ಚಿತ್ರ: ಸೂಪರ್ ಹಿಟ್****
ನಿರ್ದೇಶನ: ವಿಜಯಾನಂದ್
ನಿರ್ಮಾಣ: ಉಮೇಶ್ ಜಿ
ತಾರಾಗಣ: ಗಿಲ್ಲಿ ನಟ, ಗೌರವ್ ಶೆಟ್ಟಿ, ಶ್ವೇತಾ ಮೊದಲಾದವರು.
ಅಪಹರಣ ಮಾಡಿದ ಕಾರಿನಲ್ಲಿ ಸಂಬಂಧವೇ ಇರದ ಮೂವರು ಒಟ್ಟಾಗುತ್ತಾರೆ. ಮತ್ತೆ ಇನ್ನಷ್ಟು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ. ಹೀಗೆ ಪ್ರತಿಯೊಬ್ಬರ ಕಥೆಯನ್ನು ಒಂದಕ್ಕೊಂದು ಸೇರಿಸಿದಾಗ ಉಂಟಾಗುವ ಸಂಬಂಧವೇ ಸೂಪರ್ ಹಿಟ್.
ಬೀದಿಯಲ್ಲಿ ಅನಾಥವಾಗಿ ಸಿಕ್ಕ ಕಾರ್ ಕೀ ಮತ್ತು ಕಾರ್ ಕಂಡು ಯುವಕನೋರ್ವ ಕಾರ್ ಏರಿಕೊಳ್ಳುತ್ತಾನೆ. ಯುವತಿಯೊಬ್ಬಳು ಓಡಿಬಂದು ಕಾರು ಚಲಾಯಿಸುವಂತೆ ಬೇಡಿಕೊಳ್ಳುತ್ತಾಳೆ. ಆನಂತರ ಮತ್ತೋರ್ವ ಯುವಕ ಅದೇ ಕಾರನ್ನು ಗನ್ ಹಿಡಿದು ಅಡ್ಡ ಹಾಕುತ್ತಾನೆ. ಹೀಗೆ ಒಂದೇ ಕಾರಲ್ಲಿ ಸೇರಿಕೊಂಡವರನ್ನು ಪರಸ್ಪರ ಸೇರಿಸುವ ವಿಭಿನ್ನ ಕಥೆಯೇ ಸೂಪರ್ ಹಿಟ್. ಕಾರೇರುವ ಯುವಕನಾಗಿ ಗೌರವ್ ಶೆಟ್ಟಿ, ಯುವತಿಯಾಗಿ ಶ್ವೇತಾ ಮತ್ತು ಮತ್ತು ಗನ್ ತೋರಿ ಬೆದರಿಸಿ ಕಾರ್ ಅಡ್ಡಹಾಕುವ ವ್ಯಕ್ತಿಯಾಗಿ ಗಿಲ್ಲಿ ನಟ ಅಭಿನಯಿಸಿದ್ದಾರೆ.
ಗಿಲ್ಲಿ ನಟ ಅವರಿಗೆ ನಾಯಕರಾಗಿ ಇದು ಮೊದಲ ಚಿತ್ರ. ಆದರೆ ಅಂಥ ಯಾವುದೇ ರಿಯಾಯಿತಿಗಳಿರದೆ ಅನುಭವಿ ನಟ ನೀಡುವಂಥ ನಟನೆಯನ್ನೇ ತೋರಿಸಿದ್ದಾರೆ. ಬೀದಿಯಲ್ಲಿ ಸಿಕ್ಕ ಕಾರ್ ಚಲಾಯಿಸಿಕೊಂಡು ಹೋಗುವ ಯುವಕನಾಗಿ ಮತ್ತೋರ್ವ ನಟ ಗೌರವ್ ಶೆಟ್ಟಿ ಅಭಿನಯಿಸಿದ್ದಾರೆ. ಗೌರವ್ ಶೆಟ್ಟಿಗೆ ಜೋಡಿಯಾಗಿ ಯುವನಟಿ ಶ್ವೇತಾ ಇದ್ದಾರೆ.
ಪೂರ್ತಿ ಚಿತ್ರವನ್ನು ಹಾಸ್ಯಾತ್ಮಕವಾಗಿ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅಪಹರಣವಿರಲಿ, ಅದೆಂಥದೇ ಸನ್ನಿವೇಶ ಇರಲಿ ಎಲ್ಲರ ಬಾಯಿಯಿಂದಲೂ ತಮಾಷೆಯ ಸಂಭಾಷಣೆಗಳೇ ಉದುರುತ್ತವೆ. ಅದರಲ್ಲೂ ಗಿಲ್ಲಿನಟ ಅವರ ಇಮೇಜ್ ಉಳಿಸಿಕೊಳ್ಳುವಂಥ ಪ್ರಾಸಬದ್ಧ ಸಂಭಾಷಣೆಗಳು ಪ್ರೇಕ್ಷಕರಿಗೆ ಕಿಕ್ ನೀಡುವುದರಲ್ಲಿ ಸಂದೇಹವೇ ಇಲ್ಲ.
ಸಾಧು ಕೋಕಿಲ ಅವರ ಅದ್ಭುತ ಎಂಟ್ರಿಯೊಂದಿಗೆ ಆರಂಭವಾಗುವ ಚಿತ್ರದಲ್ಲಿ ಹಲವು ಕನ್ನಡ ಸಿನಿಮಾ ದೃಶ್ಯಗಳನ್ನು ಹಾಸ್ಯಾತ್ಮಕವಾಗಿ ಬಳಸಲಾಗಿದೆ. ಓಂನಲ್ಲಿನ ಶಿವಣ್ಣ, ಕೆ.ಜಿ.ಎಫ್ ನ ಯಶ್, ವಾಲಿ ಚಿತ್ರದ ಸುದೀಪ್ ಪಾತ್ರಗಳ ಪ್ರಮುಖ ದೃಶ್ಯಗಳನ್ನು ಇಲ್ಲಿ ತಮಾಷೆ ರೂಪದಲ್ಲಿ ಬದಲಾಯಿಸಿ ನೆನಪಿಸಲಾಗಿದೆ. ಅವು ಆ ನಟರ ಅಭಿಮಾನಿಗಳಿಗೂ ಖುಷಿ ನೀಡುವುದು ಖಚಿತ.
ದೃಶ್ಯವೊಂದರಲ್ಲಿ ನಿರ್ದೇಶಕ ವಿಜಯಾನಂದ್ ತಮ್ಮ ಅಣ್ಣ ನಾಗೇಂದ್ರ ಪ್ರಸಾದ್ ಅವರೊಂದಿಗೆ ಪ್ರತ್ಯಕ್ಷರಾಗುವುದು ವಿಶೇಷ. ಗೋವಿಂದೇಗೌಡ, ಪ್ರಮೋದ್ ಶೆಟ್ಟಿ, ಡ್ರ್ಯಾಗನ್ ಮಂಜು, ಟೆನ್ನಿಸ್ ಕೃಷ್ಣ ಹೀಗೆ ಭರ್ಜರಿ ತಾರಾಗಣದೊಂದಿಗೆ ಸಿನಿಮಾ ನಗುವಿನ ಹಬ್ಬವಾಗಿ ಖುಷಿ ನೀಡುತ್ತದೆ.