ದಮನಿತರ ಪರ ಧ್ವನಿಯಾಗುವ ಅಶೋಕ
ಚಿತ್ರ: ದಿ ರೈಸ್ ಆಫ್ ಅಶೋಕ****
ನಿರ್ದೇಶನ: ವಿನೋದ್ ದೋಂಡಾಳೆ
ನಿರ್ಮಾಣ: ವರ್ಧನ್ ಹರಿ
ತಾರಾಗಣ: ನೀನಾಸಂ ಸತೀಶ್, ಸಪ್ತಮಿ ಗೌಡ ಮೊದಲಾದವರು.
ಇದು ಜಾತಿಯ, ವರ್ಣದ ಹೆಸರಲ್ಲಿ ಕ್ಷೌರಿಕ ವರ್ಗದ ಮೇಲೆ ಈ ಮಣ್ಣಿನಲ್ಲಿ ನಡೆದ ದೌರ್ಜನ್ಯದ ಕಥೆ. ಅದನ್ನು ಸಮರ್ಥವಾಗಿ ಎದುರಿಸಿದ ಎದುರಾಳಿಯೇ ಅಶೋಕ.
ಆ ಹಳ್ಳಿಯಲ್ಲೊಂದು ಮುಡಿಕಟ್ಟೆ ಇದೆ. ಅಲ್ಲಿ ಕೂದಲು ಕ್ಷೌರ ಮಾಡಲೆಂದೇ ಹಳ್ಳಿಯ ಒಂದು ವರ್ಗವೇ ಬಂದು ಸೇರುತ್ತದೆ. ಆದರೆ ಅವರೆಲ್ಲ ಅದರ ಮಾಲಿಕ ಕುಟ್ಟಿ ಬಾಬ್ಜಿಯ ಬಳಿ ಗುಲಾಮರಂತೆ ಕೆಲಸ ಮಾಡುತ್ತಿರುತ್ತಾರೆ. ಅವರಲ್ಲಿ ಅಶೋಕನ ತಂದೆ ಗಂಗಾಧರನೂ ಒಬ್ಬ. ಅನಕ್ಷರಸ್ಥ ಗಂಗಾಧರನಿಗೆ ತನ್ನ ಮಗ ಓದಿ ಸರ್ಕಾರಿ ನೌಕರಿ ಪಡೆಯಬೇಕು ಎನ್ನುವ ಕನಸು ಇರುತ್ತದೆ. ಆದರೆ ಅದು ನನಸಾಗುವುದೇ? ಕುಟ್ಟಿ ಬಾಬ್ಜಿಯ ಕಾಟಕ್ಕೆ ಹಳ್ಳಿಗರು ಕಾಣುವ ಉತ್ತರವೇನು? ಎನ್ನುವುದನ್ನು ಚಿತ್ರ ಹೇಳುತ್ತದೆ.
ಇಂಥದೊಂದು ಸಬ್ಜೆಕ್ಟ್ ಮೇಲೆ ಚಿತ್ರ ಮಾಡಿರುವ ನಿರ್ದೇಶಕ ಮತ್ತು ನಿರ್ಮಾಪಕರನ್ನು ಮೊದಲು ಮೆಚ್ಚಬೇಕು. ಮಾತ್ರವಲ್ಲ ಸ್ಟಾರ್ ನಾಯಕನಾಗಿದ್ದು ಕೂಡ ಇಂಥದೊಂದು ಪಾತ್ರ ಮಾಡಲು ಸಿದ್ಧರಾದ ನೀನಾಸಂ ಸತೀಶ್ ಕೂಡ ಪ್ರಶಂಸೆಗೆ ಅರ್ಹರು. ಹಳ್ಳಿಯಲ್ಲಿ ಹೈದನಾಗಿ ಬೆಳೆದು ವಿದ್ಯಾವಂತಿಕೆಯ ಲಕ್ಷಣ ಮುಖದಲ್ಲಿರಿಸಿಕೊಂಡ ಯುವಕನಾಗಿ ಸತೀಶ್ ಮನಗೆಲ್ಲುತ್ತಾರೆ. ಸತೀಶ್ ಇಲ್ಲಿ ಅದ್ಭುತವಾಗಿ ಸಾಹಸವನ್ನು ಕೂಡ ನಿಭಾಯಿಸಿದ್ದಾರೆ. ನಟನೆ, ಆ್ಯಕ್ಷನ್ ಎರಡೂ ವಿಭಾಗ ದಲ್ಲಿಯೂ ಸತೀಶ್ ಗೆ ಡಬಲ್ ಮಾರ್ಕ್ಸ್ ಸಲ್ಲಲೇಬೇಕು.
ಸತೀಶ್ ತಂದೆಯಾಗಿ ಬಿ ಸುರೇಶ್ ಅದ್ಭುತವಾಗಿ ನಟಿಸಿದ್ದಾರೆ. ಭಾವನಾತ್ಮಕ ನಟನೆ ಅವರದು. ಸತೀಶ್ ಜೋಡಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಈಗಾಗಲೇ ಜನಪ್ರಿಯಗೊಂಡಿರುವ ಪ್ರೇಮಗೀತೆಗಳು ಪರದೆಯ ಮೇಲೆ ಮೂಡಿರುವ ರೀತಿಯೇ ಸೊಗಸು.
ಕುಟ್ಟಿ ಬಾಬ್ಜಿಯ ಕ್ರೌರ್ಯವನ್ನು ಸಂಪತ್ ಮೈತ್ರೇಯ ಅವರು ನಿರ್ವಹಿಸಿರುವ ರೀತಿ ಅದ್ಭುತ. ಸತೀಶ್ ಸ್ನೇಹಿತನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯ ಆಕರ್ಷಕ. ಕುಟ್ಟಿ ಬಾಬ್ಜಿಯ ಪುತ್ರನಾಗಿ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ವಿಶೇಷ ಪಾತ್ರದಲ್ಲಿ ಎಂಟ್ರಿಯಾಗಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಿನೋದ್ ದೊಂಡಾಳೆ ನಿರ್ದೇಶನದ ಶೈಲಿಯನ್ನು ಮೆಚ್ಚಲೇಬೇಕು. ಇದು ವರ್ಣಭೇದ ನೀತಿಯ ದೌರ್ಜನ್ಯ ಹೇಗಿತ್ತು ಎನ್ನುವ ಇತಿಹಾಸವನ್ನು ನೆನಪಿಸುವ ಚಿತ್ರ. ಹೀಗಾಗಿಯೇ ಸಮಾಜದ ಸತ್ಯಕ್ಕೆ ಹಿಡಿದಂಥ ಕನ್ನಡಿಯೂ ಹೌದು.