Raakshasa.Reviews

Friday, February 20, 2026

 

ಕ್ಷಣ ಕ್ಷಣವೂ ಬೆಚ್ಚಿ ಬೀಳಿಸುವ ರಾಕ್ಷಸಾವತಾರ..!

 

ಸೀರೀಸ್: ರಾಕ್ಷಸ****

ನಿರ್ದೇಶನ: ಸುಹಾನ್ ಪ್ರಸಾದ್

ನಿರ್ಮಾಣ: ತರುಣ್ ಸುಧೀರ್ ಕ್ರಿಯೇಟಿವ್ಸ್

ವಾಹಿನಿ: ಜೀ 5

ತಾರಾಗಣ: ವಿಜಯ್ ರಾಘವೇಂದ್ರ, ಮಯೂರಿ ಕ್ಯಾತರಿ ಮೊದಲಾದವರು.

 

 

ಈ ವಾರ ಜೀ ಫೈವ್ ವಾಹಿನಿಯಲ್ಲಿ ಹೊಸದೊಂದು ವೆಬ್ ಸಿರೀಸ್ ಪ್ರಸಾರ ಶುರುವಾಗಿದೆ. ಈಗಾಗಲೇ ’ರಾಕ್ಷಸ’ ಟ್ರೇಲರ್ ನೋಡಿದವರಿಗೆ ಇದರಲ್ಲಿ ಮೊಸಳೆಯೇ ರಾಕ್ಷಸ ಎನ್ನುವ ಸಂದೇಹ ಮೂಡುವುದು ಖಚಿತ. ಆದರೆ ಮಾಧ್ಯಮಗೋಷ್ಠಿಯಲ್ಲಿ ಮೂರು ಸಂಚಿಕೆಗಳನ್ನು ಪ್ರಸಾರ ಮಾಡಲಾಗಿದೆ. ಅವುಗಳು ಬೇರೆಯೇ ಕಥೆ ಹೇಳಿದ್ದು ಕುತೂಹಲ ಸೃಷ್ಟಿಸಿದೆ.

 

ಇದು ಒಂದು ಅಪಹರಣದ ಕುರಿತಾದ ಕಥೆ. ವಿಶೇಷ ಏನೆಂದರೆ ಅಪಹರಣದ ಕುರಿತಾದ ಕಥೆಗಳು ಸಾಲುಸಾಲಾಗಿ ಪ್ರದರ್ಶನಗೊಳ್ಳುತ್ತಿರುವ ಸಂದರ್ಭ ಇದು. ವಿಜಯ ರಾಘವೇಂದ್ರ ಪ್ರಧಾನ ಪಾತ್ರ ವಹಿಸಿರುವ ’ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಬಿಡುಗಡೆಯ ಸಂದರ್ಭದಲ್ಲೇ ವೆಬ್ ಸಿರೀಸ್ ಕೂಡ ರಿಲೀಸ್ ಆಗಿದೆ. ಎರಡರಲ್ಲೂ ನಾಪತ್ತೆ ಪ್ರಕರಣವೇ ಪ್ರಧಾನ ವಿಚಾರ. ಆದರೆ ತನಿಖೆಗೆ ಇಳಿಯುವ ಪೊಲೀಸ್ ಅಧಿಕಾರಿಯ ಪಾಲಿಗೆ ಎದುರಾಗುವ ತಿರುವುಗಳು ಮಾತ್ರ ತೀರ ವಿಭಿನ್ನ. ಅದರಲ್ಲೂ ’ರಾಕ್ಷಸ’ ವೆಬ್ ಸಿರೀಸ್ ಸಂಚಿಕೆಯಿಂದ ಸಂಚಿಕೆಗೆ ಕುತೂಹಲದ‌ ಉತ್ತುಂಗಕ್ಕೆ ಏರಿಸುತ್ತಾ ಹೋಗುತ್ತದೆ.

ಇದು ಸವದತ್ತಿ ತಾಲೂಕಿನಲ್ಲಿ ‌ನಡೆಯುವ ಘಟನೆ. ಹೀಗಾಗಿ ಚಿತ್ರದ ಪಾತ್ರಗಳೆಲ್ಲ‌ ಉತ್ತರ ಕರ್ನಾಟಕದ ಭಾಷೆ ಮಾತನಾಡುತ್ತವೆ. ಅದರಲ್ಲೂ ವಿಜಯ್ ರಾಘವೇಂದ್ರ ಪಾತ್ರದೊಳಗೆ ಹೊಕ್ಕಿರುವ ರೀತಿ ನೋಡಿದರೆ ಸವದತ್ತಿಯ ವ್ಯಕ್ತಿಯೇ ಇರಬಹುದು ಎನ್ನುವಂತಿದೆ.‌

 

ಡಿಎಸ್ ಪಿ‌ ರುದ್ರಪ್ಪನ‌ ಪಾತ್ರದಲ್ಲಿ ಅಭಿಜಿತ್ ನಟಿಸಿದ್ದಾರೆ. ‌ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಯ ಎಲ್ಲ ಮನೋಭಾವಗಳಿಗೆ ಕನ್ನಡಿ ಹಿಡಿಯುವಂಥ ನಟನೆ ತೋರಿಸಿದ್ದಾರೆ. ಎಎಸ್‌ಐ ಎಲ್ಲಪ್ಪನ‌ ಪಾತ್ರವನ್ನು ಅಪ್ಪಣ್ಣ ಹಾಗೂ ವಿರೂಪಾಕ್ಷನಾಗಿ ಜಹಾಂಗೀರ್ ಕಾಣಿಸಿಕೊಂಡಿದ್ದಾರೆ.‌ ಮಹದೇವ ಹಡಪದ್ ಬೀರನ ಪಾತ್ರದಲ್ಲಿ ಎಂಟ್ರಿ‌ ಕೊಡಲಿದ್ದಾರೆ.

 

ಮೇಲ್ನೋಟಕ್ಕೆ ಮೊಸಳೆ‌ಕಾಟವಾಗಿ ಕಾಣುವ ಕಥೆಯ ಹಿಂದೆ ಮರಳು ಮಾಫಿಯಾದ ಕರಾಳ ಕೈಗಳಿರುವ ಸೂಚನೆ ಲಭ್ಯವಾಗಿದೆ. ಈ ಎಲ್ಲ‌ ಕಾರಣದಿಂದಲೇ ಸಾಮಾಜಿಕ‌ ಕಾಳಜಿಯ ಈ ವೆಬ್ ಸರಣಿಗೆ ಕೌಟುಂಬಿಕ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಲು ಆರಂಭಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,