Marnami.Reviews

Friday, February 20, 2026

 

ಸ್ನೇಹ, ಪ್ರೀತಿ, ದ್ವೇಷ ಮತ್ತು‌ ಕಥೆ ಹೇಳುವ ಹುಲಿವೇಷ

 

ಚಿತ್ರ: ಮಾರ್ನಮಿ****

ನಿರ್ದೇಶಕ: ರಿಷಿತ್ ಶೆಟ್ಟಿ

ನಿರ್ಮಾಣ: ಶಿಲ್ಪಾ‌ ನಿಶಾಂತ್ ಮತ್ತು ನಿಶಾಂತ್ ಮುನಿಸ್ವಾಮಯ್ಯ

ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಜೆ ಆಚಾರ್ ಮೊದಲಾದವರು.

 

 

ಮಾರ್ನಮಿ ಅಂದರೆ ತುಳುನಾಡಿನಲ್ಲಿ ದಸರಾ ಹಬ್ಬ.  ಈ ಹಬ್ಬಕ್ಕೆ ಮಂಗಳೂರಿನಲ್ಲಿ ಹುಲಿವೇಷ ವಿಶೇಷ ಆಕರ್ಷಣೆ. ಆದರೆ ಆ ಹುಲಿವೇಷದ ಹಿಂದೆ ಅದನ್ನು ಹಾಕಿ ಕುಣಿಯುವವರ ಹಿಂದೆ ಅದೆಷ್ಟು ಕಥೆಗಳಿವೆ? ಹೊಡೆದಾಟಗಳಿವೆ ಎನ್ನುವುದನ್ನೇ ರಸವತ್ತಾಗಿ ಕಟ್ಟಿ ಕೊಟ್ಟಿರುವ ಚಿತ್ರವೇ ಮಾರ್ನಮಿ.

 

ಮಂಗಳೂರು ಬೆಂಗ್ರೆಯ ಚೇತು ತಂದೆ ತಾಯಿ ಇರದ ಅನಾಥ. ಅತ್ತೆ ಮಾವನ ಆಸರೆಯಲ್ಲಿ ಬೆಳೆದವನು. ಹುಲಿವೇಷ ಧರಿಸುವ ಬಗ್ಗೆ ಹರಕೆ ಹೊತ್ತವನು. ಸಂದರ್ಭವೊಂದು ಚೇತುವನ್ನು ಹೊಡೆದಾಟಕ್ಕೆ‌ ಇಳಿಯುವಂತೆ ಮಾಡುತ್ತದೆ. ಇದೇ ಸಂದರ್ಭದಲ್ಲಿ ದೀಕ್ಷಾ ಎನ್ನುವ ಸುಂದರಿಗೆ ಈತನಲ್ಲಿ ಪ್ರೀತಿಯೂ ಮೂಡುತ್ತದೆ. ಮುಂದೇನಾಯಿತು ಎನ್ನುವುದೇ ಮಾರ್ನಮಿಯ ಸಾರ.

 

ಚೇತುವಾಗಿ ನಟ ರಿತ್ವಿಕ್ ಮಠದ್ ಅಭಿನಯಿಸಿದ್ದಾರೆ. ಉತ್ತರ ಕನ್ನಡದವರಾದರೂ ಮಂಗಳೂರು ಕನ್ನಡವನ್ನು ಆವಾಹಿಸಿಕೊಂಡಿರುವ ರೀತಿ ಅದ್ಭುತವಾಗಿದೆ. ಆ್ಯಕ್ಷನ್, ಸೆಂಟಿಮೆಂಟ್, ಫೈಟ್, ಡಾನ್ಸ್ ಹೀಗೆ ಎಲ್ಲ ವಿಭಾಗದಲ್ಲೂ ರಿತ್ವಿಕ್ ಭರ್ಜರಿ ಸ್ಕೋರ್ ಮಾಡಿದ್ದಾರೆ. ರಿತ್ವಿಕ್ ಗೆ ಜೋಡಿಯಾಗಿ ಚೈತ್ರಾ ಜೆ  ಆಚಾರ್ ನಟನೆ ಕೂಡ ಗಮನಾರ್ಹವಾಗಿದೆ. ಚೈತ್ರಾ ಪಾತ್ರಕ್ಕೆ ಎರಡು ಮಗ್ಗುಲುಗಳಿವೆ. ಅದನ್ನು ಪ್ರದರ್ಶಿಸಿರುವ ರೀತಿ ಆಕರ್ಷಕವಾಗಿದೆ.

ಚಿತ್ರದಲ್ಲಿ ಹುಲಿ ಕುಣಿತ ಆಯೋಜಿಸುವ ಯಜಮಾನನಾಗಿ ಬಹುಭಾಷಾ ನಟ ಸುಮನ್ ತಲ್ವಾರ್ ನಟಿಸಿದ್ದಾರೆ. ವಿರೋಧಿ ತಂಡದವರಾಗಿ ಕುತಂತ್ರಿಯ ಪಾತ್ರವನ್ನು ಜ್ಯೋತಿಷ್ ಶೆಟ್ಟಿ ನಿಭಾಯಿಸಿದ್ದಾರೆ. ‌ಚೇತನ್ ಅತ್ತೆ ಮಾವನಾಗಿ ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳಿಗೆ ಜೀವ ತುಂಬುವಲ್ಲಿ ಚೈತ್ರಾ ಶೆಟ್ಟಿ ಮತ್ತು ಪ್ರಕಾಶ್ ತೂಮಿನಾಡ್ ಮನಮುಟ್ಟುವ ಅಭಿನಯ ನೀಡಿದ್ದಾರೆ. ನಾಯಕನ‌ ಬಾಲ್ಯ ಕಾಲದ ತಾಯಿ ಪಾತ್ರ ನಿರ್ವಹಿಸಿರುವ ಸೋನು ಗೌಡ ಪಾತ್ರ ಮನದೊಳಗೆ ಭದ್ರ ಸ್ಥಾನ ಗಿಟ್ಟಿಸುತ್ತದೆ.

 

ನಿರ್ದೇಶಕ ರಿಷಿತ್ ಶೆಟ್ಟಿಗೆ ಇದು ಮೊದಲ‌ ಚಿತ್ರ ಎಂದು ಹೇಳುವುದು ಕಷ್ಟ. ನುರಿತ ನಿರ್ದೇಶಕರಂತೆ ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಹಾಡುಗಳು ಮನ ಸೆಳೆಯುವಂತಿವೆ. ಶಿವ ಸೇನಾ ಛಾಯಾಗ್ರಹಣ ಚಿತ್ರವನ್ನು ನಯನ ಮನೋಹರಗೊಳಿಸಿದೆ.

 

ಮಂಗಳೂರು ಕರಾವಳಿಯ ಕುರಿತಾಗಿ ಬಂದ ಸಿನಿಮಾಗಳಲ್ಲಿ ಅಲ್ಲಿನ ಸಂಸ್ಕೃತಿಯನ್ನು ತೋರಿಸಿದ ಕಥೆಗಳೆಲ್ಲ ಪ್ರೇಕ್ಷಕರ ಗಮನ ಸೆಳೆದಿವೆ. ಇಲ್ಲಿ ಕೂಡ ಹುಲಿವೇಷದ ಜತೆಯಲ್ಲೇ ಹೇಳಲಾಗಿರುವ ಸ್ನೇಹ, ಪ್ರೀತಿ ಮತ್ತು ದ್ವೇಷ ತುಂಬಿದ ಈ ಕಥೆ ಕನ್ನಡ ಚಿತ್ರಪ್ರೇಮಿಗಳನ್ನು ಆಕರ್ಷಿಸುತ್ತಿರುವುದು ಸತ್ಯ.

 

Copyright@2018 Chitralahari | All Rights Reserved. Photo Journalist K.S. Mokshendra,