ಇದು ನಿಜಕ್ಕೂ ಸೀಟ್ ಎಡ್ಜ್ ನಲ್ಲೇ ಕುಳಿತು ನೋಡುವ ಚಿತ್ರ!
ಚಿತ್ರ: ಸೀಟ್ ಎಡ್ಜ್
ನಿರ್ದೇಶಕ: ಚೇತನ್ ಶೆಟ್ಟಿ
ನಿರ್ಮಾಪಕ: ಗಿರಿಧರ ಟಿ ವಸಂತಪುರ
ತಾರಾಗಣ: ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ ಮೊದಲಾದವರು.
ಇದೊಂದು ಕಾಮಿಡಿ ಹಾರರ್ ಸಿನಿಮಾ. ಸಾಮಾನ್ಯ ಯೂಟ್ಯೂಬರ್ ಒಬ್ಬ ದೆವ್ವದ ಮನೆಯಲ್ಲಿ ಸಿಕ್ಕಿಕೊಳ್ಳುವುದು ಚಿತ್ರದ ಪ್ರಮುಖ ಅಂಶ. ಅಲ್ಲಿಂದ ಹೇಗೆ ಪಾರಾಗುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ.
ಐಟಿ ಉದ್ಯೋಗ ತೊರೆದು ವ್ಲಾಗರ್ ಆಗಲು ಮುಂದಾದವನು ಸಿದ್ದು. ಆರಂಭದಲ್ಲಿ ’ನನ್ ನೋಡಿ’ ಎನ್ನುವ ಯೂಟ್ಯೂಬ್ ವಾಹಿನಿ ಮೂಲಕ ವಿಡಿಯೋ ಮಾಡಿ ಹಾಕುತ್ತಿರುತ್ತಾನೆ. ಈ ವಿಡಿಯೋಗಳಿಂದಾಗಿಯೇ ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡ ಹತ್ತುತ್ತಾನೆ. ಅಲ್ಲಿಂದ ಮರಳಿದ ಮೇಲೆ ದೆವ್ವದ ಬಗ್ಗೆ ಫೇಕ್ ಸ್ಟೋರಿ ಮಾಡುತ್ತಾನೆ. ಆದರೆ ನಿಜವಾದ ಘೋಸ್ಟ್ ಟೌನಲ್ಲಿ ಹೋಗಿ ಚಿತ್ರೀಕರಿಸುವ ಧೈರ್ಯ ಈತನಿಗೆ ಹೇಗೆ ಬರುತ್ತದೆ ಅನ್ನುವುದೇ ಚಿತ್ರದ ಪ್ರಮುಖ ತಿರುವು ಆಗಿರುತ್ತದೆ.
ಚಿತ್ರದ ಆರಂಭವೇ ನಾರ್ತ್ ನಿಂದ ಬಂದ ಒಬ್ಬಾತ ಘೋಸ್ಟ್ ಟೌನ್ ನಲ್ಲಿ ಸಿಕ್ಕಿಕೊಳ್ಳುವ ಮೂಲಕ ಶುರುವಾಗುತ್ತದೆ. ಆತ ಏನಾದ ಎನ್ನುವ ಕುತೂಹಲ ಉಳಿದುಕೊಂಡಿರುವ ಹಾಗೆಯೇ ಸಿದ್ದು ಮತ್ತು ಬಳಗದ ಕಥೆ ಶುರುವಾಗುತ್ತದೆ. ಹೀಗಾಗಿಯೇ ಹೆಸರಿಗೆ ತಕ್ಕಂತೆ ಪೂರ್ತಿ ಚಿತ್ರ ಪ್ರೇಕ್ಷಕರನ್ನು ಸೀಟ್ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯವಾಗಿ ಹಾರರ್ ಕಾಮಿಡಿ ಸಿನಿಮಾಗಳು ಜನಮನಗೆಲ್ಲುವಂತೆ ಮಾಡುವುದು ಕಷ್ಟದ ಸಂಗತಿ. ಆದರೆ ಸಿದ್ದು ಮೂಲಿಮನಿ ಹಾಸ್ಯಮಿಶ್ರಿತ ನಟನೆಯಲ್ಲಿ ಅದನ್ನು ಸಾಧಿಸಿದ್ದಾರೆ. ಜತೆಗೆ ರಘು ರಾಮನಕೊಪ್ಪ ಒಂದು ಒಳ್ಳೆಯ ಪಾತ್ರವಾಗಿ ಸಾಥ್ ನೀಡಿದ್ದಾರೆ. ಗಿರೀಶ್ ಶಿವಣ್ಣ ನಟನೆಯ ಪೊಲೀಸ್ ಪಾತ್ರವೂ ಕೂಡ ಚಿತ್ರದ ಹೈಲೈಟ್ ಆಗಿದೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಿರಣ್ ಕುಮಾರ್ ಸೇರಿದಂತೆ ಚಿತ್ರದ ತಾರಾಗಣವೇ ಆಕರ್ಷಣೀಯವಾಗಿದೆ.
ನಾಯಕಿಯಾಗಿ ರಾಶ್ವಿಕಾ ಶೆಟ್ಟಿ ಹಾರರ್ ಮಾತ್ರವಲ್ಲ ಗ್ಲಾಮರ್ ಗೂ ಸಾಥ್ ನೀಡಿದ್ದಾರೆ. ಸಂದರ್ಭಕ್ಕೆ ತಕ್ಕಂಥ ಸಂಗೀತ, ವ್ಲಾಗರ್ ಗೆ ಬೇಕಾದ ರೀತಿಯ ಛಾಯಾಗ್ರಹಣ, ದೆವ್ವದ ಎಂಟ್ರಿಯಲ್ಲಿನ ಎಫೆಕ್ಟ್ ಎಲ್ಲವೂ ಮನ ಸೆಳೆಯುತ್ತದೆ.