*ತಣ್ಣಗೆ ಕೂತವರನ್ನು ಮೆಲ್ಲನೆ ಕಾಡುವ ‘ವಿಕಲ್ಪ’*
*ಬಹುಕಾಲದ ನಂತರ ಚಂದನವನದಲ್ಲೊಂದು ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರ*
*ಮನೋವ್ಯಾಧಿ ಕಥೆಯ ನಂಟಿಗೆ, ಮನರಂಜನೆ ಗಂಟು!*
*ಚಿತ್ರ: ’ವಿಕಲ್ಪ’*
*ನಿರ್ಮಾಣ: ’ಸುರೂಸ್ ಟಾಕೀಸ್’*
*ನಿರ್ಮಾಪಕರು: ಶ್ರೀಮತಿ ಇಂದಿರಾ ಶಿವಸ್ವಾಮಿ*
*ಕಥೆ, ಚಿತ್ರಕಥೆ, ನಿರ್ದೇಶನ: ಪೃಥ್ವಿರಾಜ್ ಪಾಟೀಲ್*
*ತಾರಾಗಣ: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಹೆಗಡೆ ಮುಂತಾದವರು*
*ಬಿಡುಗಡೆ: 30 ಜನವರಿ 2026*
ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ತಮ್ಮ ಸ್ಟಾರ್ ಕಾಸ್ಟಿಂಗ್, ಬಿಗ್ ಬಜೆಟ್ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಂಟೆಂಟ್, ಟೈಟಲ್ ಮೂಲಕವೇ ಸಿನಿಪ್ರಿಯರನ್ನು ಸದ್ದಿಲ್ಲದೆ ಸೆಳೆಯಲು ಯಶಸ್ವಿಯಾಗಿಬಿಡುತ್ತವೆ. ಇತ್ದೀಗ ಹೀಗೆ ಅಂಥದ್ದೇ ಕಂಟೆಂಟ್ ಮತ್ತು ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್ ಸಿನಿಪ್ರಿಯರನ್ನು ಸೆಳೆಯಲು ಹೊರಟಿರುವ ಚಿತ್ರ ’ವಿಕಲ್ಪ’. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ’ವಿಕಲ್ಪ’ ಒಂದು ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ. ’ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ಈ ಚಿತ್ರ ತೆರೆಗೆ ಬಂದಿದೆ.
*ಏನಿದು ‘ವಿಕಲ್ಪ’ ಕಥಾನಕ..?*
’ವಿಕಲ್ಪ’ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದನ್ನು ಸೈಕಾಲಜಿಕಲ್-ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಒಂದಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ‘ವಿಕಲ್ಪ’ ಚಿತ್ರದ ನಾಯಕ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್.
*’ವಿಕಲ್ಪ’ ಕಥೆ ಏನು ಹೇಳುತ್ತದೆ..?*
ಇನ್ನು ‘ವಿಕಲ್ಪ’ ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಮಲೆನಾಡಿನ ಸುಂದರ ಹಳ್ಳಿಯ ಹಸಿರು ಪರಿಸರದಲ್ಲಿ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಪೃಥ್ವಿ ಎಂಬ ಎಳೆ ವಯಸ್ಸಿನ ಬಾಲಕ ಆಟವಾಡುತ್ತಾ, ಊರ ಹೊರಗಿನ ಬೆಟ್ಟದ ಮೇಲಿರುವ ಬೃಹತ್ ಒಂಟಿ ಮರದ ಬಳಿ ಬರುತ್ತಾನೆ. ಹೀಗೆ ಬಂದ ಹುಡುಗ ಅಲ್ಲಿ ಭಯಾನಕವಾದ ದೃಶ್ಯವೊಂದನ್ನು ನೋಡಿ ಬೆಚ್ಚಿ ಬೀಳುತ್ತಾನೆ. ಚಿಕ್ಕ ವಯಸ್ಸಿನಲ್ಲಿ ತಾನು ಕಂಡ ಆ ದೃಶ್ಯ, ತನಗಾದ ಅನುಭವ ದೊಡ್ಡವನಾದ ಮೇಲೂ ಪೃಥ್ವಿಯನ್ನು ಬೆನ್ನ ಹಿಂದಿನ ನೆರಳಿನಂತೆ, ಕಾಡುತ್ತಲೇ ಬರುತ್ತದೆ. ಇದರಿಂದ ಪೃಥ್ವಿ ಪಾರಾಗುತ್ತಾನಾ..? ಅಧವಾ ಅದೇ ಭಯಕ್ಕೆ ಬಲಿಯಾಗುತ್ತಾನಾ..? ಎಂಬುದೇ ‘ವಿಕಲ್ಪ’ದ ಕಥೆಯ ಒಂದು ಎಳೆ. ಆ ಎಳೆ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು, ತೆರೆಮೇಲೇ ನೋಡುವುದೇ ಹೆಚ್ಚು ಸೂಕ್ತ.
*’ವಿಕಲ್ಪ’ ಅನುಭವ ಹೇಗಿರಲಿದೆ..?*
ಚಿತ್ರ ಬಿಡುಗಡೆಗೂ ಮುನ್ನ ‘ವಿಕಲ್ಪ’ ಚಿತ್ರತಂಡವೇ ಹೇಳಿಕೊಂಡು ಬಂದಿರುವಂತೆ, ಇದೊಂದು ಅಪ್ಪಟ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ. ’ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ಚಿತ್ರವನ್ನು ತೆರೆಗೆ ತಂದಿದೆ ಚಿತ್ರತಂಡ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು, ಭ್ರಮೆ ಮತ್ತು ವಾಸ್ತವದ ನಡುವಿನ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ‘ವಿಕಲ್ಪ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಾಯಕ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್. ಕನ್ನಡದ ಮಟ್ಟಿಗೆ ಹೇಳುವುದಾದರೆ, ಇದೊಂದು ನೋಡುಗರಿಗೆ ಹೊಸಥರದ ಅನುಭವ ಕೊಡುವಂಥ ಚಿತ್ರ ಎನ್ನಲು ಎರಡು ಮಾತಿಲ್ಲ.
*ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ..,*
ಹಿರಿಯ ನಟಿ ಹರಿಣಿ ಶ್ರೀಕಾಂತ್ ಅವರನ್ನು ಹೊರತುಪಡಿಸಿದರೆ, ‘ವಿಕಲ್ಪ’ ಚಿತ್ರದಲ್ಲಿ ತೆರೆಮೇಲೆ ಕಾಣುವ ಎಲ್ಲಾ ಕಲಾವಿದರ ಹೊಸಬರು. ನಾಯಕ ನಟ ಪೃಥ್ವಿರಾಜ್ ಪಾಟೀಲ್, ನಟಿ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಸೇರಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಪಾತ್ರ ನಾಯಕ ನಟ ಪೃಥ್ವಿರಾಜ್ ಪಾಟೀಲ್ (ಪೃಥ್ವಿ) ಅವರ ಪಾತ್ರದ ಸುತ್ತವೇ ನಡೆಯುತ್ತದೆ. ಮೊದಲನೇ ಪ್ರಯತ್ನದಲ್ಲೇ ನಟ ಕಂ ನಿರ್ದೇಶಕನಾಗಿ ಎರಡೂ ಜವಾಬ್ದಾರಿಯನ್ನು ಪೃಥ್ವಿರಾಜ್ ಪಾಟೀಲ್ ಸಮರ್ಥವಾಗಿ ನಿರ್ವಹಿಸಿದ್ದಾರೆ. ನವನಟಿ ನಾಗಶ್ರೀ ಹೆಬ್ಬಾರ್ ಸಹಜ ಅಭಿನಯದಲ್ಲಿ ಇಷ್ಟವಾದರೆ, ಗಣಪತಿ ಹೆಗಡೆ ಉತ್ತರ ಕನ್ನಡದ ಹಾಸ್ಯಪಾತ್ರದಲ್ಲಿ ಇಷ್ಟವಾಗುತ್ತಾರೆ.
ಇನ್ನು ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ ‘ವಿಕಲ್ಪ’ ಚಿತ್ರದ ಹೈಲೈಟ್ ಅಂಶಗಳು ಎನ್ನಬಹುದು. ಅಭಿರಾಮ್ ಗೌಡ ಛಾಯಾಗ್ರಹಣ ಕರಾವಳಿ ಮತ್ತು ಮಲೆನಾಡಿನ ಅಂದವನ್ನು ತೆರೆಮೇಲೆ ಸೊಗಸಾಗಿ ತೋರಿಸಿದೆ. ಯುವ ಪ್ರತಿಭೆ ಸಂವತ್ಸರ ಸಂಗೀತ ಸಂಯೋಜನೆಯ ಹೊಸಥರದ ಹಾಡುಗಳು ಗುನುಗುಡುವಂತಿದೆ.
ಅಂತಿಮವಾಗಿ, ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನಿಮಾಗಳ ಪೈಕಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು. ಅಂಥ ಬೆರಳೆಣಿಕೆಯ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಕೂಡ ಸೇರುವಂಥ ಚಿತ್ರ ಎನ್ನಲು ಅಡ್ಡಿಯಿಲ್ಲ. ಹೊಸಥರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರು ಒಮ್ಮೆ ‘ವಿಕಲ್ಪ’ ಎಂಬ ಹೊಸಬರ ಪ್ರಯತ್ನವನ್ನು ನೋಡಿಬರಬಹುದು.