ಹಳ್ಳಿಗೆ ಒಲಿಯುವ ನಿಗೂಢ ’ದೈವ’ ಕೃಪೆ
ಚಿತ್ರ: ದೈವ ****
ನಿರ್ದೇಶಕ: ಎಮ್.ಜೆ ಜಯರಾಜ್
ನಿರ್ಮಾಣ: ಕಲ್ಪವೃಕ್ಷ ಕ್ರಿಯೇಶನ್ಸ್
ತಾರಾಗಣ: ಎಮ್.ಜೆ ಜಯರಾಜ್, ಬಲರಾಜ್ ವಾಡಿ, ಸುರಭಿ ರೆಡ್ಡಿ, ನೀತು ರೈ ಮೊದಲಾದವರು.
ಆ ಹಳ್ಳಿಗೆ ಕಾಳೇಗೌಡನ ಮಾತೇ ಅಂತಿಮ. ಯಾಕೆಂದರೆ ಆತನ ಮಾತು ಕೇಳದಿದ್ದರೆ ಸಾವಾಗುವುದು ಖಚಿತ. ಅಂಥ ಮಹಾಕ್ರೂರಿ ಕಾಳೇಗೌಡ ಬಡ್ಡಿಗೆ ಸಾಲ ನೀಡಿ ಬಳಿಕ ಮೋಸದಿಂದ ಹಳ್ಳಿಯವರನ್ನೆಲ್ಲ ತನ್ನ ಗುಲಾಮರಂತೆ ಮಾಡುತ್ತಾನೆ. ಈತ ಮತ್ತು ಈತನ ಪುತ್ರ ರುದ್ರೇಗೌಡನಿಗೆ ವಿರುದ್ಧವಾಗಿ ನಿಲ್ಲುವವರು ಯಾರೂ ಇರುವುದಿಲ್ಲ. ಇವೆಲ್ಲದರ ಮಧ್ಯೆ ಹಲವರನ್ನು ಹೊಡೆದುರುಳಿಸಬಲ್ಲ ಗಂಡಸು ಅನಿಸಿದಂಥ ದೇವ ಅಲ್ಲಿರುತ್ತಾನೆ. ವಿಪರ್ಯಾಸ ಏನೆಂದರೆ ದೇವ ಕಾಳೇಗೌಡನ ನಿಯತ್ತಿನ ನಾಯಿಯಂತಿರುತ್ತಾನೆ. ಊರವರ ವಿರೋಧ ಕಟ್ಟಿಕೊಂಡಿರುತ್ತಾನೆ. ಇಂಥದೊಂದು ಶಾಪಗ್ರಸ್ತ ಊರಿನ ಶಾಪ ವಿಮೋಚನೆ ಯಾರು ಮಾಡುತ್ತಾರೆ? ದೈವ ಕೃಪೆ ಹೇಗಾಗುತ್ತದೆ? ಎನ್ನುವುದೇ ಈ ಚಿತ್ರ.
ಸಿನಿಮಾದ ಒಟ್ಟು ಕಥೆ ಮೇಲ್ನೋಟಕ್ಕೆ ಕಂಡಷ್ಟು ಸರಳವೇನೂ ಅಲ್ಲ. ಕಾಳೇಗೌಡ ಹಳ್ಳಿಯ ಜನಗಳ ಮಣ್ಣಿನ ಮೇಲೆ ಕಣ್ಣಿಟ್ಟರೆ ಆತನ ಪುತ್ರ ರುದ್ರ ಹೆಣ್ಣು ಮಕ್ಕಳ ಮೇಲೆ ಕಣ್ಣಿಟ್ಟಿರುತ್ತಾನೆ. ಆತನ ಕಾಮುಕತನದಿಂದಲೇ ಪತ್ನಿಯ ಸಾವು ನಡೆದಿರುತ್ತದೆ. ದೇವ ಯಾಕೆ ಕಣ್ಣು ಮುಚ್ಚಿ ಗೌಡನಿಗೆ ಬೆಂಬಲಿಸುತ್ತಾನೆ ಎನ್ನುವುದಕ್ಕೂ ಒಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ. ಅದು ಆತನನ್ನು ಚಿತ್ರದ ನಾಯಕನಾಗಿ ಸಾರುತ್ತದೆ.
ಈ ಕಥೆಯಲ್ಲಿ ಮೂವರು ನಾಯಕಿಯರಿದ್ದಾರೆ.
ದೇವನ ಹಿನ್ನೆಲೆ ಅರಿಯುವ ಮೊದಲೇ ಆತನನ್ನು ಪ್ರೀತಿಸುವ ಮಾವನ ಮಗಳು ಒಂದೆಡೆಯಾದರೆ, ದೇವನ ಬಗ್ಗೆ ಎಲ್ಲವೂ ಮೊದಲೇ ಗೊತ್ತಿದ್ದು ಪ್ರೇಮಿಸುವಾಕೆ ಗೌಡರ ಮಗಳು ಸೃಷ್ಟಿ. ಮತ್ತೊಂದೆಡೆ ರುದ್ರೇಗೌಡನಿಂದ ಹತ್ಯೆಯಾದ ಪತ್ನಿಯ ಸಾವಿಗೆ ನ್ಯಾಯ ಒದಗಿಸಲು ಬರುವ ಆಕೆಯ ತಂಗಿ ಮೌಲ್ಯಗೂ ದೇವನ ಮೇಲೆ ಪ್ರೀತಿ ಮೂಡುತ್ತದೆ. ಇವರಲ್ಲಿ ದೇವನ ಆಯ್ಕೆ ಯಾರು ಎನ್ನುವುದನ್ನು ಪರದೆಯ ಮೇಲೆ ನೋಡಬಹುದು.
ದೇವನಾಗಿ ಎಮ್.ಜೆ ಜಯರಾಜ್ ಅದ್ಭುತ ನಟನೆ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ಆ್ಯಕ್ಷನ್ ಹೀರೋವಾಗಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಮಾವನ ಮಗಳಾಗಿ ನೀತು ರೈ, ಗೌಡರ ಮಗಳಾಗಿ ಸುರಭಿ ರೆಡ್ಡಿ ಮನ ಸೆಳೆಯುತ್ತಾರೆ. ರುದ್ರನ ನಾದಿನಿ ಮೌಲ್ಯಳಾಗಿ ನಿಶ್ಚಿತ ಶೆಟ್ಟಿಯದು ಮೌಲ್ಯಯುತ ಅಭಿನಯ. ಆರಡಿ ರುದ್ರನಾಗಿ ಅರುಣ್ ಬಚ್ಚನ್ ಬೆಚ್ಚಿ ಬೀಳಿಸುತ್ತಾರೆ.
ಕಾಳೇಗೌಡ ಕಥೆಗೆ ಜೀವಾಳ. ಇಂಥದೊಂದು ಪಾತ್ರಕ್ಕೆ ಜೀವ ತುಂಬಿದವರು ಬಲರಾಜ್ ವಾಡಿ. ಎನ್ ಜಿ ಒ ದವರಾಗಿ ನಟಿಸಿರುವ ಮಾಧ್ಯಮ ಪ್ರತಿನಿಧಿ ವಿಸಿಎನ್ ಮಂಜು ತಾನೋರ್ವ ಉತ್ತಮ ನಟ ಎಂದು ಸಾಬೀತು ಮಾಡಿದ್ದಾರೆ. ದೇವ ಬದಲಾಗುವ ರೀತಿ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ಎಲ್ಲಕ್ಕಿಂತ ಮುಖ್ಯವಾದ ಹೈಲೈಟ್. ಪೂರ್ತಿ ವಿಭಿನ್ನವಾಗಿರುವ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ.