Rakkasapuradhol.Reviews

Friday, February 06, 2026

 

ಸರಣಿ ಹಂತಕನ ಹಿಂದೆ ಸಾಗಿದಾಗ..!

 

 

 

ಚಿತ್ರ: ರಕ್ಕಸ ಪುರದೋಳ್

ನಿರ್ದೇಶಕ: ರವಿ ಸಾರಂಗ

ನಿರ್ಮಾಪಕ: ರವಿವರ್ಮ

ತಾರಾಗಣ: ರಾಜ್ ಬಿ ಶೆಟ್ಟಿ, ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ ಮೊದಲಾದವರು

 

ಸಸ್ಪೆಂಡ್ ಆಗಿದ್ದ ಪೊಲೀಸ್ ಅಧಿಕಾರಿ ಶಿವನನ್ನು ಪೊಲೀಸ್ ಅಧಿಕಾರಿಗಳು ಮತ್ತೆ ಕಾರ್ಯನಿರ್ವಹಣೆಗೆ ಕಳಿಸುತ್ತಾರೆ. ಆದರೆ ಈ‌ ಬಾರಿ ಕಡಿಮೆ ಕ್ರೈಮ್ ರೇಟ್ ಇರುವ ಜಾಗಕ್ಕೆ ಕಳಿಸಿರುತ್ತಾರೆ. ಆದರೆ ಅಲ್ಲಿಗೆ  ಶಿವ ಕಾಲಿಟ್ಟ ಬಳಿಕ ನಡೆಯುವುದೇ ಬೇರೆ. ಹೆಣ್ಣು ಮಕ್ಕಳ ಸರಣಿ ಕೊಲೆಗಳಾಗುತ್ತವೆ. ಇದರ ಹಿಂದಿನ ಕೈವಾಡ ಯಾರದು? ಅದನ್ನು ಶಿವ ಭೇದಿಸುವ ರೀತಿ ಹೇಗೆ ಎನ್ನುವುದೇ ಚಿತ್ರದ ಆಕರ್ಷಕ ಅಂಶ.

 

ಶಿವ ಕಾಲಿಟ್ಟ ಹಳ್ಳಿಯ ಜನ‌ ಕೊಳ್ಳಿದೆವ್ವವನ್ನು ನಂಬುತ್ತಿರುತ್ತಾರೆ. ಅಲ್ಲಿನ‌ ಜನಗಳ‌ ನಂಬಿಕೆಯ ಆಧಾರವಾಗಿ ಸಿದ್ಧನ ಪಾತ್ರವೊಂದಿದೆ. ಮತ್ತೊಂದು ಕಡೆ ಹೆಣ್ಣು ಮಕ್ಕಳೆಂದರೆ ಜೊಲ್ಲು ಸುರಿಸುವ ಶಾಲಾ ಶಿಕ್ಷಕನೋರ್ವ ಇದ್ದಾನೆ. ಕಾಡಲ್ಲಿ ರಾತ್ರಿ ಹೊತ್ತು ಕೊಳ್ಳಿ ಹಿಡಿದು ಓಡಾಡುವ ಹೆಣ ಸುಡುವವ ಇದ್ದಾನೆ. ತನ್ನ ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುವುದನ್ನು ಸಹಿಸದ ಎಂಎಲ್‌ಎ ಇದ್ದಾನೆ. ಇಷ್ಟೆಲ್ಲ ಮಂದಿಯ ಮಧ್ಯೆ ಹೆಣ್ಣು ಮಕ್ಕಳ ಕೊಲೆಗಾರ ಯಾರು ಎನ್ನುವುದೇ ಪ್ರಶ್ನೆಯಾಗಿರುತ್ತದೆ. ಇದೇ ಸಂದೇಹದಲ್ಲೇ ತನಿಖೆ ನಡೆಸುವ ಪೊಲೀಸ್ ಅಧಿಕಾರಿ ಶಿವನಿಗೆ ಸಿಗುವ ಉತ್ತರವೇನು ಎನ್ನುವುದನ್ನು ಆಕರ್ಷಕವಾಗಿ ತೋರಿಸಲಾಗಿದೆ.

ಸಾಮಾನ್ಯ ಪೊಲೀಸ್ ಅಧಿಕಾರಿ ಶಿವನಾಗಿ ಎಂಟ್ರಿ ನೀಡುವ ರಾಜ್ ಬಿ ಶೆಟ್ಟಿಗೆ ಇಲ್ಲಿ ನಟನೆಗೆ ಹೆಚ್ಚು ಅವಕಾಶಗಳಿವೆ. ವೈಯಕ್ತಿಕ ಭ್ರಮೆಯಲ್ಲಿ ಮುಳುಗುವ ಮಾನಸಿಕ ಸ್ಥಿತಿಯನ್ನು ಅದ್ಭುತವಾಗಿ ನಟಿಸಿದ್ದಾರೆ. ಮೊದಲಾರ್ಧ ತಮಾಷೆಯಲ್ಲಿ ಸಾಗಿದರೆ ಎರಡನೇ ಭಾಗ ಹಲವಾರು ತಿರುವುಗಳನ್ನು ಹೊಂದಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಸ್ವಾತಿಷ್ಟ ಕೃಷ್ಣ ಮತ್ತು ಅರ್ಚನಾ ಕೊಟ್ಟಿಗೆ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.

 

 

ಸಿದ್ದನಾಗಿ ಜಿ.‌ಸುರೇಶ್, ಸಿದ್ದನ ಶಿಷ್ಯನಾಗಿ ಜಹಾಂಗೀರ್ ಅಭಿನಯಿಸಿದ್ದಾರೆ. ಶಾಲಾ ಶಿಕ್ಷಕನಾಗಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಲ್ಲಿ ಸಂಗೀತಕ್ಕೆ ಮಾತ್ರ ಸೀಮಿತವಾಗಿಲ್ಲ. ಸಿದ್ದಯ್ಯನ ಹಾಡನ್ನು ಸ್ವತಃ ಹಾಡಿ ಕಾಣಿಸಿಕೊಂಡಿದ್ದಾರೆ. ಸಂಗೀತ ಅಪ್ಯಾಯಮಾನವಾಗಿದೆ. ದ್ವಿತೀಯಾರ್ಧದಲ್ಲಿ ಸಾಕಷ್ಟು ಸಸ್ಪೆನ್ಸ್ ಅಂಶಗಳಿವೆ. ಯಾರೂ ನಿರೀಕ್ಷಿಸಿರದ ಪಾತ್ರಗಳು ಪ್ರವೇಶಿಸುತ್ತವೆ. ಇವುಗಳನ್ನೆಲ್ಲ ಕಟ್ಟಿಕೊಟ್ಟ ರೀತಿ ಅದ್ಭುತವಾಗಿ ಮೂಡಿ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಪ್ರಿಯರು ನೋಡಲೇಬೇಕಾದ ಚಿತ್ರ ಇದು.

 

Copyright@2018 Chitralahari | All Rights Reserved. Photo Journalist K.S. Mokshendra,