*ಮೊದಲ ಪ್ರೀತಿ, ಒಳ್ಳೆ ಪ್ರೀತಿ, ಕೊನೆವರೆಗೂ ಶಾಶ್ವತ*
ಹೊಸಬರ *’ಸುಖೀಭವ’* ಚಿತ್ರದ ಹೆಸರೇ ಹೇಳುವಂತೆ ನೋಡಿದವರೆಲ್ಲರಿಗೂ ಮನಸ್ಸಿಗೆ ಸುಖ ನೀಡುತ್ತದೆ. ಪ್ರೀತಿ, ಭಾವನೆಗಳು ಹಾಸ್ಯ ಹಾಗೂ ಮನರಂಜನೆಂದ ಕೂಡಿದ್ದು, ಫಸ್ಟ್ ಲವ್ ಈಸ್ ಬೆಸ್ಟ್ ಲವ್ ಎನ್ನುವ ಹಾಗೆ ಚಿತ್ರದ ಕಥೆಯು ಅದೇ ರೀತಿಯಲ್ಲಿ ಸಾಗುತ್ತದೆ. ಪ್ರೌಢಶಾಲೆಯಲ್ಲಿ ಇರುವಾಗ ವೈಭವ್ ತಾರಾಳನ್ನು ಇಷ್ಟಪಟ್ಟು ತನ್ನ ಪ್ರೀತಿಯನ್ನು ಆಕೆ ಬಳಿ ಹೇಳಿಕೊಳ್ಳುತ್ತಾನೆ. ಅದಕ್ಕೆ ಅವಳು ನೀನು ಸರಿಯಾಗಿ ಶಾಲೆಗೆ ಬರದೆ, ಪೋಲಿ ಹುಡುಗರೊಂದಿಗೆ ಇರುತ್ತಿಯಾ. ಹೀಗಿದ್ದರೆ ನಿನ್ನನ್ನು ಯಾರು ಇಷ್ಟಪಡೋಲ್ಲ. ಇದೆಲ್ಲಾವನ್ನು ಸರಿಪಡಿಸಿಕೊಂಡು ಬಾ. ಆವಾಗ ನೋಡೋಣ. ಅಲ್ಲಿವರೆಗೂ ನನಗೆ ತೊಂದರೆ ಕೊಡಬೇಡವೆಂದು ಬುದ್ದಿವಾದ ಹೇಳುತ್ತಾಳೆ. ನಾವು ಇಷ್ಟಪಟ್ಟವರನ್ನು ನಮ್ಮನ್ನು ಇಷ್ಟಪಡುತ್ತಾರೆಂದು ಹೇಳಿದ್ದ ಚರ್ಚ್ ಫಾದರ್ ಬಳಿ ಪ್ರಶ್ನೆ ಮಾಡುತ್ತಾನೆ. ಓದಿಲ್ಲದ ಹುಡುಗರನ್ನು ಯಾರೂ ಇಷ್ಟಪಡೋಲ್ಲ. ಎಲ್ಲರಂತೆ ನೀನು ಸಹ ಚೆನ್ನಾಗಿ ಓದು ಎಂದು ಅವರು ಹೇಳುತ್ತಾರೆ. ಇದನ್ನೇ ಛಾಲೆಂಜ್ ಆಗಿ ತೆಗೆದುಕೊಂಡು ಭವಿಷ್ಯದಲ್ಲಿ ಶಿಕ್ಷಣ ಮುಗಿಸಿ ಶ್ರೀಮಂತನಾಗುತ್ತಾನೆ. ಮುಂದೆ ತಾರಾಳನ್ನು ಹುಡುಕುತ್ತಾನೆ. ಅವಳು ಸಿಗುತ್ತಾಳಾ? ಇದರ ಮಧ್ಯೆ ಅಪ್ಪನಿಂದ ದೂರವಾಗಿದ್ದ ವೈಭವ್‌ಗೆ ಮರಳಿ ಅಪ್ಪ ಸಿಗುತ್ತಾರಾ? ಇದೆಲ್ಲಾದಕ್ಕೂ ಉತ್ತರ ಚಿತ್ರಮಂದಿರಕ್ಕೆ ಬಂದರೆ ಸಿಗುತ್ತದೆ.
ಎನ್.ಕೆ.ರಾಜೇಶ್ ನಾಯ್ಡು ಮೊದಲ ಪ್ರಯತ್ನದಲ್ಲಿಯೇ ಒಳ್ಳೆ ಕಥೆ, ಇದಕ್ಕೆ ಪೂರಕವಾಗಿ ಅರ್ಥಪೂರ್ಣ ಸಂಭಾಷಣೆ, ಹೂ ಪೋಣಿಸಿದಂತೆ ಚಿತ್ರಕಥೆ ಹಣೆದಿರುವುದು ಸಿನಿಮಾದಲ್ಲಿ ಕಾಣಿಸುತ್ತದೆ. ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್, ಮಗನ ಹೆಸರಾದ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
ಮಹೇಂದ್ರ ನಾಯಕನಾಗಿ ಗಮನ ಸೆಳೆಯುತ್ತಾರೆ. ಸುಶ್ಮಿತ ನಾಯಕ್ ಹಾಗೂ ವಿಯಾನ್‌ಶಿ ಹೆಗ್ಡೆ ನಾಯಕಿಯರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಅಪ್ಪನಾಗಿ ರವಿಶಂಕರ್‌ಗೌಡ, ನಗಿಸಲು ತುಕಾಲಿಸಂತು, ಮೈತ್ರಿಜಗ್ಗು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ಸುನಿಲ್ ಪುರಾಣಿಕ್ ಮುಂತಾದವರು ಅಭಿನಯಿಸಿದ್ದಾರೆ. ಶುಭಮ್ ಸಂಗೀತ ಹಾಗೂ ಕಂಠದಾನದಲ್ಲಿ ಎರಡು ಹಾಡು ಮತ್ತು ನಟ ಶರಣ್ ’ಬೇಡ ಮಚ್ಚಾ ಬೇಡ’ ಸಾಲಿನ ಗೀತೆಗೆ ಧ್ವನಿಯಾಗಿರುವುದು ವಿಶೇಷ. ಛಾಯಾಗ್ರಹಣ ಎಸ್.ಬಿ.ಮಂಜುನಾಥ್ ನಾಯಕ್ ಕ್ಯಾಮಾರ ಕೆಲಸ ಸೊಗಸಾಗಿದೆ. ಒಮ್ಮೆ ನೋಡಬಹುದಾದ ಚಿತ್ರವೆಂದು ಹೇಳಬಹುದು.