Nenapugala Maatu Madhura.Reviews

Wednesday, February 04, 2026

 

ಕಲರ್ ಕಲರ್ ನೆನಪುಗಳ ಮೋಹಕ ಚಿತ್ರ

 

 

ಚಿತ್ರ: ನೆನಪುಗಳ ಮಾತು ಮಧುರ

ನಿರ್ದೇಶನ: ಅಫ್ಜಲ್ ಸೂಪರ್ ಸ್ಟಾರ್ಸ್

ನಿರ್ಮಾಣ: 7 ರಾಜ್

ತಾರಾಗಣ: ಅಫ್ಜಲ್, ಸೆವೆನ್ ರಾಜ್ ಮೊದಲಾದವರು.

 

ಬಾಲ್ಯದಿಂದ ಆತ್ಮೀಯರಾಗಿದ್ದ ನಾಲ್ವರು ಮಧ್ಯ ವಯಸ್ಕರು ಒಂದು ಅಂತರದ ಬಳಿಕ ಪರಸ್ಪರ ಭೇಟಿಯಾಗಲು ಬಯಸುತ್ತಾರೆ. ಅದಕ್ಕಾಗಿ ಅವರು ರೆಸಾರ್ಟ್ ಒಂದನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅಲ್ಲಿ ನಾಲ್ಕು ಮಂದಿ ಹಂಚಿಕೊಳ್ಳುವ ಕಥೆ ಏನು? ಕೊನೆಯಲ್ಲಿ ಅದು ಹೇಗೆ ಒಂದಕ್ಕೊಂದು ಪೂರಕ ಆಗಿರುತ್ತದೆ ಎನ್ನುವುದೇ ಈ ಸಿನಿಮಾದ ಕ್ಲೈಮ್ಯಾಕ್ಸ್. ರಂಜನೀಯವಾಗಿ ಆರಂಭವಾಗುವ ಕಥೆಯನ್ನು ಸ್ವಾರಸ್ಯಕರವಾಗಿ ಕೊನೆಗೊಳಿಸಲಾಗಿದೆ.

 

ಮೊದಲ‌ ಸ್ನೇಹಿತನ ಅನುಭವ ತನಗೆ ಸಾಲ ಕೊಟ್ಟ ವ್ಯಕ್ತಿಯ ಲಫಂಗತನಕ್ಕೆ ಮಾಡುವ ಶಾಸ್ತಿಯಾಗಿರುತ್ತದೆ. ಎರಡನೆಯ ಸ್ನೇಹಿತನ ಅನುಭವ ಮರ್ಡರ್ ಮಿಸ್ಟರಿಯೊಂದಿಗೆ ಕೊನೆಯಾಗುತ್ತದೆ. ಹೀಗೆ ನಾಲ್ವರು ಸ್ನೇಹಿತರ ಅನುಭವಗಳು ಕೂಡ‌ ಒಂದೊಂದು ಕಥೆಯನ್ನು ಹೇಳುತ್ತವೆ. ಅಂದು ಘಟನೆ ನಡೆದಾಗ ಆದಂಥ ಆತಂಕ ಮತ್ತು ಇಂದು ಬರೀ ನೆನಪಾಗಿ ಉಳಿದಾಗ ಮೂಡುವ ತಮಾಷೆ ಎರಡನ್ನೂ ಕಥೆಯಲ್ಲಿ ತೋರಿಸಲಾಗಿದೆ. ಆದರೆ ಕೊನೆಯ ಕಥೆ ಮಾತ್ರ ನಾಲ್ವರ ಪಾಲಿಗೆ ಈ‌ ಕ್ಷಣಕ್ಕೂ ಪ್ರಸ್ತುತ ಅನಿಸುಂತಾಗುತ್ತದೆ. ಆ ಕಥೆ ಏನು? ಅದು ಹೇಗೆ ಪ್ರಸ್ತುತವಾಗುತ್ತದೆ ಎನ್ನುವುದನ್ನು ಪರದೆಯ ಮೇಲೆ ನೋಡಿ ತಿಳಿಯುವುದೇ ಸೊಗಸು.

ನಿರ್ದೇಶಕರಾಗಿ ಅಫ್ಜಲ್ ಅವರಿಗೆ ಇದು ಮೊದಲ‌ ಸಿನಿಮಾ. ಆದರೆ ಅಂಥದೊಂದು ಭಾವನೆಯೇ ಮೂಡಿಸದಂತೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ತಮ್ಮ ಬಹುಮುಖ‌ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣದಲ್ಲಿ ನಟಿಯರು ಗ್ಲಾಮರಸ್ಸಾಗಿ ಕಂಗೊಳಿಸಿದ್ದಾರೆ. ನಿರ್ಮಾಪಕ‌ ಸೆವೆನ್ ರಾಜ್ ನಟಿಸಿರುವ ಕುಬೇರಪ್ಪನ ಪಾತ್ರಕ್ಕೆ ವೈವಿಧ್ಯಮಯ ಭಾವಗಳನ್ನು ಪ್ರದರ್ಶಿಸುವ ಅವಕಾಶ ಲಭಿಸಿದೆ. ಅವರ ಪಾತ್ರದ ಹಿನ್ನೆಲೆಯಲ್ಲಿ ಒಂದು ಪಶ್ಚಾತಾಪದ ಕಥೆಯನ್ನು ಕೂಡ ಹೇಳಲಾಗಿದೆ.

 

ಮೊದಲ‌ ನೋಟಕ್ಕೆ ಯೌವನದಲ್ಲಿ ದಾರಿ ತಪ್ಪಿದ ಯುವಕರ ಕಥೆಯನ್ನು ಹೇಳುವ ಚಿತ್ರ. ಆದರೆ ಕೊನೆಯಲ್ಲಿ ಉತ್ತಮ ಸಂದೇಶದೊಂದಿಗೆ ಸಿನಿಮಾ ಪೂರ್ತಿಯಾಗುತ್ತದೆ. ಮನರಂಜನಾತ್ಮಕ ಚಿತ್ರಕ್ಕೆ ಬೇಕಾದ ಹಾಡುಗಳು ರಾಜು ಎಮ್ಮಿಗನೂರು ಸಂಗೀತದಲ್ಲಿ ಮೂಡಿ ಬಂದಿದೆ. ಎರಡು ಗಂಟೆಗಳ ಕಾಲ ಲವಲವಿಕೆಯಿಂದ ಕಳೆಯಲು ಬಯಸಯವವರು ಖಂಡಿತವಾಗಿ ಈ‌ ಚಿತ್ರ ನೋಡಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,